ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ದಾಳಿಗೆ ಮತ್ತೊಂದು ಬಲಿಯಾಗಿದೆ. ಬೇಲೂರು(Beluru) ತಾಲೂಕಿನ ಅಂಕಿಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಗುಂಪೊಂದು ಮಹಿಳೆ ಮೇಲೆ ದಾಳಿ ಮಾಡಿದ್ದು, ಆನೆ ದಾಳಿಗೆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಜೇಂದ್ರಪುರ(Gajendrapura) ಗ್ರಾಮದ ಚಂದ್ರಮ್ಮ(45) ಕಾಡಾನೆ ದಾಳಿಗೆ ಮೃತಪಟ್ಟ ಮಹಿಳೆ. ಚಂದ್ರಮ್ಮ ಶುಕ್ರವಾರ ಬೆಳಗ್ಗೆ ಡಾ.ಕರುಣ್ ಎಂಬುವವರ ಕಾಫಿ ತೋಟದ ಕೆಲಸಕ್ಕೆ ಬಂದಿದ್ದರು. ಒಟ್ಟು ಹನ್ನೆರಡು ಮಂದಿ ಮಹಿಳೆಯರು ತೋಟಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ಐದು ಕಾಡಾನೆಗಳು ದಾಳಿ ಮಾಡಿವೆ. ಇದನ್ನೂ ಓದಿ: ಸಂತ್ರಸ್ತೆ ಜೊತೆ ವಿವಾಹ; ಪೋಕ್ಸೊ ಕೇಸ್ ಅಪರಾಧಿಯನ್ನು ಜೈಲು ಶಿಕ್ಷೆಯಿಂದ ಪಾರು ಮಾಡಿದ ಸುಪ್ರೀಂ
ಈ ವೇಳೆ ಎಲ್ಲರೂ ದಿಕ್ಕಾಪಾಲಾಗಿ ಓಡಿದ್ದು ಚಂದ್ರಮ್ಮ ಕಾಡಾನೆ ಬಳಿ ಸಿಲುಕಿಕೊಂಡಿದ್ದರು. ಚಂದ್ರಮ್ಮನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಆನೆ ಕಾಲಿನಿಂದ ತುಳಿದು ಭೀಕರವಾಗಿ ಸಾಯಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: 51 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರ ಆದೇಶ
ಈ ವೇಳೆ ಮೃತದೇಹ ಮೇಲೆತ್ತಲು ಬಿಡದೆ ಸ್ಥಳೀಯರು ದಿಢೀರ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಡಾನೆ ದಾಳಿಯಿಂದ ಅಮಾಯಕರು ಸಾವನ್ನಪ್ಪುತ್ತಿದ್ದಾರೆ. ಕಳೆದ 5 ತಿಂಗಳಲ್ಲಿ 6 ಮಂದಿ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ಅರಣ್ಯ ಸಚಿವರು ಕೇವಲ ಭರವಸೆ ನೀಡುತ್ತಿದ್ದಾರೆ ಹೊರತು ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು. ಅಲ್ಲದೇ ಸ್ಥಳಕ್ಕೆ ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಬೇಕು ಅಲ್ಲಿಯವರೆಗೂ ಮೃತದೇಹ ಮೇಲೆತ್ತಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಯಾವುದೇ ಅಹಿತರಕ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು. ಬಳಿಕ ಸ್ಥಳಕ್ಕೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಎಸ್ಪಿ ಮಹಮದ್ ಸುಜೇತಾ, ಸಿಸಿಎಫ್ ಏಡುಕುಂಡಲ, ಡಿಎಫ್‌ಓ ಸೌರಭ್‌ಕುಮಾರ್ ಆಗಮಿಸಿ ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು. ಇದನ್ನೂ ಓದಿ: ತಮನ್ನಾನು ಬೇಡ, ಸುಮನ್ನಾನು ಬೇಡ ಮೈಸೂರು ಸ್ಯಾಂಡಲ್ ಸೋಪ್‌ಗೆ ನಾನೇ ರಾಯಭಾರಿ ಆಗ್ತೀನಿ: ವಾಟಾಳ್ ನಾಗರಾಜ್
ಈ ವೇಳೆ ಬೆಳಗ್ಗೆ ನಡೆದ ಘಟನೆಯನ್ನು ವಿವರಿಸಿದ ಚಂದ್ರಮ್ಮ ಜೊತೆಗಿದ್ದ ಮಹಿಳೆಯರು ಕಣ್ಣೀರಿಟ್ಟರು. ಅಲ್ಲದೇ ಕಾಡಾನೆ ಪೀಡಿತ ಪ್ರದೇಶದ ಜನರು ಕಾಡಾನೆಗಳಿಂದ ಪ್ರತಿನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ತೆರೆದಿಟ್ಟರು. ನಂತರ ಪ್ರತಿಭಟನಾಕಾರರನ್ನು ಉದ್ದೇಶಿ ಮಾತನಾಡಿದ ಅಧಿಕಾರಿಗಳು ಹಲವು ಭರವಸೆಗಳನ್ನು ನೀಡಿ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಪರಂ ವಿರುದ್ಧದ ಷಡ್ಯಂತ್ರಕ್ಕೆ ಕಾಂಗ್ರೆಸ್‌ನ ಮಹಾನಾಯಕನೇ ಸೂತ್ರಧಾರ: ಹೆಚ್‌ಡಿಕೆ ಬಾಂಬ್
ಈಗಿನಿಂದಲೇ ಕಾಡಾನೆ ಚಲನವಲನದ ಬಗ್ಗೆ ಸರಿಯಾದ ಮಾಹಿತಿ ನೀಡಿ, ಕಾಡಾನೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸರ್ಕಾರದೊಂದಿಗೆ ಚರ್ಚೆ ನಡೆಸುತ್ತೇವೆ. ರಾತ್ರಿ ವೇಳೆ ವಿದ್ಯುತ್ ಕಡಿತ ಮಾಡದಂತೆ ಚೆಸ್ಕಾಂ ಇಲಾಖೆಗೆ ಸೂಚನೆ ನೀಡಲಾಗಿದೆ. ಕಾಡಾನೆ ಹಾವಳಿ ತಪ್ಪಿಸಲು ಸಾಕಷ್ಟು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿ ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು. ಇದನ್ನೂ ಓದಿ: ಹೌದು ನಾವು ನ್ಯಾಷನಲ್ ಹೆರಾಲ್ಡ್‌ಗೆ ದೇಣಿಗೆ ಕೊಟ್ಟಿದ್ದೇವೆ, ತಪ್ಪೇನಿದೆ?: ಡಿಕೆಶಿ ಸಮರ್ಥನೆ
ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೇಲೂರು ತಾಲ್ಲೂಕು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅರೇಹಳ್ಳಿ ಪೊಲೀಸ್ ಠಾಣೆ(Arehalli Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.