ಧಾರಾವಾಡ: ತನ್ನ ಮೊದಲ ಗಂಡನನ್ನು ಬಿಟ್ಟು ಬಂದು ಜೀವನ ಸಾಗಿಸುತ್ತಿದ್ದ ಮಹಿಳೆಗೆ ಚಿಕ್ಕ ವಯಸ್ಸಿನ ಯುವಕನೊಬ್ಬನ ಎಂಟ್ರಿಯಾಗಿತ್ತು. ಆತ ಕೆಲ ದಿನಗಳ ಕಾಲ ಸಂಸಾರ ಕೂಡ ಮಾಡಿದ್ದ. ಕೊನೆಗೆ ಕೈಕೊಟ್ಟ. ಇದರಿಂದ ನೊಂದ ಮಹಿಳೆ ಮೋಸ ಮಾಡಿದವನ ಮನೆಗೆ ಬಂದು ಮದುವೆ ಮಾಡಿಕೊಳ್ಳುವಂತೆ ದುಂಬಾಲು ಬಿದ್ದಿದ್ದಾಳೆ.
ಹೌದು. ರಾಯಭಾಗ ತಾಲೂಕಿನ ಕಲಾವತಿಗೆ ಮೂರು ಮಕ್ಕಳ ತಂದೆ ಜೊತೆ ಈ ಹಿಂದೆ ಮದುವೆಯಾಗಿತ್ತು. ಆದರೆ ಗಂಡನ ಕಿರಿಕಿರಿ ತಾಳಲಾರದೇ ಆತನನ್ನು ಬಿಟ್ಟು ಬಂದು ಧಾರವಾಡದ ನಿಗದಿ ಗ್ರಾಮದಲ್ಲಿರುವ ಗೆಳತಿ ಮನೆಯಲ್ಲಿ ವಾಸವಾಗಿದ್ದಳು. ಆಗ ವಯಸ್ಸಲ್ಲಿ ಕಲಾವತಿಗಿಂತ ಚಿಕ್ಕವನಾದ 23 ವರ್ಷದ ಮುತ್ತು ಮಡಿವಾಳರ ಎಂಬಾತ ಭೇಟಿಯಾದ. ಮದುವೆಯಾಗೋದಾಗಿ ಹೇಳಿ ಧಾರವಾಡ ನಗರದ ರಾಜೀವ್ ಗಾಂಧಿ ನಗರದಲ್ಲಿ ಮನೆ ಮಾಡಿ ಮೂರು ತಿಂಗಳು ಸಂಸಾರ ಕೂಡ ನಡೆಸಿದ್ದ.
ಮೂರು ತಿಂಗಳು ಆಕೆ ಜೊತೆ ಮಜಾ ಮಾಡಿದ್ದ ಮುತ್ತು ಎಂಟು ದಿನಗಳ ಹಿಂದೆ ಕಲಾವತಿಗೆ ಕೈಕೊಟ್ಟು ತನ್ನ ಮನೆಗೆ ಹೋಗಿ ನೆಲೆಸಿದ್ದಾನೆ. ಪ್ರಿಯಕರ ಫೋನ್ ಸಂಪರ್ಕಕ್ಕೂ ಸಿಗದಿದ್ದಾಗ ನೇರವಾಗಿ ಮುತ್ತುವಿನ ಮನೆಗೆ ಬಂದ ಕಲಾವತಿ ತನ್ನನ್ನು ಮದುವೆಯಾಗುವಂತೆ ಪಟ್ಟು ಹಿಡಿದು ಕುಳಿತಿದ್ದಾರೆ. ಸತ್ತರೂ ಬಿಟ್ಟು ಹೋಗಲ್ಲ ಎಂದು ಹೇಳುತ್ತಿದ್ದಾಳೆ. ಮುತ್ತು ಮಾತ್ರ ಏನೂ ಅರಿಯದ ಮುಗ್ಧನಂತೆ ನಟಿಸುತ್ತಿದ್ದಾನೆ.
ಸದ್ಯ ಕೈಕೊಟ್ಟ ಪ್ರಿಯಕರನ ಮನೆಯಲ್ಲೇ ನೊಂದ ಮಹಿಳೆ ಉಳಿದುಕೊಂಡಿದ್ದಾಳೆ. ಈ ಬಗ್ಗೆ ಮುತ್ತುವಿನ ಮನೆಯವರನ್ನು ಪ್ರಶ್ನಿಸಿದರೆ ಅವರು ಜಗಳಕ್ಕೆ ನಿಂತಿದ್ದಾರೆ.