ಪ್ರಸ್ತುತ ದಿನಗಳಲ್ಲಿ ಕೃಷಿಯಲ್ಲಿ (Agriculture) ವಿಭಿನ್ನ ಬದಲಾವಣೆಗಳಾಗುತ್ತಿವೆ. ಕೃಷಿಯೊಂದಿಗೆ ಹೈನುಗಾರಿಕೆ, ಮೀನುಗಾರಿಕೆಯತ್ತ ರೈತರು ವಾಲುತ್ತಿದ್ದಾರೆ. ಕಡಿಮೆ ಜಾಗದಲ್ಲಿ ಹೆಚ್ಚು ಲಾಭ ಪಡೆಯಲು ವಿನೂತನ ಪ್ರಯತ್ನಗಳಿಗೆ ಕೈಹಾಕಿ ಸಕ್ಸಸ್ ಕೂಡ ಕಂಡಿದ್ದಾರೆ. ಅದೇ ರೀತಿ ಪತಿಯ ಕೃಷಿ ಹಾಗೂ ಮೀನುಗಾರಿಕೆಯೊಂದಿಗೆ ಕೈಜೋಡಿಸಿ ಮೀನುಗಾರಿಕೆಯ (Fish Farming) ಮೌಲ್ಯವರ್ಧಿತ ಉತ್ಪನ್ನ ತಯಾರಿಸಿ ಯಶಸ್ಸು ಕಂಡಿದ್ದಾರೆ ಕೊಡಗು (Kodagu) ಜಿಲ್ಲೆ ಸಿದ್ದಾಪುರ ಸಮೀಪದ ಗುಹ್ಯದ ಪಟ್ಟಡ ನಮಿತಾ ಅಯ್ಯಪ್ಪ.
ಹೌದು. ಗುಹ್ಯದ ಪಟ್ಟಡ ನಮಿತಾ ಅಯ್ಯಪ್ಪ ಅವರ ಪತಿ ಪಟ್ಟಡ ಶ್ಯಾಂ ಅಯ್ಯಪ್ಪ ಅವರು ಕೃಷಿ, ತೋಟಗಾರಿಕೆಯೊಂದಿಗೆ ಮೀನುಗಾರಿಕೆಯನ್ನೂ ಮಾಡುತ್ತಿದ್ದಾರೆ. ವರ್ಷಕ್ಕೆ ಸುಮಾರು 5 ಟನ್‌ನಷ್ಟು ಮೀನುಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದ್ದಾರೆ. ಕೆಲವೊಮ್ಮೆ ಈ ಮೀನುಗಳು ಮಾರಾಟವಾಗದೇ ಉಳಿದು ಹಾಳಾಗುತ್ತಿರುವುದನ್ನು ಕಂಡು ಬೇಸರಿಸಿಕೊಂಡ ನಮಿತಾ ಹೊಸ ಪ್ರಯತ್ನಕ್ಕೆ ಕೈಹಾಕಿದರು. ಈ ಪ್ರಯತ್ನವೇ ಅವರನ್ನು ಇಂದು ಯಶಸ್ವಿ ಉದ್ಯಮಿಯನ್ನಾಗಿ ಮಾಡಿದೆ.
Advertisement
Advertisement
ಪ್ರತಿದಿನ ಮಾರಾಟವಾಗದೇ ಮೀನು ಹೆಚ್ಚಿನ ಪ್ರಮಾಣದಲ್ಲಿ ಉಳಿಯುತ್ತಿರುವುದನ್ನು ಕಂಡ ನಮಿತಾ ಅಯ್ಯಪ್ಪ ಮೀನುಗಳಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಚಿಂತನೆ ನಡೆಸಿದರು. ಈಗ ಬರೋಬರಿ 6 ಬಗೆಯ ಮೌಲ್ಯವರ್ಧಿತ ಉತ್ಪನ್ನಗಳನ್ನು ಸ್ವತಃ ತಯಾರಿಸಿ, ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಮಾರಾಟವನ್ನೂ ಮಾಡುತ್ತಿದ್ದಾರೆ. ಮೀನಿನಿಂದ ಫಿಶ್ ಟಿಕ್ಕಾ, ಫಿಶ್ ಫಿಂಗರ್, ಫಿಶ್ ಬಾಂಡ್ ಕೇಕ್, ಫಿಶ್ ಆಯಿಲ್ (ಮೀನಿನ ಎಣ್ಣೆ), ಫಿಶ್ ಕ್ರುಕೇಟ್ಸ್, ಫಿಶ್ ಫಿಲ್ಲೆ ಉತ್ಪನ್ನಗಳನ್ನು ತಯಾರಿಸುತ್ತಿರುವುದು ಮಾತ್ರವಲ್ಲದೇ, ಮೀನಿನ ಉಪ್ಪಿನಕಾಯಿ, ಸಿಗಡಿ ಉಪ್ಪಿನಕಾಯಿಯನ್ನೂ ತಯಾರಿಸಿ, ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದಾರೆ. ಇದಕ್ಕೆ ಉತ್ತಮ ಬೇಡಿಕೆಯೂ ಇದೆ. ಇವರು ತಮ್ಮದೇ ಆದ ʻಜಸ್ಟ್ ಮೀನ್’ ಅಂಗಡಿಯೊಂದನ್ನ ಸಿದ್ದಾಪುರದಲ್ಲಿ ತೆರೆದಿದ್ದಾರೆ. ಇಲ್ಲಿ ಸ್ವತಃ ಅವರೇ ತಯಾರಿಸಿದ ಮೀನಿನ ಎಲ್ಲ ಮೌಲ್ಯವರ್ಧಿತ ಉತ್ಪನ್ನಗಳು ಲಭ್ಯವಿದೆ.
Advertisement
Advertisement
ನಮಿತಾ ಅವರ ಪತಿ ಇತರ ಮೂವರ ಜಂಟಿ ಸಹಿಭಾಗಿತ್ವದಲ್ಲಿ ಗುಹ್ಯದಲ್ಲಿ ʻಆಕ್ವಾ ವೆಂಚಸ್’ ಎಂಬ ಮೀನು ಸಾಕಾಣಿಕಾ ಘಟಕ ತೆರೆದಿದ್ದಾರೆ. ಇಲ್ಲಿ ಮೀನು ಸಾಕಾಣಿಕೆಯಲ್ಲದೇ ಇತರರೂ ಮೀನುಗಾರಿಕೆ ಮಾಡಲು ಸಹಾಯಹಸ್ತ ಚಾಚಿರುವುದು ವಿಶೇಷ. ಮೀನು ಮರಿಗಳನ್ನು ರೈತರಿಗೆ ಮಾರಾಟ ಮಾಡಿ, ಮೀನು ಬೆಳೆದ ನಂತರ ವಾಪಸ್ ಅವರಿಂದ ಖರೀದಿ ಮಾಡುವ ಮೂಲಕ ಜಿಲ್ಲೆಯಲ್ಲಿ ಮೀನುಗಾರಿಕಾ ಕ್ಷೇತ್ರ ವಿಸ್ತರಣೆಗೂ ದುಡಿಯುತ್ತಿದ್ದಾರೆ.
ಖರೀದಿ ಮಾಡಿದ ಮೀನುಗಳಿಂದ ತಮ್ಮದೇಯಾದ ʻಜಸ್ಟ್ ಮೀನ್’ ಎಂಬ ಸಂಸ್ಕರಣಾ ಘಟಕದಲ್ಲಿ ಮೀನುಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಜೊತೆಗೆ, ತಮ್ಮ ಘಟಕದಲ್ಲಿ ನಾಲ್ವರು ಮಹಿಳೆಯರಿಗೆ ಉದ್ಯೋಗವನ್ನೂ ನೀಡಿದ್ದಾರೆ. ಇದಕ್ಕಾಗಿ ನಮಿತಾ ಅವರು ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಿಗಳ ಔಪಚಾರಿಕತೆ (ಪಿಎಂಎಫ್‌ಎಂಇ) ಯೋಜನೆಯ ನೆರವು ಪಡೆದಿದ್ದಾರೆ.
50% ಸಹಾಯಧನ – ಪಿಎಂಎಫ್‌ಎಂಇ ಲಾಭ ನೀವೂ ಪಡೆಯಿರಿ!
ನಮಿತಾ ಅಯ್ಯಪ್ಪ ಅವರ ಉದ್ಯಮ ಯಶಸ್ಸಿನ ಕುರಿತು ʻಪಬ್ಲಿಕ್ ಟಿವಿ ಟಿಜಿಟಲ್ʼ ಆತ್ಮಯೋಜನೆಯ ಉಪನಿರ್ದೇಶಕಿ ಮೈತ್ರಿ ಅವರನ್ನು ಸಂಪರ್ಕಿಸಿದಾಗ ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ. ʻಮೀನು ಸಂಸ್ಕರಣಾ ಘಟಕ’ ಜಿಲ್ಲೆಯಲ್ಲೆ ಅಪರೂಪ ಎನ್ನಬಹುದಾದ ಹಾಗೂ ಹೊಸ ಬಗೆಯ ಪರಿಕಲ್ಪನೆಯಡಿ ಸ್ಥಾಪನೆಯಾಗಿರುವ ಆಹಾರ ಸಂಸ್ಕರಣಾ ಕೇಂದ್ರ ಎನಿಸಿದೆ. ಇದರ ಸ್ಥಾಪನೆಗೆ ಪಿಎಂಎಫ್‌ಎಂಇ ಯೋಜನೆಯಿಂದ ನೆರವು ನೀಡಲಾಗಿದೆ. ಈ ಬಗೆಯ ಅನೇಕ ಅವಕಾಶಗಳು ಪಿಎಂಎಫ್‌ಎಂಇ ಯೋಜನೆಯಲ್ಲಿದೆ ಎಂದು ಹೇಳಿದ್ದಾರೆ.
ಪಿಎಂಎಫ್‌ಎಂಇ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಈ ಯೋಜನೆಯ ಲಾಭ ಪಡೆಯುವವರಿಗೆ 50% ಸಹಾಯಧನ ನೀಡಲಾಗುತ್ತದೆ. ಸುಮಾರು 30 ಲಕ್ಷ ರೂ.ನಿಂದ ಯೋಜನೆಯ ವೆಚ್ಚ ಇದ್ದರೆ, 15 ಲಕ್ಷ ರೂ.ಗಳಷ್ಟು ಸಹಾಯದವನ್ನು ಸರ್ಕಾರ ಕೊಡುತ್ತದೆ. 50% ಸಹಾಯಧನದಲ್ಲಿ ಕೇಂದ್ರ ಸರ್ಕಾರದ ಪಾಲು 35% ಹಾಗೂ ರಾಜ್ಯ ಸರ್ಕಾರದ ಪಾಲು 15% ಇರುತ್ತದೆ. ಈವರೆಗೆ 60 ಮಂದಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಸುಮಾರು 1 ಕೋಟಿ ರೂ. ವರೆಗೆ ಹೂಡಿಕೆ ಮಾಡಬಹುದು. ಇದರಿಂದ ಫಲಾನುಭವಿಗಳು ತಮ್ಮ ಬೆಳೆಗಳನ್ನು ಬ್ರ್ಯಾಂಡಿಂಗ್ ಮಾಡಿಕೊಳ್ಳಬಹುದು ಎನ್ನುತ್ತಾರೆ ಮೈತ್ರಿ.
ಈ ಯೋಜನೆ ಕೃಷಿ ಉತ್ಪನ್ನಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಮಾಡುವವರಿಗೆ ಅನ್ವಯವಾಗುತ್ತದೆ. ಉದಾಹರಣೆಗೆ, ಅಣಬೆ ಬೆಳೆಯುತ್ತೀವಿ ಅಂದ್ರೆ ಅದಕ್ಕೆ ಸಹಾಯಧನ ಇರುವುದಿಲ್ಲ, ಅಣಬೆ ಬೆಳೆದಿದ್ದರೆ ಅದರಿಂದ ಅಣಬೆ ಪೌಡರ್ ನಂತಹ ಉತ್ಪನ್ನಗಳನ್ನು ತಯಾರಿಸುವವರಿಗೆ ಸಹಾಯಧನ ಲಭಿಸಲಿದೆ. ಅದೇ ರೀತಿ ಮುಂದೆ ಮಿಲ್ಲೆಟ್ಸ್, ತೆಂಗು ಉತ್ಪನ್ನ ಪ್ರೊಸೆಸಿಂಗ್‌ಗೆ ಎಣ್ಣೆ ಗಾಣ ಹಾಗೂ ಕಾಫಿ ಬೆಳೆಗಾರರಿಗೆ ಕಾಫಿ ಪೌಡರ್ ರೀತಿ ಉತ್ಪನ್ನ ಬ್ರ್ಯಾಂಡಿಂಗ್ ಮಾಡಲು ಯೋಜನೆ ಕಲ್ಪಿಸಿಕೊಡಲು ಮುಂದಾಗುತ್ತಿದ್ದೇವೆ. ಮಾಹಿತಿಗೆ ಮೊ: 94823 71016 ಸಂಪರ್ಕಿಸಬಹುದು ಎಂದು ಮೈತ್ರಿ ಅವರು ತಿಳಿಸಿದ್ದಾರೆ.
ಮೀನುಗಾರಿಕೆಗೆ ಆಸಕ್ತಿ ಹೇಗಿದೆ?
ಸದ್ಯದ ಮಾಹಿತಿ ಪ್ರಕಾರ ರಾಜ್ಯದ ಒಳನಾಡಿನಲ್ಲಿ 6.53 ಲಕ್ಷ ಮೀನುಗಾರರು ಹಾಗೂ 529 ಸಕ್ರೀಯ ಸಂಘಗಳಿವೆ. ಕರಾವಳಿಯಲ್ಲಿ 1.59 ಲಕ್ಷ ಸಕ್ರೀಯ ಮೀನುಗಾರರಿದ್ದು, 120 ಸಕ್ರೀಯ ಸಹಕಾರ ಸಂಘಗಳಿವೆ. ದೇಶದಲ್ಲಿ ಸುಮಾರು 2.8 ಕೋಟಿ ಮೀನುಗಾರರು ಮೀನುಗಾರಿಕಾ ವಲಯವನ್ನೇ ಅವಲಂಬಿಸಿದ್ದಾರೆ. ಅಲ್ಲದೇ ಭಾರತ ವಿಶ್ವದ 3ನೇ ಅತಿದೊಡ್ಡ ಮೂನು ಉತ್ಪಾದಕ ರಾಷ್ಟ್ರವಾಗಿದೆ. 2022-23ರಲ್ಲಿ 175.45 ಲಕ್ಷ ಟನ್ ಮೀನು ತ್ಪಾದನೆಗೊಂಡಿತ್ತು. ಇದರಲ್ಲಿ ರಾಜ್ಯದ ಒಳನಾಡು ಮೀನುಕೃಷಿ ಪಾಲು 131.13 ಲಕ್ಷ ಟನ್ ಹಾಗೂ ಕರಾವಳಿಯ ಪಾಲು 44.32 ಲಕ್ಷ ಟನ್ ಇತ್ತು ಎಂದು ಅಂಕಿ ಅಂಶಗಳು ತಿಳಿಸಿವೆ.
ರಾಜ್ಯದಲ್ಲಿ ಮೀನುಗಾರಿಕೆ ಹೇಗಿದೆ?
2021-22ರಲ್ಲಿ 10,73,746 ಮೆಟ್ರಿಕ್ ಟನ್ ಮೀನು ಉತ್ಪಾದನೆಯಾಗಿತ್ತು, 11,648 ಕೋಟಿ ರೂ. ವಹಿವಾಟು ನಡೆದಿತ್ತು. 2022-23ರಲ್ಲಿ 12,24,947 ಮೆಟ್ರಿಕ್ ಟನ್ ಉತ್ಪಾದನೆಯಾಗಿ 12,834 ಕೋಟಿ ರೂ. ವಹಿವಾಟು ನಡೆದಿತ್ತು. ಹಾಗೆಯೇ 2023-24ರ ಸಾಲಿನಲ್ಲಿ ಜುಲೈ ಅಂತ್ಯದ ವರೆಗೆ 9,75,997 ಮೆಟ್ರಿಕ್ ಟನ್ ಮೀನು ಉತ್ಪಾದನೆಯಾಗಿದ್ದು, 12,991 ಕೋಟಿ ರೂ. ವಹಿವಾಟು ನಡೆದಿದೆ ಎಂದು ಮೀನುಗಾರಿಕೆ ಇಲಾಖೆ ಮಾಹಿತಿ ನೀಡಿದೆ.
– ಮೋಹನ ಬನ್ನಿಕುಪ್ಪೆ