ಸುರೇಶ್ ಕುಮಾರ್ ಕಚೇರಿಗೆ ಮುತ್ತಿಗೆ, ಪೊರಕೆ ಸೇವೆ- ಎಎಪಿ ಎಚ್ಚರಿಕೆ

Public TV
1 Min Read
Bengaluru aap

ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕೋವಿಡ್ ಸಂತ್ರಸ್ತರಿಗೆ ಹದಿನೈದು ದಿನಗಳೊಳಗೆ ಪರಿಹಾರಧನ ವಿತರಿಸದಿದ್ದರೆ ಬೃಹತ್ ಮೆರವಣಿಗೆ ಮೂಲಕ ಶಾಸಕ ಸುರೇಶ್ ಕುಮಾರ್ ಕಚೇರಿಗೆ ಮುತ್ತಿಗೆ ಹಾಕಿ ಪೊರಕೆ ಸೇವೆ ಮಾಡಲು ಆಮ್ ಆದ್ಮಿ ಪಾರ್ಟಿ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಅಧ್ಯಕ್ಷರಾದ ಬಿ.ಟಿ.ನಾಗಣ್ಣ, ಕೋವಿಡ್ ಪರಿಹಾರ ಕೋರಿ ರಾಜಾಜಿನಗರ ಕ್ಷೇತ್ರದಲ್ಲಿ ಸೇವಾ ಸಿಂಧು ಮೂಲಕ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಹೆಚ್ಚಿನವರು ಮನೆಗೆಲಸದವರು, ಗಾರ್ಮೆಂಟ್ಸ್ ನೌಕರರು, ಕ್ಯಾಬ್ ಚಾಲಕರು, ದಿನಗೂಲಿ ನೌಕರರು ಹಾಗೂ ಬಡ-ಮಧ್ಯಮ ವರ್ಗದವರಾಗಿದ್ದಾರೆ. ಕ್ಷೇತ್ರದಲ್ಲಿ 50ಕ್ಕೂ ಹೆಚ್ಚು ಜನರು ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಈ ವರೆಗೆ ಒಬ್ಬರಿಗೂ ಒಂದು ರೂಪಾಯಿ ಪರಿಹಾರ ದೊರೆತಿಲ್ಲ. ಕೋವಿಡ್‍ನಿಂದ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರ ಘೋಷಿಸಿರುವ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಕ್ಷೇತ್ರದ ಸಂತ್ರಸ್ತರಿಗೆ ಕೊಡಿಸಲು ಶಾಸಕ ಸುರೇಶ್ ಕುಮಾರ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಹೊಸ ಇತಿಹಾಸ ಸೃಷ್ಟಿಸಿದ ಜಮೀರ್ ಪುತ್ರ ಝೈದ್ ಖಾನ್ ನಟನೆಯ ‘ಬನಾರಸ್’ ಚಿತ್ರ

Bengaluru APP

ಬೆಂಗಳೂರು ನಗರದ ಆಮ್ ಆದ್ಮಿ ಪಾರ್ಟಿಯ ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿ ಮಾತನಾಡಿ, ಕೋವಿಡ್‍ನಿಂದ ದುಡಿಮೆ, ಉದ್ಯೋಗ, ಕುಟುಂಬ ಸದಸ್ಯರನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಜನರಿಗೆ ಪರಿಹಾರ ವಿತರಿಸಲು ಸತಾಯಿಸುತ್ತಿರುವ ಸುರೇಶ್ ಕುಮಾರ್‍ರವರಿಗೆ ನಾಚಿಕೆಯಾಗಬೇಕು. ಅವರ ನಿಷ್ಕ್ರಿಯತೆಯಿಂದಾಗಿ ರಾಜಾಜಿನಗರ ಕ್ಷೇತ್ರವು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಜನರು ಸರಿಯಾದ ಮೂಲಸೌಕರ್ಯವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಜನರ ಹಿತಾಸಕ್ತಿಯನ್ನು ಮರೆತಿರುವ ಶಾಸಕರಿಗೆ ಆಮ್ ಆದ್ಮಿ ಪಾರ್ಟಿಯು ತಕ್ಕ ಪಾಠ ಕಲಿಸಲಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ಬೃಹತ್ ಮೆರವಣಿಗೆಯಲ್ಲಿ ಸಾಗಿ ಅವರ ಕಚೇರಿಗೆ ಮುತ್ತಿಗೆ ಹಾಕಿ ಪೊರಕೆ ಸೇವೆ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು. ರಾಜಾಜಿನಗರದಲ್ಲಿ ಕೋವಿಡ್‍ನಿಂದ ಮೃತಪಟ್ಟವರ ಕುಟುಂಬಗಳ ನಾಲ್ವರು ಸಂತ್ರಸ್ತರು ಹಾಗೂ 30 ಸೇವಾಸಿಂಧು ಅರ್ಜಿದಾರರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *