ಮೈಸೂರು: ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಖಾಸಗಿ ದರ್ಬಾರ್ ಬುಧವಾರ ಆರಂಭವಾಗಿದ್ದು, ಈ ವೇಳೆ ಮೊದಲ ಬಾರಿಗೆ ಖಾಸಗಿ ದರ್ಬಾರಿನಲ್ಲಿ ಭಾಗವಹಿಸಿದ್ದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪುತ್ರ ಆದ್ಯವೀರ ನರಸಿಂಹರಾಜ ಒಡೆಯರ್ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು. ಈ ವೇಳೆ ಅಪ್ಪನ ದರ್ಬಾರ್ ಕಂಡ ಆದ್ಯವೀರ ತನ್ನ ಮುದ್ದ ನಗುವಿನ ಎಲ್ಲರ ಗಮನ ಸೆಳೆದಿದ್ದಾರೆ.
ಅರಮನೆಯ ಖಾಸಗಿ ದರ್ಬಾರಿನಲ್ಲಿ ಭಾಗವಹಿಸಿದ್ದ ಆದ್ಯವೀರ ಅವರ ಫೋಟೋ ಲಭ್ಯವಾಗಿದ್ದು, ತಾಯಿ ತ್ರಿಷಿಕಾ ಹಾಗೂ ರಾಜಮಾತೆ ಪ್ರಮೋದಾ ದೇವಿ ಅವರ ಆರೈಕೆಯಲ್ಲಿದ್ದರು. ಪೂಜಾ ವಿಧಾನದಲ್ಲಿ ಪಾಲ್ಗೊಳ್ಳುವ ಮುನ್ನ ಅರಮನೆಗೆ ತಾಯಿಯೊಂದಿಗೆ ಆಗಮಿಸಿದ್ದ ಆದ್ಯವೀರ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಅಚ್ಚಯಿಂದಲೇ ಗಮನಿಸುತ್ತಿದ್ದರು. ಇತ್ತ ರಾಜಾಪೋಷಾಕಿನಲ್ಲಿ ಕಂಗೊಳಿಸುತ್ತಿರುವ ಯದುವೀರ್ ಅವರು ತಿಳಿ ನೀಲಿ ಬಣ್ಣ ಸಾಂಪ್ರದಾಯಿಕ ಮೈಸೂರಿನ ಪೇಟಾ, ಗುಲಾಬಿ ವರ್ಣದ ನಿಲುವಂಗಿ, ಪೈಜಾಮಾ ಧರಿಸಿದ್ದರು. ನಿಲುವಂಗಿಯ ಮೇಲೆ ಗಂಡಭೇರುಂಡ ರಾಜ ಲಾಂಛನ ರಾರಾಜಿಸುತ್ತಿತ್ತು. ಅಲ್ಲದೇ ಮುತ್ತಿನ ಹಾರ, ಸ್ವರ್ಣ ಹಾರ, ಸ್ವರ್ಣ ತೋಳು ಬಂದಿ, ಮುತ್ತು ರತ್ನ ಖಚಿತ ಉಂಗುರ ತೊಟ್ಟಿದ್ದರು.
ಈ ಬಾರಿಯ ದಸರಾ ಐತಿಹಾಸಿಕವಾಗಿದ್ದು, ಯದುವಂಶದ ಆದ್ಯವೀರ ನರಸಿಂಹರಾಜ ಒಡೆಯರ್ ಕೂಡ ತಮ್ಮ ಮೊದಲ ದಸರಾ ಹಬ್ಬದಲ್ಲಿ ಭಾಗವಹಿಸಿದ್ದರು. ಡಿ. 6 2017ರಲ್ಲಿ ಜನಿಸಿದ್ದ ಆದ್ಯವೀರಿಗೆ ಇದೇ ಮೊದಲ ದಸರಾವಾಗಿದೆ. ಮೈಸೂರಿನ ಸಂಸ್ಥಾನದ ಯದುವಂಶಕ್ಕೆ ಸುಮಾರು 6 ದಶಕಗಳಿಂದ ಸಂತಾನ ಇರಲಿಲ್ಲ. ಆದರೆ ಕಳೆದ ವರ್ಷ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ದಂಪತಿಗೆ ಆದ್ಯವೀರ ಜನಿಸುವ ಮೂಲಕ ರಾಜಮನೆತನಕ್ಕೆ ಸಂತಾನ ಪ್ರಾಪ್ತಿಯಾಗಿತ್ತು. ಈ ಸಂತಸವನ್ನು ಇಡೀ ನಾಡಿನ ಜನತೆಯೂ ಸಂಭ್ರಮಿಸಿತ್ತು.
ದಸರಾ ಆರಂಭಕ್ಕೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಆದ್ಯವೀರ ನರಸಿಂಹರಾಜ ಒಡೆಯರ್ ಭಾಗಿಯಾಗುತ್ತಿರುವುದು ಖುಷಿ ತಂದಿದೆ. ನಮ್ಮ ಕುಟಂಬದ ಮತ್ತೊಬ್ಬ ಸದಸ್ಯ ಹಲವು ವರ್ಷಗಳ ನಂತರ ಪಾಲ್ಗೊಳ್ಳುತ್ತಿರುವುದು ಸಂತಸ ಇಮ್ಮಡಿಗೊಳಿಸಿದೆ. ದಸರಾದ ಸಿದ್ಧತೆಯಲ್ಲಿ ತೊಡಗಿಕೊಂಡಿರುವುದರಿಂದ ಆದ್ಯವೀರನನ್ನು ಗಮನಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv