ಗದಗ: ಅತಿಥಿ ಶಿಕ್ಷಕನ (Guest Teacher) ಅಟ್ಟಹಾಸಕ್ಕೆ ವಿದ್ಯಾರ್ಥಿ ಬೆನ್ನಲ್ಲೇ ಈಗ ಶಿಕ್ಷಕಿಯೂ ಬಲಿಯಾಗಿದ್ದಾರೆ. ಅತಿಥಿ ಶಿಕ್ಷಕನಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದ ಶಿಕ್ಷಕಿ ಗೀತಾ ಬಾರಕೇರ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಗದಗ (Gadag) ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಮುತ್ತಪ್ಪ ಹಡಗಲಿ ಎಂಬಾತನಿಂದ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದ ಶಿಕ್ಷಕಿ ಗೀತಾ ಬಾರಕೇರ್, ಚಿಕಿತ್ಸೆ ಫಲಿಸದೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಡಿ.19ರಂದು ಶಾಲೆಯಲ್ಲಿ 4ನೇ ತರಗತಿಯ ಭರತ್ ಎಂಬ ವಿದ್ಯಾರ್ಥಿ, ಶಿಕ್ಷಕನ ಅಟ್ಟಹಾಸಕ್ಕೆ ಬಲಿಯಾಗಿದ್ದ. ಇಂದು ವಿದ್ಯಾರ್ಥಿ ತಾಯಿ ಹಾಗೂ ಅದೇ ಶಾಲೆಯ ಶಿಕ್ಷಕಿಯೂ ಆಗಿದ್ದ ಗೀತಾ ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಶಾಲೆಯ 1ನೇ ಮಹಡಿಯಿಂದ ವಿದ್ಯಾರ್ಥಿ ತಳ್ಳಿದ ಅತಿಥಿ ಶಿಕ್ಷಕ – ಬಾಲಕ ಸಾವು
Advertisement
Advertisement
ಏನಿದು ಪ್ರಕರಣ?
ಅತಿಥಿ ಶಿಕ್ಷಕ ಮುತ್ತಪ್ಪ ಬಾರಕೇರ್ ಹಾಗೂ ಶಿಕ್ಷಕಿ ಗೀತಾ ಬಾರಕೇರ್ ನಡುವಿನ ಸಂಬಂಧ ಇತ್ತೀಚೆಗೆ ಹಳಸಿತ್ತು. ಆದರೆ ಅದೇ ಶಾಲೆಯ ಇನ್ನೋರ್ವ ಶಿಕ್ಷಕ ಸಂಗನಗೌಡ ಪಾಟೀಲ ಜೊತೆ ಗೀತಾ ಸಲುಗೆಯಿಂದ ನಡೆದುಕೊಳ್ಳುತ್ತಿದ್ದರು. ಆರೋಪಿ ಮುತ್ತಪ್ಪಗೆ ಈ ಇಬ್ಬರ ಸಲುಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ವಿದ್ಯಾರ್ಥಿಗಳು, ಶಿಕ್ಷಕರು ಪ್ರವಾಸಕ್ಕೆ ಹೋಗಿ ಬಂದಾಗಿನಿಂದ ಇಬ್ಬರ ಸಲುಗೆ ಮತ್ತಷ್ಟು ಹೆಚ್ಚಾಯಿತು. ಅದು ಆರೋಪಿ ಮುತ್ತಪ್ಪನ ಕಣ್ಣು ಕುಕ್ಕಿತ್ತು. ಆ ಶಿಕ್ಷಕಿ ಮಗ ಭರತ್ ಅದೇ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ. ಡಿ.19 ರಂದು ವಿದ್ಯಾರ್ಥಿ ಭರತ್‌ಗೆ ವಿನಾಕಾರಣ ಹಲ್ಲೆ ನಡೆಸಿ, ಮೊದಲ ಮಹಡಿಯಿಂದ ಕೆಳಗೆ ಎತ್ತಿಹಾಕಿದ್ದ. ಆಗ ಬಿಡಿಸಲು ಬಂದ ತಾಯಿ, ಶಿಕ್ಷಕಿ ಗೀತಾ ಹಾಗೂ ಮತ್ತೋರ್ವ ಶಿಕ್ಷಕ ಸಂಗನಗೌಡ ಮೇಲೂ ಸಲಾಕೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ. ವಿದ್ಯಾರ್ಥಿ ಭರತ್ ಸಾವನ್ನಪ್ಪಿದ್ದ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ನಂತರ ಪರಾರಿಯಾಗಿದ್ದ ಆರೋಪಿ ಮುತ್ತಪ್ಪನನ್ನು ನರಗುಂದ ಪಟ್ಟಣ ಸಮೀಪ ಇರುವ ರೋಣ ಕ್ರಾಸ್ ಬಳಿ ಪೊಲೀಸರು ಬಂಧಿಸಿದ್ದರು.
Advertisement
Advertisement
ಗಾಯಾಳು ಗೀತಾ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ತಲೆ ಹಾಗೂ ಭುಜದ ಭಾಗಕ್ಕೆ ತೀವ್ರವಾಗಿ ಪೆಟ್ಟು ಬಿದ್ದಿದ್ದರಿಂದ ಗೀತಾ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. 3 ದಿನ ಜೀವನ್ಮರಣದ ಹೋರಾಟ ನಡೆಸಿದ ಅವರು ಇಂದು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳದಲ್ಲಿ ನರಗುಂದ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ ಯುವತಿ – ನಡು ರಸ್ತೆಯಲ್ಲೇ ಕೊಂದ ಪಾಗಲ್ ಪ್ರೇಮಿ