ಬೆಂಗಳೂರು: ಹೆಂಡತಿ ಜೊತೆ ಜಗಳ ತೆಗೆದ ವ್ಯಕ್ತಿ ಗನ್‌ನಿಂದ ಗುಂಡಿನ ದಾಳಿ ನಡೆಸಿರುವ ಘಟನೆ ಬೆಂಗಳೂರಿನ ಬಸವೇಶ್ವರ ನಗರದ ಹೋಟೆಲ್ ಬಳಿ ನಡೆದಿದೆ. ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಸಾವನ್ನಪ್ಪಿದ್ದಾರೆ.
ಬಾಲಮುರುಗನ್ ತನ್ನ ಪತ್ನಿ ಮೇಲೆ ಗುಂಡು ಹಾರಿಸಿದ ವ್ಯಕ್ತಿ. ಭುವನೇಶ್ವರಿ ಗುಂಡೇಟಿಗೆ ಗಂಭೀರ ಗಾಯಗೊಂಡು ಮೃತಪಟ್ಟ ಮಹಿಳೆ. ವಿಚಾರ ತಿಳಿದ ತಕ್ಷಣ ಮಾಗಡಿ ರೋಡ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹ – 2 ತಿಂಗಳ ಗರ್ಭಿಣಿ ನೇಣಿಗೆ ಶರಣು
ತಮಿಳುನಾಡಿನ ಸೇಲಂ ಮೂಲದ ದಂಪತಿ ಇವರು. ಬಾಲಮುರುಗನ್ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈಗ ರಿಸೈನ್ ಮಾಡಿದ್ದಾನೆ. ಪತ್ನಿ ಭುವನೇಶ್ವರಿ ಬ್ಯಾಂಕ್ ಉದ್ಯೋಗಿ ಆಗಿದ್ದರು. ಪತ್ನಿ ಮೇಲೆ ಅನುಮಾನ ವ್ಯಕ್ತಪಡಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಪತಿ-ಪತ್ನಿ ನಡುವೆ ಕೋರ್ಟ್‌ನಲ್ಲಿ ಡಿವೋರ್ಸ್ ಕೇಸ್ ನಡೆಯುತ್ತಿತ್ತು. ಇಬ್ಬರೂ ಕೋರ್ಟ್‌ಗೆ ಹಾಜರಾಗಿದ್ದರು. ಕೋರ್ಟ್ ಕೇಸ್ ಮುಗಿಸಿ ಹೊರಬಂದಿದ್ದರು. ಈ ವೇಳೆ ಇಬ್ಬರ ನಡುವೆ ಜಗಳ ತಾರಕಕ್ಕೇರಿದೆ. ಆಗ ಬಾಲ ಮುರುಗನ್ ಪತ್ನಿ ಮೇಲೆ ಗನ್ ತೆಗೆದು ಗುಂಡಿನ ದಾಳಿ ನಡೆಸಿದ್ದಾನೆ.
ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆಕೆ ಮೃತಪಟ್ಟಿದ್ದಾರೆ. ಹೆಂಡತಿ ಮೇಲೆ ಗುಂಡು ಹಾರಿಸಿ ಆರೋಪಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಆರೋಪಿ ಪಿಸ್ತೂಲನ್ನು ಅಕ್ರಮವಾಗಿ ತರಿಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಾನಸಿಕ ಖಿನ್ನತೆ – ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

