ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಶಿರಸಿ, ಸಿದ್ದಾಪುರ ಭಾಗದಲ್ಲಿಗ ಆಲೆಮನೆ ಹಬ್ಬದ ಸುಗ್ಗಿ. ಪ್ರತಿ ಜನವರಿಯಿಂದ ಮಾರ್ಚ್ ಅಂತ್ಯದವರೆಗೂ ಶಿರಸಿ ಭಾಗದಲ್ಲಿ ಕಬ್ಬು ಬೆಳೆದ ರೈತರು ಕಟಾವು ಮಾಡಿ ಹಾಲು ಹಿಂಡಿ ಬೆಲ್ಲ ಮಾಡುವ ಸಂದರ್ಭವಿದು.
ಈ ಸಂದರ್ಭದಲ್ಲಿ ಶಿರಸಿ, ಸಿದ್ದಾಪುರ ಭಾಗದ ಹಲವು ರೈತರು ಆಲೆಮನೆ ಹಬ್ಬ ಎಂದೇ ಸಂಭ್ರಮದಿಂದ ಆಚರಿಸುತ್ತಾರೆ. ಕಬ್ಬನ್ನು ಕಟಾವು ಮಾಡಿ ಆಲೆಮನೆಯಲ್ಲಿ ಕಬ್ಬಿನ ರಸ ಹಿಂಡುವ ಸಂದರ್ಭದಲ್ಲಿ ಊರಿನ ಜನರಿಗೆ ಹಾಗೂ ನೆಂಟರಿಷ್ಟರಿಗೆ ಕಬ್ಬಿನ ಹಾಲಿನ ಜೊತೆ ಬಿಸಿ ಬಿಸಿ ಬೆಲ್ಲ ಸವಿಯಲು ಆಮಂತ್ರಿಸುತ್ತಾರೆ.
Advertisement
Advertisement
ಸಂಜೆಯಾಗುತ್ತಿದಂತೆ ಆಲೆಮನೆಯಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತದೆ. ಎಷ್ಟೇ ಜನರು ಬಂದರೂ ಹಾಲು ಹಾಗೂ ಬೆಲ್ಲ ಸವಿಯಲು ಕೊಡುವುದು ಇಲ್ಲಿನ ರೈತರ ಸಾಂಪ್ರದಾಯವಾಗಿದೆ.
Advertisement
ತರಹೇವಾರಿ ಕಬ್ಬಿನ ಹಾಲು, ಜೋನಿ ಬೆಲ್ಲ: ಕಬ್ಬನ್ನು ಅರೆದು ಕೇವಲ ಕಬ್ಬಿನ ಹಾಲು ಹಾಗೂ ಬಿಸಿ ಜೋನಿ ಬೆಲ್ಲ ಮಾತ್ರ ಸವಿಯುಲು ಮಾತ್ರ ಈ ಹಬ್ಬ ಸೀಮಿತವಾಗಿಲ್ಲ. ಇಲ್ಲಿ ತರ ತರದ ಕಬ್ಬಿನ ಹಾಲು ಸಹ ತುಂಬಾ ಸವಿಯಲು ಲಭ್ಯವಿರುತ್ತದೆ. ಸಾಂಪ್ರದಾಯಿಕ ಹಾಗೂ ಜೈವಿಕ ಗೊಬ್ಬರದಿಂದ ಕೃಷಿ ಮಾಡಿದ ಕಬ್ಬುಗಳು ಬಲು ರುಚಿಯಾಗಿರುತ್ತದೆ. ಹೀಗಾಗಿ ಕಬ್ಬಿನ ಹಾಲಿನ ಜೊತೆ ಸುಂಟಿ, ನಿಂಬೆ ಹಣ್ಣು ಬೆರತರೆ ಅದರ ಜೊತೆ ನೆಲ್ಲಿಕಾಯಿ ಮಿಶ್ರಿತ ಕಬ್ಬಿನ ಹಾಲು, ಪುದೀನ, ಸೊಗದೆ ಬೇರು, ಮಜ್ಜಿಗೆ ಹುಲ್ಲು, ಒಂದೆಲಗ ಹೀಗೆ ಔಷಧೀಯ ಗುಣವಿರುವ ಕಬ್ಬಿನ ಹಾಲು ಸವಿಯಲು ಸಿಗುತ್ತದೆ. ಇದರ ಜೊತೆ ಮಲೆನಾಡಿನ ಪ್ರಸಿದ್ಧ ಅಪ್ಪೆ ಮಿಡಿ, ಜೀರಿಗೆ ಮಿಡಿ ಮಾವಿನ ಉಪ್ಪಿನ ಕಾಯಿ ಸವಿಯುವ ಜೊತೆ ಮಂಡಕ್ಕಿ ರುಚಿ ಹೆಚ್ಚಿಸುತ್ತದೆ.
Advertisement
ಶಿರಸಿಯಿಂದ ವಾನಳ್ಳಿ ಬಳಿ ಇರುವ ಭೂಸನಕೇರಿಯ ತವರುಮನೆ ಹೋಮ್ ಸ್ಟೇನಲ್ಲಿ ಆಲೆಮನೆ ಹಬ್ಬ ಆಚರಿಸಲಾಯಿತು. ನೂರಾರು ಜನರು ಈ ಹಬ್ಬದಲ್ಲಿ ಭಾಗಿಯಾಗಿ ವಿವಿಧ ರೀತಿಯ ಕಬ್ಬಿನ ಹಾಲನ್ನು ಸವಿದು ಬೆಲ್ಲದ ರುಚಿ ನೋಡಿದರು. ಇನ್ನೆರಡು ತಿಂಗಳು ಶಿರಸಿ, ಸಿದ್ದಾಪುರ ಭಾಗದಲ್ಲಿ ಆಲೆಮನೆ ಸುಗ್ಗಿ ಯ ಹಬ್ಬ ಇರಲಿದ್ದು ಇದಕ್ಕಾಗಿ ದೂರದೂರಿಂದಲೂ ಜನ ಬಂದು ಸವಿದು ಹೋಗುವ ಜೊತೆಗೆ ಬೆಲ್ಲವನ್ನೂ ಕೊಂಡು ಹೋಗುತ್ತಿರುವುದು ಈ ಆಲೆಮನೆಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ.
ಹೆಚ್ಚಿದ ಬೇಡಿಕೆ: ಶಿರಸಿಯಲ್ಲಿ ಸಾಂಪ್ರದಾಯಿಕವಾಗಿ ಬೆಳೆದ ಕಬ್ಬಿನ ಬೆಲ್ಲಕ್ಕೆ ಕಳೆದ ಎರಡು ವರ್ಷಗಳಿಂದ ಅತೀ ಹೆಚ್ಚು ಬೇಡಿಕೆ ಹಾಗೂ ಮಾರುಕಟ್ಟೆ ದೊರೆಯುತ್ತಿದೆ. ಸಾದ ಬೆಲ್ಲಕ್ಕೆ ಒಂದು ಕೆಜಿಗೆ 50 ರೂ. 25 ಕೆಜಿಗೆ 1,250 ಮಾತ್ರ ಇದೆ. ಆದರೆ ಈ ಬೆಲ್ಲಕ್ಕೆ 25 ಕೆಜಿಗೆ 2,500 ರೂ. ರಿಂದ 4 ಸಾವಿರದ ವರೆಗೂ ಈ ಬಾರಿ ಬೇಡಿಕೆ ಬಂದಿದ್ದು ಉತ್ತಮ ಮಾರುಕಟ್ಟೆ ದರ ದೊರೆಯುತ್ತಿದೆ.
ಜೋನಿ ಬೆಲ್ಲ, ಗಟ್ಟಿ ಬೆಲ್ಲಗಳಿಗೆ ಬೆಂಗಳೂರು, ಮುಂಬೈ, ಗೋವಾದಂತ ಪ್ರದೇಶದಲ್ಲಿ ಬೇಡಿಕೆ ಬಂದರೆ ಈಗ ದೇಶವನ್ನೂ ದಾಟಿ ಬೇಡಿಕೆ ಬರುತಿದ್ದು ದುಬೈ, ಅಮೆರಿಕ ದೇಶಕ್ಕೂ ರಫ್ತಾಗುತ್ತಿದೆ. ಮಂಡ್ಯ, ಮೈಸೂರು ನಗರದಲ್ಲಿ ಕಬ್ಬು ಬೆಳೆದ ರೈತರು ಸಾಲದ ಶೂಲಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ಆದರೆ ಮಲೆನಾಡು ಭಾಗದ ರೈತರು ಆರ್ಗಾನಿಕ್ ಹಾಗೂ ಸಾಂಪ್ರದಾಯಿಕ ಬೆಲ್ಲಗಳನ್ನು ತಯಾರಿಸಿ ಉತ್ತಮ ಲಾಭದ ಕಡೆ ಮುಖಮಾಡಿದ್ದು ಕಬ್ಬು ಬೆಳಗಾರರಿಗೆ ಮಾದರಿಯಾಗಿದೆ.