ಬೆಂಗಳೂರು: ಮಾತು ಬಾರದ ಯುವತಿ ಇಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಾಖಿ ಕಟ್ಟಿ ರಕ್ಷಾ ಬಂಧನದ ಶುಭ ಕೋರಿದ್ದಾರೆ.
ಯುವತಿ ರಾಖಿ ಕಟ್ಟುತ್ತಿದ್ದಂತೆ ಸಿಎಂ 2 ಸಾವಿರ ರೂ. ನೀಡಲು ಮುಂದಾದರು. ಈ ವೇಳೆ ಯುವತಿ ಹಣ ಬೇಡ, ನನಗೆ ಉದ್ಯೋಗ ಕೊಡಿಸಿ ಎಂದು ಸನ್ನೆ ಮೂಲಕವೇ ಮನವಿ ಮಾಡಿಕೊಂಡಳು. ಯುವತಿಯ ಮನವಿಗೆ ಸ್ಪಂದಿಸಿದ ಸಿಎಂ ಉದ್ಯೋಗ ನೀಡುವ ಭರವಸೆಯನ್ನು ನೀಡಿದರು.
ಇದಕ್ಕೂ ಮುನ್ನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿಎಂ ವಿವಿಧ ದೇವಸ್ಥಾನಗಳಿಂದ ಕೊಡುಗು ಸಂತ್ರಸ್ತರಿಗೆ ಸಂಗ್ರಹವಾಗಿರುವ ಮೊತ್ತವನ್ನು ಸಿಎಂ ತಿಳಿಸಿದರು. ಸಭೆಯಲ್ಲಿ ಕೃಷಿ ಸಚಿವ ಶಿವಶಂಕರ ರೆಡ್ಡಿ, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಕುಕ್ಕೆ ಸುಬ್ರಮಣ್ಯ ದೇಗುಲದಿಂದ 3 ಕೋಟಿ ರೂ., ಮಂದಾರ್ತಿ ದುರ್ಗಾಪರಮೇಶ್ವರಿ 50 ಲಕ್ಷ ರೂ., ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಿಂದ 1 ಕೋಟಿ ರೂ., ಮೈಸೂರು ಚಾಮುಂಡೇಶ್ವರಿ ದೇಗುಲ 1 ಕೋಟಿ ರೂ., ಕೊಪ್ಪಳದ ಹುಲಿಗೆಮ್ಮ ದೇಗುಲ 50 ಲಕ್ಷ ರೂ., ನಂಜನಗೂಡು ಶ್ರೀಕಂಠೇಶ್ವರ್ ದೇಗುಲ 1 ಕೋಟಿ ರೂ., ಸವದತ್ತಿ ಯಲ್ಲಮ್ಮ ದೇಗುಲ 50 ಲಕ್ಷ ರೂ., ಕಟೀಲು ದುರ್ಗಾಪರಮೇಶ್ವರಿ ದೇಗುಲ 75 ಲಕ್ಷ ರೂ., ಘಾಟಿ ಸುಬ್ರಮಣ್ಯ ದೇಗುಲ 50 ಲಕ್ಷ ರೂ., ಬೆಂಗಳೂರಿನ ಬನಶಂಕರಿ ದೇಗುಲ 50 ಲಕ್ಷ ರೂ., ಮಂಗಳೂರಿನ ಅನಂತ ಪದ್ಮನಾಭ 10 ಲಕ್ಷ ರೂ., ಕದ್ರಿ ಮಂಜುನಾಥ ದೇಗುಲ 10 ಲಕ್ಷ ರೂ., ಬೇಲೂರು ಚೆನ್ನಕೇಶವ ದೇಗುಲ 10 ಲಕ್ಷ ರೂ., ಮಾಲೂರು ಚಿಕ್ಕತಿರುಪತಿ ದೇಗುಲ 25 ಲಕ್ಷ ರೂ., ಬಂಗಾರಪೇಟೆ ಬಂಗಾರು ದೇಗುಲ 10 ಲಕ್ಷ ರೂ., ಶ್ರೀರಂಗಪಟ್ಟಣ ನಿಮಿಷಾಂಭ ದೇಗುಲ 25 ಲಕ್ಷ ರೂ., ತಲಕಾಡು ವೈದ್ಯನಾಥೇಶ್ವರ 10 ಲಕ್ಷ ರೂ., ಶ್ರೀರಂಗಪಟ್ಟಣ ರಂಗನಾಥ ಸ್ವಾಮಿ 25 ಲಕ್ಷ ರೂ. ಹಾಗೂ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ 10 ಲಕ್ಷ ರೂ. ಬಂದಿದ್ದು, ಒಟ್ಟು 12.1 ಕೋಟಿ ರೂ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಂಗ್ರಹವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv