ಮಂಡ್ಯ: ಸರಿಯಾಗಿ ಚಿಕಿತ್ಸೆ ನೀಡದೇ ರೋಗಿಗಳ ಸಾವಿಗೆ ಕಾರಣವಾಗೋ ವೈದ್ಯರಿಗೆ ಸಾರ್ವಜನಿಕರೇ ಬುದ್ಧಿ ಕಲಿಸಿದ ಅದೆಷ್ಟೋ ಉದಾಹರಣೆಗಳನ್ನ ನೀವು ಕೇಳಿರುತ್ತೀರಿ. ಅದಕ್ಕೆ ಭಿನ್ನ ಎಂಬಂತೆ ರೋಗಗ್ರಸ್ಥವಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ತನ್ನನ್ನು ಉಳಿಸಿದ ವೈದ್ಯರಿಗೆ ಮಂಡ್ಯದ ಬಡ ಮಹಿಳೆಯೊಬ್ಬರು ಸನ್ಮಾನ ಮಾಡಿದ್ದಾರೆ. ಈ ಮೂಲಕ ಒಳ್ಳೆ ಕೆಲಸ ಮಾಡಿದರೆ ಸನ್ಮಾನ ತಾನಾಗೇ ನಿಮ್ಮನ್ನು ಹುಡುಕಿಕೊಂಡು ಬರುತ್ತೆ ಎಂಬ ಸಂದೇಶವನ್ನು ವೈದ್ಯಲೋಕಕ್ಕೆ ರವಾನಿಸಿದ್ದಾರೆ.
ಮಂಡ್ಯ ಮಿಮ್ಸ್ ಆಸ್ಪತ್ರೆ ಹಲವು ಬಾರಿ ತನ್ನ ಅವ್ಯವಸ್ಥೆಗಳಿಂದಾಗಿ ಸುದ್ದಿಯಾಗಿತ್ತು. ಆದರೆ ಇದೀಗ ಮಂಡ್ಯ ಮಿಮ್ಸ್ ವೈದ್ಯರ ಕಾಳಜಿಯಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಯೊಬ್ಬರು ಬದುಕುಳಿದಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
Advertisement
Advertisement
ಮದ್ದೂರು ತಾಲೂಕಿನ ತೊರೆಬೊಮ್ಮನಹಳ್ಳಿ ಗ್ರಾಮದ ದಿವ್ಯರಾಣಿ ಎಂಬ ಮಹಿಳೆಗೆ ಏಳು ತಿಂಗಳಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಇದರಿಂದ ಆಗಸ್ಟ್ ತಿಂಗಳಲ್ಲಿ ದಿವ್ಯರಾಣಿ ಅವರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಸ್ಕ್ಯಾನ್ ಮಾಡಿ ನೋಡಿದಾಗ ಮಗುವಿಗೆ ತೊಂದರೆಯಾಗಿದೆ ಎಂಬುದು ಗೊತ್ತಾಗಿತ್ತು. ಜೊತೆಗೆ ಒಂದೂವರೆ ಲೀಟರ್‍ನಷ್ಟು ಪಸ್ ಆಗಿದ್ದು, ಅಪೆಂಡಿಕ್ಯುಲರ್ ಗ್ಯಾಂಗ್ರಿನ್ ಆಗಿತ್ತು. ದೇಹದ ಕೆಲವು ಭಾಗ ಅದಾಗಲೇ ಕೊಳೆಯಲಾರಂಭಿಸಿತ್ತು. ಗರ್ಭಿಣಿಯ ಪ್ರಾಣಕ್ಕೆ ತೊಂದರೆಯಿರುವುದನ್ನು ಅರಿತ ವೈದ್ಯರು ತಕ್ಷಣ ಆಕೆಗೆ ಶಸ್ತ್ರ ಚಿಕಿತ್ಸೆ ಕೂಡ ಮಾಡಿದ್ದರು.
Advertisement
ಅಪೆಂಡಿಕ್ಯುಲರ್ ಗ್ಯಾಂಗ್ರಿನ್ ಇಡೀ ಶರೀರಕ್ಕೆ ಹರಡೋ ಇನ್ಫೆಕ್ಷನ್ ಇರೋ ಖಾಯಿಲೆಯಾಗಿದ್ದು, ತಕ್ಷಣ ವೈದ್ಯರು ಇನ್ಫೆಕ್ಷನ್ ಆಗಿರುವ ಸಣ್ಣ ಕರುಳನ್ನು ತೆಗೆದು ಶಸ್ತ್ರ ಚಿಕಿತ್ಸೆ ಮಾಡಿದ್ದರು. ಆದರೆ ಮಗು ಹೊಟ್ಟೆಯಲ್ಲೇ ಸತ್ತು ಹೋಗಿತ್ತು. ಶಸ್ತ್ರ ಚಿಕಿತ್ಸೆ ಆದ ನಂತರ ದಿವ್ಯರಾಣಿಗೆ 14 ದಿನಗಳ ಕಾಲ ವೆಂಟಿಲೇಟರ್ ನಲ್ಲಿ ಇರಿಸಿದ್ದರು. ಸತತ 52 ದಿನಗಳ ಕಾಲ ಆಸ್ಪತ್ರೆಯಲ್ಲೇ ವೈದ್ಯರು ದಿವ್ಯರಾಣಿಗೆ ಸೂಕ್ತ ಚಿಕಿತ್ಸೆ ನೀಡಿ ಆಕೆ ಗುಣಮುಖರಾದ ನಂತರ ಡಿಸ್ಚಾರ್ಜ್ ಮಾಡಿದ್ದರು.
Advertisement
ಸಂಪೂರ್ಣ ಪ್ರಜ್ಞಾಹೀನರಾಗಿದ್ದ ದಿವ್ಯರಾಣಿಗೆ ವೈದ್ಯರು ನೀಡಿದ ಚಿಕಿತ್ಸೆ ಬಗ್ಗೆ ಅರಿವಿಲ್ಲ. ಕುಟುಂಬಸ್ಥರು ದಿವ್ಯರಾಣಿಗೆ ವೈದ್ಯರು ಆಕೆಯನ್ನು ಉಳಿಸಲು ತೆಗೆದುಕೊಂಡ ಕಾಳಜಿ ಬಗ್ಗೆ ವಿವರಿಸಿ ಹೇಳಿದ್ದರು. ಇದರಿಂದ ಮಿಮ್ಸ್ ಆಸ್ಪತ್ರೆಗೆ ಬಂದ ದಿವ್ಯರಾಣಿ ತನ್ನ ಪ್ರಾಣ ಉಳಿಸಿದ ವೈದ್ಯರಿಗೆ ಶಾಲು ಹೊದಿಸಿ, ಹೂ ಮತ್ತು ಸಿಹಿ ನೀಡಿ ತನ್ನ ಕೈಲಾದ ಮಟ್ಟಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ರೋಗಿಗಳ ಬಗ್ಗೆ ನಿರ್ಲಕ್ಷ್ಯ ವಹಿಸೋ ವೈದ್ಯರಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಳ್ಳೋದು ಎಷ್ಟು ನಿಜವೋ ಅದೇ ರೀತಿ ರೋಗಿಗಳ ಉಳಿವಿಗೆ ಶ್ರಮಿಸೋ ಉತ್ತಮ ವೈದ್ಯರಿಗೆ ಸನ್ಮಾನ ಕೂಡ ಮಾಡಿ ಗೌರವಿಸ್ತಾರೆ ಎನ್ನುವುದಕ್ಕೆ ಮಂಡ್ಯದ ದಿವ್ಯರಾಣಿ ಪ್ರಕರಣ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಬಹುದು.