ಉಪ್ಪಿ ಅಪ್ಪಟ ಅಭಿಮಾನಿಯ ಆಸಿಂಕೋಜಿಲ್ಲ!

Public TV
2 Min Read
Aasimkozilla Upendra

ಹೊಸ ವರ್ಷದ ಹೊಸ್ತಿಲಾಚೆಗೂ ಕನ್ನಡ ಚಿತ್ರರಂಗಕ್ಕೆ ಹೊಸತನದ ಗಂಧ ಗಾಳಿ ಅನೂಚಾನವಾಗಿ ಹಬ್ಬಿಕೊಂಡಿದೆ. ಕನ್ನಡ ಚಿತ್ರರಂಗದ ಘನತೆಯನ್ನು ಪರಭಾಷಾ ಚಿತ್ರರಂಗದ ಮಂದಿಯೂ ಕಣ್ಣರಳಿಸಿ ನೋಡಬೇಕೆಂಬ ಮನಸ್ಥಿತಿ ಇದೆಯಲ್ಲಾ? ಅಂಥಾದ್ದರ ಭೂಮಿಕೆಯಲ್ಲಿ ಎಳಿಕೊಂಡ ಸಿನಿಮಾಗಳು ಪ್ರೇಕ್ಷಕರಲ್ಲೊಂದು ಬೆರಗು ಮೂಡಿಸುವಷ್ಟು ಶಕ್ತವಾಗಿರುತ್ತವೆಂಬ ನಂಬಿಕೆ ಬಲವಾಗಿದೆ. ಅದನ್ನು ಈ ವರ್ಷಾರಂಭದಲ್ಲಿಯೇ ನಿಜವಾಗಿಸುವಂತಿರೋ ‘ಆಸಿಂಕೋಜಿಲ್ಲ’ ಎಂಬ ಚಿತ್ರ ಈ ವಾರ ಪ್ರೇಕ್ಷಕರ ಮುಂದೆ ಪ್ರತ್ಯಕ್ಷವಾಗಲಿದೆ.

ಹೆಸರಲ್ಲಿಯೇ ಅದೆಂಥಾದ್ದೋ ನಿಗೂಢ, ಆಕರ್ಷಣೆಯನ್ನು ಬಚ್ಚಿಕೊಂಡಿರೋ ಆಸಿಂಕೋಜಿಲ್ಲ ಶಮನ್ ನಿರ್ದೇಶನದ ಚೊಚ್ಚಲ ಚಿತ್ರ. ವಿಶೇಷವೆಂದರೆ ಅವರು ರಿಯಲ್ ಸ್ಟಾರ್ ಉಪೇಂದ್ರರ ಅಪ್ಪಟ ಅಭಿಮಾನಿ. ಉಪ್ಪಿ ಅಂದರೇನೇ ಹೊಸತನ ಎಂಬಂಥಾ ಭಾವನೆ ಇದೆ. ಈ ಕಾರಣದಿಂದಲೇ ಹೊಸದಾಗಿ ಎಂಟ್ರಿ ಕೊಡುವ ಅದೆಷ್ಟೋ ಯುವ ನಿರ್ದೇಶಕರ ಪಾಲಿಗೆ ಉಪೇಂದ್ರ ಎವರ್ ಗ್ರೀನ್ ರೋಲ್ ಮಾಡೆಲ್ ಬಹುಶಃ ಶಮನ್ ನಿರ್ದೇಶನದ ವಿಚಾರದಲ್ಲಿ ಉಪ್ಪಿಯನ್ನೇ ಆರಾಧಿಸದೇ ಹೋಗಿದ್ದರೆ ಒಂದು ಹೊಸ ಬಗೆಯ ಕಥೆಯೊಂದಿಗೆ ಆಸಿಂಕೋಜಿಲ್ಲ ಎಂಬ ಕಥೆ ರೂಪುಗೊಳ್ಳುವುದು ಸಾಧ್ಯವೇ ಇರುತ್ತಿರಲಿಲ್ಲ.

Aasimkozilla e

ಬೆಂಗಳೂರಿನವರೇ ಆದ ಶಮನ್‍ಗೆ ಉಪ್ಪಿಯ ಗುಂಗು ಹತ್ತಿಕೊಂಡಿದ್ದು ಶಾಲಾ ಕಾಲೇಜು ದಿನಗಳಲ್ಲಿಯೇ. ಉಪೇಂದ್ರ ಕಾರಣದಿಂದಲೇ ಎಲ್ಲವನ್ನೂ ಭಿನ್ನ ದೃಷ್ಟಿಕೋನದಿಂದ ನೋಡುವ ಕಲೆ ಸಿದ್ಧಿಸಿಕೊಂಡಿದ್ದ ಶಮನ್ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪರಭಾಷಾ ಚಿತ್ರರಂಗದ ಮಂದಿಯೂ ಬೆಕ್ಕಸ ಬೆರಗಾಗುವಂತಿರಬೇಕೆಂಬ ಹಂಬಲದೊಂದಿಗೇ ಈ ಕಥೆಯನ್ನು ಸಿದ್ಧಪಡಿಸಿದ್ದರಂತೆ. ಹಾಗಂತ ಪ್ರಯೋಗಾತ್ಮಕ ವಿಚಾರಗಳನ್ನು ಕೈಗೆತ್ತಿಕೊಂಡು ಕೆಲ ವರ್ಗದ ಪ್ರೇಕ್ಷಕರಿಗೆ ಮಾತ್ರವೇ ಆಸಿಂಕೋಜಿಲ್ಲ ಚಿತ್ರವನ್ನು ಸೀಮಿತಗೊಳಿಸುವ ಇರಾದೆಯೂ ಅವರಿಗಿರಲಿಲ್ಲ. ಈ ದೆಸೆಯಿಂದ ಎಲ್ಲ ವರ್ಗ, ವಯೋಮಾನದ ಪ್ರೇಕ್ಷಕರಿಗೂ ಇಷ್ಟವಾಗುವಂಥಾ ಹೂರಣದೊಂದಿಗೆ ಈ ಸಿನಿಮಾವನ್ನು ಅಣಿಗೊಳಿಸಿದ್ದಾರಂತೆ.

Aasimkozilla bb

ಸೋಮಶೇಖರ ರೆಡ್ಡಿ ನಿರ್ಮಾಣ ಮಾಡಿರುವ ಆಸಿಂಕೋಜಿಲ್ಲ ಎಂಬ ಪದವೇ ಎಲ್ಲರೂ ತಲೆ ಕೆದರಿಕೊಂಡು ಅರ್ಥ ಹುಡುಕುವಂತೆ ಮಾಡಿದೆ. ತೀರಾ ಗೂಗಲ್ಲಿನಲ್ಲಿ ಹುಡುಕಿದರೂ ಈ ಚಿತ್ರದ ವಿವರಗಳು ಮಾತ್ರವೇ ಸಿಗುತ್ತವೆ. ಹಾಗಾದರೆ ಈ ಪದದ ಅರ್ಥವೇನು? ಕಥಾ ಹಂದರವೆಂಥಾದ್ದೆಂಬ ಪ್ರಶ್ನೆಗಳು ಪ್ರೇಕ್ಷಕರ ವಲಯದಲ್ಲಿ ಮಿಜಿಗುಡಲಾರಂಭಿಸಿವೆ. ಅದೆಲ್ಲವನ್ನೂ ಗೌಪ್ಯವಾಗಿಡುವ ಮೂಲಕ ಚಿತ್ರತಂಡ ಕುತೂಹಲವನ್ನು ಮತ್ತಷ್ಟು ತೀವ್ರವಾಗಿಸಿದೆ. ಈ ವಾರವೇ ಅಂಥಾ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ. ಆ ಉತ್ತರ ಅತ್ಯಾಕರ್ಷಕವಾಗಿರಲಿದೆ ಎಂಬ ಭರವಸೆಯನ್ನಂತೂ ಚಿತ್ರತಂಡ ಆತ್ಮವಿಶ್ವಾಸದಿಂದಲೇ ಕೊಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *