ಹಾಸನ | ಕುಡಿದ ಮತ್ತಿನಲ್ಲಿ ಕಾರು ಅಡ್ಡಗಟ್ಟಿ ಗುಂಡು ಹಾರಿಸಿದ ಯುವಕ ಅರೆಸ್ಟ್

Public TV
1 Min Read
Hassan ROSHAN ARREST

ಹಾಸನ: ಕುಡಿದ ಮತ್ತಿನಲ್ಲಿ ಯುವಕನೊಬ್ಬ ಕಾರು ಅಡ್ಡಗಟ್ಟಿ ಗುಂಡು ಹಾರಿಸಿ ಹುಚ್ಚಾಟ ಮೆರೆದ ಘಟನೆ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗುಂಡು ಹಾರಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮೂಡಿಗೆರೆ (Mudigere) ತಾಲೂಕಿನ ಕಸ್ಕೆಬೈಲು ಗ್ರಾಮದ ರೋಷನ್ ಎಂದು ಗುರುತಿಸಲಾಗಿದೆ.

ಸ್ನೇಹಿತರಾದ ಉಮೇಶ್, ಯೋಗೇಶ್, ಪ್ರಭಾಕರ್, ಶರತ್ ಮತ್ತು ಕುಮಾರ್ ಕಾರಿನಲ್ಲಿ ಗೋಣಿಬೀಡು ಗ್ರಾಮದ ಕಾರ್ತಿಕ್ ಎಂಬವರ ಮನೆಯಲ್ಲಿ ಊಟ ಮುಗಿಸಿ ರಾತ್ರಿ ವಾಪಸ್ ಆಗುತ್ತಿದ್ದರು. ಈ ವೇಳೆ ರೋಷನ್ ಹಾಗೂ ಸ್ನೇಹಿತರು ಕಸ್ಕೆಬೈಲಿನ ಚರ್ಚ್ ಬಳಿ ವಾಹನ ನಿಲಿಸಿಕೊಂಡು ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಬಂದ ಕಾರನ್ನು ತಡೆದ ರೋಷನ್ ಹಾಗೂ ಸ್ನೇಹಿತರು, ರಾತ್ರಿ ವೇಳೆ ಇಲ್ಲಿ ಏಕೆ ಓಡಾಡುತ್ತಿದ್ದೀರಾ ಎಂದು ಕೇಳಿದ್ದಾರೆ. ಇದನ್ನು ಕೇಳಲು ನೀನ್ಯಾರು ಎಂದು ಯೋಗೇಶ್ ಕೇಳಿದಾಗ ರೋಷನ್ ಹಲ್ಲೆ ಮಾಡಿದ್ದಾನೆ. ಯೋಗೀಶ್ ಸ್ನೇಹಿತರು ಎಲ್ಲರನ್ನೂ ಸಮಾಧಾನ ಮಾಡಿ ಅಲ್ಲಿಂದ ಹೊರಟ್ಟಿದ್ದಾರೆ.

ರೋಷನ್ ಮತ್ತೆ ಜೀಪ್‍ನಲ್ಲಿ ಬಂದು ಚೀಕನಹಳ್ಳಿ ಬಳಿ ಕಾರು ಅಡ್ಡಗಟ್ಟಿದ್ದ. ಬಳಿಕ ಏಕಾಏಕಿ ಥಾರ್ ಜೀಪಿನಿಂದ ಬಂದೂಕು ತೆಗೆದು ಗುಂಡು ಹಾರಿಸಿದ್ದ. ಗುಂಡು ಕಾರಿನ ಎಡ ಭಾಗದ ಚಕ್ರಕ್ಕೆ ತಗುಲಿದ್ದು, ಅದೃಷ್ಟವಶಾತ್ ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆರೋಪಿಯ ವಿರುದ್ಧ ಯೋಗೇಶ್ ಹಾಗೂ ಉಮೇಶ್ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ರೋಷನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Share This Article