ಡೆಹ್ರಾಡೂನ್: 4ನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ರಾತ್ರಿ ಉತ್ತರಾಖಂಡ್ ನ ಡೆಹ್ರಾಡೂನ್ ನ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶಿವಾನಿ ಬನ್ಸಾಲ್(22) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಆತ್ಮಹತ್ಯೆಗೆ ಶರಣಾಗುವ ಮೊದಲು ಶಿವಾನಿ 12 ಸಾಲುಗಳ ಡೆತ್‍ನೋಟ್ ಬರೆದಿದ್ದಾರೆ. ನಾನು ಈಗ ಬೇಸತ್ತು ಹೋಗಿದ್ದೀನಿ. ನಾನು ಎಂಬಿಬಿಎಸ್ ಮಾಡಬೇಕೆಂದುಕೊಂಡಿರಲಿಲ್ಲ. ನನಗೆ ಕ್ರಿಕೆಟ್ ಆಡಲು ಇಷ್ಟವಿತ್ತು ಎಂದು ಯುವತಿ ಡೆತ್‍ನೋಟ್ ನಲ್ಲಿ ಹೇಳಿದ್ದಾರೆ.
ಶಿವಾನಿ ಬನ್ಸಾಲ್ ಉತ್ತರಖಂಡ್ ನ ಉಧಾಮ್ ಸಿಂಗ್ ನಗರ ಜಿಲ್ಲೆಯ ಜಸ್ಪುರ್ ನ ನಿವಾಸಿಯಾಗಿದ್ದು, ಭಾನುವಾರ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬರುತ್ತಿತ್ತು ಎಂದು ಶಿವಾನಿ ಬೇಸರದಿಂದ ಇದ್ದರು. ಆಕೆಗೆ ಪರೀಕ್ಷೆಗಳೆಂದರೆ ಭಯವಾಗುತ್ತಿತ್ತು. ಅಷ್ಟೇ ಅಲ್ಲದೇ ಶಿವಾನಿ ಖಿನ್ನತೆಯಿಂದ ಬಳಲುತ್ತಿದ್ದರು ಹಾಗೂ ನೇತ್ರಶಾಸ್ತ್ರ ಪರೀಕ್ಷೆಗೆ ಕೂಡ ಆಕೆ ಬರಲಿಲ್ಲ. ಶನಿವಾರ ರಾತ್ರಿ ಕಾಲೇಜಿನ ಹಾಸ್ಟೆಲ್ ರೂಮಿನೊಳಗೆ ಬೀಗ ಹಾಕಿಕೊಂಡಿದ್ದಳು ಎಂದು ಶಿವಾನಿ ಸ್ನೇಹಿತರು ತಿಳಿಸಿದ್ದಾರೆ.
ಕಾಲೇಜಿನ ಆಡಳಿತ ಮಂಡಳಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಚಿಕ್ಕ ಕಿಟಕಿಯಿಂದ ಹಾಸ್ಟೆಲ್ ರೂಮಿನೊಳಗೆ ಹೋಗಿದ್ದಾರೆ. ಆಗ ಶಿವಾನಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶಿವಾನಿ 10ನೇ ಹಾಗೂ 12ನೇ ತರಗತಿಯಲ್ಲಿದ್ದಾಗ ಟಾಪರ್ ಆಗಿದ್ದರು. ಆದರೆ ಕಾಲೇಜಿನಲ್ಲಿ ಆಕೆಗೆ ಸಾಕಷ್ಟು ಒತ್ತಡವಿತ್ತು. ಓದಿನಲ್ಲಿ 1 ವರ್ಷ ಹಿಂದೆ ಇದ್ದರು. ಅಟೆಂಡೆನ್ಸ್ ಕೂಡ ಕಡಿಮೆಯಿದ್ದು, ಮೊದಲ ವರ್ಷದಲ್ಲಿ ನಡೆದ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಅನುತ್ತೀರ್ಣವಾಗಿದ್ದರು ಎಂದು ಕಾಲೇಜಿನ ಪ್ರಿನ್ಸಿಪಲ್ ಡಾ. ಸಿಎಂಎಸ್ ರಾವತ್ ತಿಳಿಸಿದ್ದಾರೆ.
ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ಯಾರೋ ಪ್ರಚೋದನೆ ನೀಡಿರಬಹುದು ಎಂದು ಶಿವಾನಿ ತಂದೆ ಹರೀಶ್ ಬನ್ಸಾಲ್ ಶಂಕಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 2008ರಲ್ಲಿ ಈ ಕಾಲೇಜಿನಲ್ಲಿ ಮೆಡಿಕಲ್ ಕೋರ್ಸ್ ಶುರುವಾಗಿದ್ದು, ಶಿವಾನಿ ಪ್ರಕರಣವೇ ಮೊದಲ ಆತ್ಮಹತ್ಯೆ ಕೇಸ್ ಆಗಿದೆ ಎಂದು ವರದಿಯಾಗಿದೆ.