– ಯಾರಿಗೂ ವೈಯಕ್ತಿಕವಾಗಿ ಹಣ ನೀಡದ ಕಾಂಗ್ರೆಸ್
– ಕೇಜ್ರಿವಾಲ್‌ಗೆ ಆಪ್‌ನಿಂದ 10 ಲಕ್ಷ ರೂ.
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ (Delhi Election) ಸ್ಪರ್ಧಿಸಿದ ತನ್ನ 68 ಅಭ್ಯರ್ಥಿಗಳಿಗೆ ಬಿಜೆಪಿ (BJP) ತಲಾ 25 ಲಕ್ಷ ರೂ.ಗಳಂತೆ ಒಟ್ಟು 17 ಕೋಟಿ ರೂ.ಗಳನ್ನು ನೀಡಿದರೆ ಆಪ್ (AAP) ತನ್ನ 70 ಅಭ್ಯರ್ಥಿಗಳ ಪೈಕಿ 23 ಜನರಿಗೆ ಒಟ್ಟು 2.23 ಕೋಟಿ ರೂ.ಗಳನ್ನು ನೀಡಿದೆ.
ಕಾಂಗ್ರೆಸ್ (Congress) ತನ್ನ 70 ಅಭ್ಯರ್ಥಿಗಳ ಪೈಕಿ ಯಾರಿಗೂ ವೈಯಕ್ತಿಕವಾಗಿ ಹಣವನ್ನು ನೀಡಿಲ್ಲ. ಆಪ್ 10 ಲಕ್ಷ ರೂ.ಗಳನ್ನು ತನ್ನ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಿದೆ.
ದೆಹಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ಪಕ್ಷಗಳು ಸಲ್ಲಿಸಿದ ವೆಚ್ಚದ ವಿವರಗಳು ಪ್ರಕಟವಾಗಿದೆ. ಚುನಾವಣಾ ಪ್ರಚಾರಕ್ಕಾಗಿ ಆಪ್ ಒಟ್ಟು 14.51 ಕೋಟಿ ರೂ.ಗಳನ್ನು ಖರ್ಚು ಮಾಡಿದರೆ ಕಾಂಗ್ರೆಸ್ ಪ್ರಚಾರಕ್ಕಾಗಿ 46.18 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.
ಬಿಜೆಪಿ ಇನ್ನೂ ತನ್ನ ಪೂರ್ಣ ವೆಚ್ಚದ ವರದಿಯನ್ನು ಸಲ್ಲಿಸಿಲ್ಲ. ವೆಚ್ಚದ ವರದಿಯಲ್ಲಿ ತನ್ನ ಎಲ್ಲಾ ಅಭ್ಯರ್ಥಿಗಳಿಗೆ ಸಮಾನವಾಗಿ ಹಣವನ್ನು ನೀಡಿದ್ದನ್ನು ಮಾತ್ರ ಉಲ್ಲೇಖಿಸಿದೆ. ಇದನ್ನೂ ಓದಿ: ಡಿಕೆ ಬ್ರದರ್ಸ್ ಬುಡಕ್ಕೆ ಬಂತು ನ್ಯಾಷನಲ್ ಹೆರಾಲ್ಡ್ ಕೇಸ್
ದೆಹಲಿಯಲ್ಲಿ ಒಬ್ಬ ಅಭ್ಯರ್ಥಿ ಗರಿಷ್ಠ 40 ಲಕ್ಷ ರೂ.ಗಳನ್ನು ಖರ್ಚು ಮಾಡಬಹುದು. ಆದರೆ ಪಕ್ಷಗಳು ಮಾಡುವ ಖರ್ಚಿಗೆ ಯಾವುದೇ ಮಿತಿ ಇಲ್ಲ. ಒಂದು ಪಕ್ಷವು ಒಂದು ಕ್ಷೇತ್ರದಲ್ಲಿ ಎಷ್ಟು ಬೇಕಾದರೂ ಹಣವನ್ನು ಖರ್ಚು ಮಾಡಬಹುದು. ಪಕ್ಷಗಳು ಸಲ್ಲಿಸಿದ ವೆಚ್ಚದ ವಿವರಗಳು ಪಕ್ಷದ ಅಭ್ಯರ್ಥಿಗಳು ಖರ್ಚು ಮಾಡಿದ ಹಣವನ್ನು ಪ್ರತಿಬಿಂಬಿಸುವುದಿಲ್ಲ.
ಆಪ್ ಮಾಧ್ಯಮ ಜಾಹೀರಾತುಗಳು, ಪೋಸ್ಟರ್‌ಗಳು ಮತ್ತು ನೋಟಿಸ್‌ಗಳಿಗಾಗಿ 12.12 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ತನ್ನ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಯ ಜಾಹೀರಾತುಗಳಿಗೆ 16 ಲಕ್ಷ ರೂ., ಗೂಗಲ್ ಜಾಹೀರಾತುಗಳಿಗಾಗಿ 2.24 ಕೋಟಿ ರೂ., ಫೇಸ್‌ಬುಕ್‌ನಲ್ಲಿ ಪ್ರಚಾರಕ್ಕಾಗಿ 73.57 ಲಕ್ಷ ರೂ.ಗಳನ್ನು ವೆಚ್ಚ ಮಾಡಿದೆ.
ಬಿಜೆಪಿಯ ಹರೀಶ್ ಖುರಾನಾ ವಿರುದ್ಧ ಸೋತ ತನ್ನ ಮೋತಿ ನಗರ ಅಭ್ಯರ್ಥಿ ಶಿವ ಚರಣ್ ಗೋಯೆಲ್ ಅವರಿಗೆ ಪಕ್ಷವು ಅತಿ ಹೆಚ್ಚು 39 ಲಕ್ಷ ರೂ.ಗಳನ್ನು ನೀಡಿದೆ. ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕೇವಲ 10 ಲಕ್ಷ ರೂ.ಗಳನ್ನು ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಅತಿಶಿ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಲಾ 20 ಲಕ್ಷ ರೂ.ಗಳನ್ನು ಪಡೆದರೆ, ಗೋಪಾಲ್ ರೈ 24.75 ಲಕ್ಷ ರೂ.ಗಳನ್ನು, ಸೌರಭ್ ಭಾರದ್ವಾಜ್ 22.8 ಲಕ್ಷ ರೂ.ಗಳನ್ನು ಮತ್ತು ಸತ್ಯೇಂದರ್ ಜೈನ್ 23 ಲಕ್ಷ ರೂ.ಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ – ನಂಗೆ ಮದ್ವೆ ಬೇಡ ಎಂದ ವಧು, ವರ ಶಾಕ್
ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಪ್ರಚಾರಕ್ಕಾಗಿ ಸುಮಾರು 5.94 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದರೆ, ಮಾಧ್ಯಮ ಜಾಹೀರಾತು ಮತ್ತು ಪಠ್ಯ ಸಂದೇಶಗಳಿಗಾಗಿ 17.93 ಕೋಟಿ ರೂ.ಗಳನ್ನು ಮತ್ತು ಪೋಸ್ಟರ್‌ಗಳು ಮತ್ತು ಇತರ ಪ್ರಚಾರ ಸಾಮಗ್ರಿಗಳಿಗಾಗಿ 18 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಸಾರ್ವಜನಿಕ ಸಭೆಗಳನ್ನು ನಡೆಸಲು 4.85 ಕೋಟಿ ರೂ. ಮತ್ತು ಸ್ಟಾರ್ ಪ್ರಚಾರಕರ ವೆಚ್ಚಕ್ಕಾಗಿ 37,104 ರೂ.ಗಳನ್ನು ಖರ್ಚು ಮಾಡಿದೆ.
ಗ್ಯಾರಂಟಿ ಕಾರ್ಡ್‌ಗಳನ್ನು ಮುದ್ರಿಸಲು 2.79 ಕೋಟಿ ರೂ., ಲೈವ್ ಸ್ಟ್ರೀಮಿಂಗ್ ಕಾರ್ಯಕ್ರಮಗಳಿಗಾಗಿ 20.11 ಲಕ್ಷ ರೂ., ಪತ್ರಿಕಾಗೋಷ್ಠಿಗಳಿಗಾಗಿ 33,500 ರೂ.ಗಳನ್ನು ಖರ್ಚು ಮಾಡಿದೆ.
ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ AIMIM ತನ್ನ ಅಭ್ಯರ್ಥಿಗಳ ಕ್ರಿಮಿನಲ್ ಪೂರ್ವಾಪರಗಳನ್ನು ಮುದ್ರಿಸಲು ಕೇವಲ 1.86 ಲಕ್ಷ ರೂ.ಗಳನ್ನು ಖರ್ಚು ಮಾಡಿದರೆ, ಸಿಪಿಐ(ಎಂ) ತನ್ನ ಇಬ್ಬರು ಅಭ್ಯರ್ಥಿಗಳಿಗೆ 3.20 ಲಕ್ಷ ರೂ.ಗಳನ್ನು ನೀಡಿದೆ.
ಸಿಪಿಐ ತನ್ನ ಅಭ್ಯರ್ಥಿಗಳಲ್ಲಿ ಒಬ್ಬರಿಗೆ 5,000 ರೂ.ಗಳನ್ನು ಮತ್ತು ಇನ್ನೊಬ್ಬರಿಗೆ 15,000 ರೂ.ಗಳನ್ನು ನೀಡಿದೆ. ಸಿಪಿಐ(ಎಂಎಲ್)ಎಲ್ ಅಭ್ಯರ್ಥಿಗಳೇ ಪ್ರಚಾರ ನಡೆಸುತ್ತಿದ್ದರಿಂದ ಪ್ರಚಾರಕ್ಕೆ ಯಾವುದೇ ವೆಚ್ಚ ಮಾಡಲಿಲ್ಲ. ಬಿಎಸ್‌ಪಿ ಯಾವುದೇ ಅಭ್ಯರ್ಥಿಗೆ ಹಣಕಾಸು ನೆರವು ನೀಡದೇ ಪ್ರಚಾರಕ್ಕೆ 1.79 ಕೋಟಿ ರೂ. ಖರ್ಚು ಮಾಡಿದೆ.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಒಂದು ಸ್ಥಾನದಲ್ಲಿ ಸ್ಪರ್ಧಿಸಿದ್ದ ಎಲ್‌ಜೆಪಿ (ರಾಮ್ ವಿಲಾಸ್) ಚುನಾವಣೆಗೆ ಸಂಬಂಧಿಸಿದ ಕಚೇರಿ ವೆಚ್ಚವಾಗಿ 39,770 ರೂ. ಖರ್ಚು ಮಾಡಿರುವುದಾಗಿ ಹೇಳಿದೆ.