ಮಂಗಳೂರು: ಹೆಲ್ಮೆಟ್ ಹಾಕೋದಂದರೆ ಇವತ್ತಿನ ಯುವಜನತೆಗೆ ಎಲ್ಲಿಲ್ಲದ ಕಿರಿಕಿರಿ. ಹೆಲ್ಮೆಟ್ ಹಾಕಿದ್ರೆ ನಮ್ ಹೇರ್ ಸ್ಟೈಲ್ ಹಾಳಾಗುತ್ತೆ ಅನ್ನೋದೇ ಬೈಕ್ ಸವಾರರ ದೂರು. ಆದರೆ ಮಂಗಳೂರಿನ ಯುವಕನೊಬ್ಬ ಇದೇ ಹೆಲ್ಮೆಟ್ ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದಾನೆ. ಈ ಟ್ರೆಂಡ್ ಈಗ ಮಂಗಳೂರಿನಾದ್ಯಾಂತ ಕ್ರೇಜ್ ಆಗಿದೆ.
ಹುಲಿ ವೇಷ, ಇದು ಕರಾವಳಿಯ ಜನರ ನಾಡಿಮಿಡಿತ. ಹುಲಿ ವೇಷದ ನೃತ್ಯಕ್ಕೆ ಮನಸೋಲದವರಿಲ್ಲ. ಆದರೆ ಈಗ ಇದೇ ಹುಲಿವೇಷವನ್ನು ಮೂಲವಾಗಿಟ್ಟುಕೊಂಡು ಕರಾವಳಿಯ ಇಂಜಿನಿಯರಿಂಗ್ ವಿದ್ಯಾರ್ಥಿ ಆಕಾಂಕ್ಷ್ ಶೆಟ್ಟಿ ಹೊಸ ಟ್ರೆಂಡ್ ಹುಟ್ಟಿಸಿದ್ದಾನೆ. ಹೆಲ್ಮೆಟ್ ನಲ್ಲಿ ಹುಲಿತಲೆಯ ಚಿತ್ರವನ್ನು ರಚಿಸಿ ಹೆಲ್ಮೆಟ್ ಗೂ ಡಿಫೆರೆಂಟ್ ಟಚ್ ನೀಡಿದ್ದಾನೆ.
Advertisement
Advertisement
ಸುಪ್ರೀಂ ಕೋರ್ಟ್ ಆದೇಶದಂತೆ ಬೈಕ್ ಸವಾರರು ಹೆಲ್ಮೆಟ್ ಧರಿಸಲೇ ಬೇಕು. ಧರಿಸಿಲ್ಲ ಅಂದರೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ದಂಡ ಕಟ್ಟಲೇ ಬೇಕು. ಆದರೆ ಈ ಹೆಲ್ಮೆಟ್ ಗೇ ಹೊಸ ರೂಪ ನೀಡಿದರೆ ಹೇಗೆ? ಅನ್ನೋ ಯೋಚನೆ ಮಾಡಿದ ಆಕಾಂಕ್ಷ್ ಶೆಟ್ಟಿ ಮಂಗಳೂರಿನ ಪ್ರಸಿದ್ಧ ಚಿತ್ರ ಕಲಾವಿದ ಉಮೇಶ್ ಬೋಳಾರ್ ಬಳಿ ತನ್ನ ಬೇಡಿಕೆ ಹಂಚಿಕೊಂಡಿದ್ದಾರೆ. ವಿದೇಶಗಳಲ್ಲಿ ಹ್ಯಾವೆಂಜರ್ಸ್ ಹೆಲ್ಮಟ್ ಗಳನ್ನು ಧರಿಸಿ ಬೈಕ್ ರೈಡ್ ಮಾಡುವುದನ್ನು ನೋಡಿದ್ದ ಆಕಾಂಕ್ಷ್ ಶೆಟ್ಟಿಗೆ ತುಳುನಾಡಿನ ಕಲೆಯಾದ ಹುಲಿವೇಷ ಕುಣಿತದ ಹುಲಿಯ ತಲೆಯಂತಹ ಹೆಲ್ಮೆಟ್ ನ್ನು ಉಮೇಶ್ ಬೋಳಾರ್ ರೂಪಿಸಿ ಕೊಟ್ಟಿದ್ದಾರೆ.
Advertisement
Advertisement
ಮಂಗಳೂರಿನ ಬ್ಯುಸಿ ಟ್ರಾಫಿಕ್ ನಲ್ಲಿ ಹುಲಿ ತಲೆಯ ಹೆಲ್ಮೆಟ್ ಹಾಕಿಕೊಂಡು ಬಂದರೆ ಕೆಲವರು ನಿಲ್ಲಿಸಿ ಹೆಲ್ಮೆಟ್ ಪಡೆದು ಅದರ ವಿನ್ಯಾಸವನ್ನು ನೋಡಿ ಖುಷಿಪಟ್ಟರೆ, ಇನ್ನು ಕೆಲವರು ಯಾಕಣ್ಣ ನವರಾತ್ರಿ ಈಗಲೇ ಬಂತೇ ಎಂದು ತಮಾಷೆ ಮಾಡಿದ್ದಾರೆ. ಕೆಲವು ಜನ ಸೆಲ್ಫಿ ತೆಗೆದೂ ಸಂಭ್ರಮಿಸಿದ್ದು ಇದೆ. ವಿದೇಶಗಳ ಜನ ಎಲ್ಲಾ ವಿಚಾರದಲ್ಲೂ ತಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುವಾಗ ನಾವೇಕೆ ತುಳುನಾಡಿನ ಜನಪದ ಕುಣಿತವಾದ ಹುಲಿವೇಷವನ್ನು ಹೆಲ್ಮೆಟ್ ಮೂಲಕ ಬಿಂಬಿಸಬಾರದು ಎಂದು ಆಕಾಂಕ್ಷ್ ಹೇಳಿದ್ದಾರೆ.