ಮಡಿಕೇರಿ: ಕುಟುಂಬ ಸದಸ್ಯರೊಬ್ಬರ ಅಂತ್ಯಸಂಸ್ಕಾರ ಮುಗಿಸಿ ನಾಲೆಯಲ್ಲಿ ಸ್ನಾನಕ್ಕೆ ತರಳಿದ್ದ ಯುವಕನೋರ್ವ ನೀರಿನ ರಭಸಕ್ಕೆ ಕೊಚ್ಚಿಹೋಗಿ ಮೃತಪಟ್ಟಿರುವ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರ ತಾಲೂಕಿನ ಹುದುಗೂರು ಗ್ರಾಮದಲ್ಲಿ ನಡೆದಿದೆ.
ಸಂತೋಷ (28) ಮೃತ ದುರ್ದೈವಿ. ಮೂಲತಃ ಕುಶಾಲನಗರ ತಾಲೂಕಿನ ಕೂಡಿಗೆ ಗ್ರಾಮದ ನಿವಾಸಿ ಸಂತೋಷ್ ಕೂಡಿಗೆ ಡೈರಿಯಲ್ಲಿ ವಾಹನ ಚಾಲಕ ವೃತ್ತಿ ಮಾಡಿಕೊಂಡು ಅಂಗಡಿ ಮುಗ್ಗಟ್ಟುಗಳಿಗೆ ಹಾಲು ಮೊಸರು ಹಾಕುತ್ತಿದ್ದ. ಹುದುಗೂರು ಗ್ರಾಮದಲ್ಲಿ ತಮ್ಮ ಸಂಬಂಧಿಕರೊಬ್ಬರು ಮೃತಪಟ್ಟ ವಿಚಾರ ತಿಳಿದು ಸಂತೋಷ್ ನೇರವಾಗಿ ಅಂತ್ಯಸಂಸ್ಕಾರಕ್ಕೆ ತೆರಳಿದ್ದ. ಅಂತ್ಯಕ್ರಿಯೆ ಮುಗಿದ ಬಳಿಕ ಸ್ನಾನಕ್ಕೆಂದು ಹಾರಂಗಿ ನಾಲೆಗೆ (Harangi Canal) ತೆರಳಿದ್ದ, ಈ ವೇಳೆ ನೀರಿನ ರಭಸಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ಪೊಲೀಸರಿಗೆ ಹಾಗೂ ಹಾರಂಗಿ ಇಲಾಖೆಯ ಆದಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣವೇ ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹಾರಂಗಿಯ ಮುಖ್ಯ ನಾಲೆ ಬಳಿ ತೆರಳಿ ಸಂತೋಷ್ ಮೃತದೇಹವನ್ನ ಶೋಧ ಕಾರ್ಯಚರಣೆ ಮಾಡಲು ಮುಂದಾಗಿದ್ದಾರೆ. ಅಲ್ಲದೇ ಹಾರಂಗಿಯ ಇಂಜಿನಿಯರ್ ಗಳೊಂದಿಗೆ ಮಾತಾನಾಡಿ ನಾಲೆಯಲ್ಲಿ ನೀರಿನ ಸರಬರಾಜು ಮಾಡುವುದನ್ನು ತಕ್ಷಣವೇ ನಿಲ್ಲಿಸಿ ಮೃತದೇಹದ ಶೋಧಕಾರ್ಯಕ್ಕೆ ಸಹಕಾರ ನೀಡಿ ಎಂದು ಮನವಿ ಮಾಡಿದ್ದಾರೆ. ಅದರಂತೆ ಹಾರಂಗಿ ಜಲಾಶಯದ ಅಧಿಕಾರಿಗಳು ನೀರು ಸರಬರಾಜನ್ನ ನಿಲ್ಲಿಸಿದ್ದರು. ಸ್ವಲ್ಪ ಹೊತ್ತು ಕಳೆದ ಬಳಿಕ ಒಂದು ಕಿಲೋಮೀಟರ್ ಅಂತರದಲ್ಲಿ ಮೃತದೇಹ ಪತ್ತೆಯಾಗಿದೆ.
ಘಟನೆ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.