ನವದೆಹಲಿ: ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಕಡ್ಡಾಯ ಮಾಡುವಂತಿಲ್ಲ ಅಂತಾ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಆದ್ರೆ ಬ್ಯಾಂಕ್ ಖಾತೆಗೆ 12 ಸಂಖ್ಯೆಗಳ ಆಧಾರ್ ನಂಬರ್ ಲಿಂಕ್ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.
ಇದೇ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರ ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಎಂದು ಘೋಷಿಸಿತ್ತು. ಆದ್ರೆ ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಯಾರೂ ಸೌಲಭ್ಯಗಳಿಂದ ವಂಚಿತರಾಗುವಂತಾಗಬಾರದೆಂದು ಆಧಾರ್ ನಂಬರ್ ಸಿಗುವವರೆಗೂ ರೇಷನ್ ಕಾರ್ಡ್ ಅಥವಾ ಆಧಾರ್ ನೋಂದಣಿಯ ಜೆರಾಕ್ಸ್ ಪ್ರತಿ ಬಳಸಿ ರೇಷನ್ ಪಡೆಯಬಹುದು ಎಂದು ಸುಪ್ರೀಂ ಹೇಳಿದೆ.
Advertisement
ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಲು 7 ಮಂದಿ ನ್ಯಾಯಾಧೀಶರುಳ್ಳ ನ್ಯಾಯಪೀಠವನ್ನು ರಚಿಸಬೇಕು. ಆದ್ರೆ ಈಗ ಅದು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
Advertisement
ಮಧ್ಯಾಹ್ನದ ಬಿಸಿಯೂಟ, ಸ್ಕಾಲರ್‍ಶಿಪ್, ಹಿಂದುಳಿದ ವರ್ಗಗಳ ಯೋಜನೆಗಳಿಗೆ, ಅಂಗವಿಕಲರ ಯೋಜನೆಗಳಿಗೆ, ಆಹಾರ ಧಾನ್ಯ ಪಡೆಯಲು, ಗ್ಯಾಸ್ ಸಬ್ಸಿಡಿ ಸೇರಿದಂತೆ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳಿಗೆ ಆಧಾರ್ ಕಡ್ಡಾಯ ಮಾಡಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೆಲವರು, ಆಧಾರ್ ಯೋಜನೆ ನಡೆಸುತ್ತಿರುವ ಯುನೀಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ(ಯುಐಡಿಎಐ) ಖಾಸಗಿ ಏಜೆನ್ಸಿಗಳ ಮೂಲಕ ಬಯೋಮೆಟ್ರಿಕ್ ಮಾಹಿತಿಗಳನ್ನ ಪಡೆಯುತ್ತಿದ್ದು, ಇದರಿಂದ ಪ್ರಜೆಗಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಆರೋಪಿಸಿದ್ದರು.