ಚಂಡೀಗಢ: ಎಎಪಿಯ ಹಿರಿಯ ನಾಯಕ ಮನೀಶ್ ಸಿಸೋಡಿಯಾ (Manish Sisodia) ಅವರು ಪಂಜಾಬ್‍ನ (Punjab) ಅಮೃತ್‍ಸರದ ಗೋಲ್ಡನ್ ಟೆಂಪಲ್‍ಗೆ (Golden Temple) ಭೇಟಿ ನೀಡಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಬಿಡುಗಡೆಗೆ ಪ್ರಾರ್ಥಿಸಿದ್ದಾರೆ.
ಪ್ರಾರ್ಥನೆಯ ಬಳಿಕ ಗೋಲ್ಡನ್ ಟೆಂಪಲ್ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತ್ತು ಕುಟುಂಬದ ಸದಸ್ಯರು ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದೇವೆ. ಕೇಜ್ರಿವಾಲ್ ಅವರ ಬಿಡುಗಡೆಗಾಗಿ ನಾನು ಪ್ರಾರ್ಥಿಸಿದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಜೈಲಿನಲ್ಲಿದ್ದ 17 ತಿಂಗಳ ಅವಧಿಯನ್ನು ಅವರು ನೆನಪಿಸಿಕೊಂಡರು. ಪಿತೂರಿ ನಡೆಸಿ ನನ್ನನ್ನು ಜೈಲಿಗೆ ಹಾಕಲಾಗಿತ್ತು. ನಾನು ಸದಾ ಸತ್ಯದ ಗೆಲುವಿಗಾಗಿ ಪ್ರಾರ್ಥಿಸುತ್ತೇನೆ. ದೇವರ ಆಶೀರ್ವಾದ, ಸುಪ್ರೀಂ ಕೋರ್ಟ್ ಮತ್ತು ದೇಶದ ಸಂವಿಧಾನದಿಂದಾಗಿ ನನಗೆ ನ್ಯಾಯ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.
ಈ ವೇಳೆ ಪಂಜಾಬ್ ಸಿಎಂ ಭಗವಂತ್ ಮಾನ್ (Bhagwant Mann) ಮಾತನಾಡಿ, ಕೇಜ್ರಿವಾಲ್ ಕೂಡ ಶೀಘ್ರದಲ್ಲೇ ಬಿಡುಗಡೆಯಾಗುತ್ತಾರೆ ಎಂಬ ಭರವಸೆ ಇದೆ. ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸುವ ಮೂಲಕ ಎಎಪಿಯನ್ನು ಒಡೆಯಲು ಬಿಜೆಪಿ ಪ್ರಯತ್ನಿಸಿದೆ ಎಂದು ಆರೋಪಿಸಿದ್ದಾರೆ.
ಸಿಸೋಡಿಯಾ ಕುಟುಂಬದೊಂದಿಗೆ ಗೋಲ್ಡನ್ ಟೆಂಪಲ್‍ಗೆ ಪ್ರಾರ್ಥನೆ ಸಲ್ಲಿಸಲು ಬಂದಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿಯ ಮಾಜಿ ಡಿಸಿಎಂ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಜಾಮೀನು ನೀಡಿತ್ತು.