ಹುಬ್ಬಳ್ಳಿ: ಆಧಾರ್ ನೊಂದಣಿ ಹಾಗೂ ತಿದ್ದುಪಡಿಗಾಗಿ ಜನರು ರಾತ್ರಿ 3 ಗಂಟೆಯಿಂದ ಪೋಸ್ಟ್ ಆಫೀಸ್, ಬ್ಯಾಂಕ್, ಹುಬ್ಬಳ್ಳಿ-ಧಾರವಾಡ ಒನ್ ಹಾಗೂ ನಾಡಕಚೇರಿಗಳ ಮುಂದೆ ಕಾಯುತ್ತಿದ್ದರು. ಇದನ್ನು ತಪ್ಪಿಸಲು ಆಧಾರ್ ಸೇವಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದ ಕ್ಲಬ್ ರಸ್ತೆಯಲಿರುವ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೇಂದ್ರದ ಕಾನೂನು ಮತ್ತು ನ್ಯಾಯ, ಸಂಪರ್ಕ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರೊಂದಿಗೆ ವಿಸ್ತ್ರುತವಾಗಿ ಮಾತನಾಡಿ ರಾಜ್ಯದಲ್ಲಿ ಆಧಾರ್ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ ಮೊದಲ ಆಧಾರ್ ಸೇವಾ ಕೇಂದ್ರ ಹುಬ್ಬಳ್ಳಿಯಲ್ಲಿ ಆರಂಭವಾಗಿದೆ. ಮೈಸೂರಿನಲ್ಲಿ ಆಧಾರ್ ಸೇವಾ ಕೇಂದ್ರ ತರೆಯಲಾಗಿದ್ದು, ಸದ್ಯದಲ್ಲೇ ಧಾರವಾಡ ಎಸ್.ಪಿ. ಸರ್ಕಲ್ ನಲ್ಲಿ ಸೇವಾ ಕೇಂದ್ರ ಉದ್ಘಾಟಿಸಲಾಗುವುದು ಎಂದರು.
Advertisement
Advertisement
ಹುಬ್ಬಳ್ಳಿಯ ಸೇವಾಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿನಿತ್ಯ 700 ಕಾರ್ಡುಗಳನ್ನು ನೊಂದಣಿ ಮಾಡಲಾಗುತ್ತಿದೆ. ಹೆಚ್ಚಿನ ಬೇಡಿಕೆ ಬಂದಾಗ ಸಾವಿರ ಕಾರ್ಡುಗಳನ್ನು ನೊಂದಣಿ ಮಾಡುವಂತೆ ಸಿಬ್ಬಂದಿಗಳಿಗೆ ಸೂಚಿಸಲಾಗುವುದು. ಕೇಂದ್ರ ಮಂತ್ರಿಗಳು ಹಾಗೂ ಹಿರಿಯ ಅಧಿಕಾರಿಗಳು ಇಲ್ಲಿಗೆ ಕರೆತಂದು ಭೇಟಿ ನೀಡಿಸಲಾಗುವುದು. ಈ ಮಾದರಿಯ ಕೇಂದ್ರಗಳನ್ನು ಅಗತ್ಯ ಇರುವ ಇತರೆಡೆಗಳಲ್ಲೂ ಸಹ ತರೆಯಲಾಗುವುದು. ಜನರು ರಾತ್ರಿ ಕಾಯುವುದು ತಪ್ಪಿದೆ. ಆನ್‍ಲೈನ್ ಮೂಲಕ ಸಹ ನೊಂದಣಿ ಹಾಗೂ ತಿದ್ದುಪಡಿಗೆ ಟೋಕನ್ ಪಡೆಯಬಹುದಾಗಿದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.
Advertisement
Advertisement
ಸೇವಾ ಕೇಂದ್ರದಲ್ಲಿ ವ್ಯವಸ್ಥಿತವಾಗಿ ಜನರಿಗೆ ಸೇವೆ ನೀಡಲಾಗುತ್ತಿದೆ. ಆಧಾರ್ ತಿದ್ದುಪಡಿ ನಿಯಮಗಳನ್ನು ಸರಳೀಕರಿಸಲು ಪ್ರಯತ್ನಿಸಲಾಗುವುದು. ಕೇಂದ್ರ ಸರ್ಕಾರ ಆಧಾರ್ ಕಾಯ್ದೆ ರಚಿಸುವ ಮೂಲಕ ಆಧಾರ್ ಮಾನ್ಯತೆ ನೀಡಿದೆ. ಜನಧನ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ನಂಬರ್ ಲಿಂಕ್ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಸರ್ಕಾರದ ಸೌಲಭ್ಯಗಳನ್ನು ನೀಡಲು ಆಧಾರ್‌ಗಳನ್ನು ಲಿಂಕ್ ಮಾಡಲಾಗಿದೆ. ಇದರಿಂದ ಸರ್ಕಾರದ ಯೋಜನೆಗಳು ದುರುಪಯೋಗವಾಗುವುದು ತಪ್ಪಿದೆ. ಆಧಾರ್ ಲಿಂಕ್‍ನಿಂದಾಗಿ ಕೇಂದ್ರ ಸರ್ಕಾರಕ್ಕೆ ಒಂದು ಲಕ್ಷದ ಇಪ್ಪತ್ತೈದು ಸಾವಿರ ಕೋಟಿ ಉಳಿತಾಯವಾಗಿದೆ. ಅನರ್ಹರಿಗೆ ಸೌಲಭ್ಯಗಳು ತಲುಪುವುದು ತಪ್ಪಿದೆ. ಇದೇ ಹಣವನ್ನು ಸರ್ಕಾರ ಜನರ ಕಲ್ಯಾಣಕ್ಕಾಗಿ ವಿನಯೋಗಿಸಿದೆ. ಇತರೆ ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಸೇವಾ ಕೇಂದ್ರಗಳನ್ನು ಬಲಗೊಳಿಸಲಾಗುವುದು ಎಂದು ಹೇಳಿದರು.