2025ರ ಹೊಸವರ್ಷಕ್ಕೆ ಕ್ಷಣಗಣನೆ ಬಾಕಿಯಿದೆ. ಹೊಸ ವರ್ಷ ಅಂದ್ರೆ ಹೊಸ ವಿಷಯಗಳೇ ನೆನಪಿಗೆ ಬರುತ್ತವೆ. ಹೊಸ ಸಂಕಲ್ಪಗಳು, ಹೊಸ ಹವ್ಯಾಸಗಳು, ಹೀಗೆ ಬದುಕನ್ನು ಬದಲಾಯಿಸಲು ಹೊಸ ನಿರ್ಧಾರ ತೆಗೆದುಕೊಳ್ಳಲು ಹೊಸ ವರ್ಷ ಒಳ್ಳೆಯ ಅವಕಾಶ. ಸಕಾರಾತ್ಮಕ ವಿಷಯ ಸಂಕಲ್ಪ ಮಾಡುವುದರಿಂದ ಬದುಕಿನಲ್ಲಿ ಒಳ್ಳೆಯ ಪರಿಣಾಮಗಳನ್ನು ಕಾಣಬಹುದು. ಹಾಗಾಗಿ ಮುಂಬರುವ ಹೊಸವರ್ಷದಲ್ಲಾದರೂ ಭಾರತೀಯ ಕ್ರೀಡಾಪಟುಗಳು ಇನ್ನಷ್ಟು ದಾಖಲೆಗಳನ್ನು ಬರೆದು ಇತಿಹಾಸ ನಿರ್ಮಿಸಲಿ ಎನ್ನುವುದು ಆಶಯ. ಅದಕ್ಕೂ ಮುನ್ನ 2024ರ ವರ್ಷದಲ್ಲಿ ಕಂಡ ಅವಿಸ್ಮರಣೀಯ ದಿನಗಳನ್ನು ನಾವು ನೆನಪಿಸಿಕೊಳ್ಳಲೇಬೇಕು. ಕಹಿ ಘಟನೆಗಳನ್ನು ಮರೆಯುತ್ತಾ, ಸಿಹಿ ನೆನಪುಗಳನ್ನು ಹೊತ್ತು ಮುಂದೆ ಸಾಗಬೇಕು. ಈ ವರ್ಷ ಕ್ರೀಡಾಲೋಕ ಏನೆಲ್ಲಾ ಏಳು-ಬೀಳುಗಳನ್ನು ಕಂಡಿದೆ? ಅವುಗಳಲ್ಲಿ ಇಣುಕುನೋಟ ಇಲ್ಲಿದೆ…..
Advertisement
ʻವಿಶ್ವಗುರುʼವಾದ ಭಾರತ
Advertisement
ಕಳೆದ ಜೂನ್ ತಿಂಗಳಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನ ಆತಿಥ್ಯದಲ್ಲಿ 2024ರ ಟಿ20 ವಿಶ್ವಕಪ್ ಟೂರ್ನಿ ನಡೆಯಿತು. ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳಿಂದ ರೋಚಕ ಗೆಲುವು ಸಾಧಿಸಿತು. ಗೆಲುವಿನೊಂದಿಗೆ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತು. 11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡ ಟೀಮ್ ಇಂಡಿಯಾ, 2007ರ ಬಳಿಕ 2ನೇ ಟಿ20 ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತು. ಇದು ಒಂದು ಹೆಮ್ಮೆಯಾದರೆ ಟ್ರೋಫಿ ಎತ್ತಿ ಹಿಡಿಯುತ್ತಿದ್ದಂತೆ ಕ್ರಿಕೆಟ್ ದಿಗ್ಗಜರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿ, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
Advertisement
Advertisement
ಒಲಿಂಪಿಕ್ಸ್‌ನಲ್ಲಿ ಸೋಲು-ಗೆಲುವು
2024ರ ಪ್ಯಾರಿಸ್ ಒಲಿಂಪಿಕ್ಸ್ ಭಾರತೀಯ ಕ್ರೀಡಾಜಗತ್ತಿಗೆ ಅವಿಸ್ಮರಣೀಯವಾಗಿತ್ತು. ಪ್ರವೇಶಿಸಿದ ಚೊಚ್ಚಲ ಒಲಿಂಪಿಕ್ಸ್‌ನಲ್ಲೇ ಶೂಟರ್ ಮನು ಭಾಕರ್ ಎರಡು ಕಂಚಿನ ಪದಕ ಗೆದ್ದು ಐತಿಹಾಸಿಕ ದಾಖಲೆ ಬರೆದರು. ಮತ್ತೊಂದೆಡೆ ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರ ಫ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದ ವಿನೇಶ್ ಫೋಗಟ್ ಅಧಿಕ ತೂಕದಿಂದಾಗಿ ಅನರ್ಹಗೊಂಡರು. ಈ ಘಟನೆ ದೇಶಾದ್ಯಂತ ಸದ್ದು ಮಾಡಿತ್ತು. ಅಲ್ಲದೇ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನಲ್ಲಿ ಕಂಚುಗೆಲ್ಲುವ ಭರವಸೆ ಮೂಡಿಸಿದ್ದ ಲಕ್ಷ್ಯಸೇನ್ ಮೊಣಕೈ ಗಾಯದಿಂದಾಗಿ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರು. ನೀರಜ್ ಚೋಪ್ರಾ ಬೆಳ್ಳಿ ಪದಕ್ಕೆ ತೃಪ್ತಿಪಟ್ಟುಕೊಂಡರು.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಶ್ವಿನ್ ಗುಡ್‌ಬೈ
ವರ್ಷದ ಕೊನೆಯಲ್ಲಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟಿಗೆ 38 ವರ್ಷದ ಹಿರಿಯ ಆಟಗಾರ, ಸ್ಪಿನ್ ಮಾಂತ್ರಿಕ ಆರ್. ಅಶ್ವಿನ್ ನಿವೃತ್ತಿ ಘೋಷಿಸಿದರು. ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಅಶ್ವಿನ್ ಆಗಿದ್ದಾರೆ. ಅನಿಲ್ ಕುಂಬ್ಳೆ 619 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದರೆ ಅಶ್ವಿನ್ 537 ವಿಕೆಟ್ ಪಡೆದಿದ್ದರು.
ಗುಕೇಶ್ ವಿಶ್ವ ಚೆಸ್ ಚಾಂಪಿಯನ್
ಇದೇ ಡಿಸೆಂಬರ್ 12ರಂದು ಸಿಂಗಾಪುರದಲ್ಲಿ ನಡೆದ ಚೆಸ್ ಟೂರ್ನಿಯಲ್ಲಿ ಭಾರತದ ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಚೀನಾದ ಪ್ರಶಸ್ತಿ ವಿಜೇತ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್ 18ನೇ ವಯಸ್ಸಿನಲ್ಲೇ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿ ಇತಿಹಾಸ ಸೃಷ್ಟಿಸಿದರು.
ಕೆಕೆಆರ್‌ಗೆ 3ನೇ ಬಾರಿಗೆ ಚಾಂಪಿಯನ್ ಕಿರೀಟ
2024ರ ಐಪಿಎಲ್ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡವು 3ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಶ್ರೇಯಸ್ ಅಯ್ಯರ್ ನಾಯಕತ್ವ ಮತ್ತು ಗೌತಮ್ ಗಂಭೀರ್ ಮಾರ್ಗದರ್ಶನದ ಕೆಕೆಆರ್ ತಂಡ 2016ರ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಟ್ರೋಫಿ ಗೆದ್ದುಕೊಂಡಿತು. 2012-14ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಚಾಂಪಿಯನ್ ಆಗಿದ್ದ ಕೆಕೆಆರ್ ತಂಡ ಈ ಬಾರಿ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಇನ್ನೂ 2025ರ ಐಪಿಎಲ್ ಆವೃತ್ತಿಗೆ ಕಳೆದ ನವೆಂಬರ್‌ನಲ್ಲಿ ನಡೆದ ಮೆಗಾಹರಾಜಿನಲ್ಲಿ ರಿಷಭ್ ಪಂತ್ ದಾಖಲೆಯ 27 ಕೋಟಿ ರೂ.ಗಳಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಬಿಕರಿಯಾದರು.
ವಿಶ್ವದಾಖಲೆ ಬರೆದ ಜಿಂಬಾಬ್ವೆ
2026ರ ಟಿ20 ವಿಶ್ವಕಪ್ ಟೂರ್ನಿಗೆ ನಡೆದ ಪ್ರಾದೇಶಿಕ ಅರ್ಹತಾ ಸುತ್ತಿನಲ್ಲಿ ಜಿಂಬಾಬ್ವೆ ತಂಡವು ಗ್ಯಾಂಬಿಯಾ ವಿರುದ್ಧ 20 ಓವರ್‌ಗಳಲ್ಲಿ ಬರೋಬ್ಬರಿ 344 ರನ್ ಚಚ್ಚಿತು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇನ್ನಿಂಗ್ಸ್‌ವೊಂದರಲ್ಲೇ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಬರೆಯಿತು. ಇದಕ್ಕೂ ಮುನ್ನ ಮಂಗೋಲಿಯಾ ವಿರುದ್ಧ 314 ರನ್ ಗಳಿಸಿದ್ದ ನೇಪಾಳ ಹೆಸರಿನಲ್ಲಿ ಈ ದಾಖಲೆ ದಾಖಲಾಗಿತ್ತು. ಇನ್ನು ಕೆಲವೇ ದಿನಗಳ ಹಿಂದೆ ಬಾಂಗ್ಲಾದೇಶ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 297 ರನ್ ಕಲೆಹಾಕುವ ಮೂಲಕ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತ್ತು. ಇದೀಗ ಜಿಂಬಾಬ್ವೆಯ ತ್ರಿಶತಕದ ಇನ್ನಿಂಗ್ಸ್‌ನಿಂದಾಗಿ ಭಾರತ 3ನೇ ಸ್ಥಾನಕ್ಕೆ ಕುಸಿಯಿತು.
ವರ್ಷದ ಕೊನೆಯಲ್ಲಿ ಒಂದು ಶತಕ, ಹಲವು ದಾಖಲೆ
ಆಸ್ಟ್ರೇಲಿಯಾ ವಿರುದ್ಧ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಕ್ರಿಕೆಟ್‌ನಲ್ಲಿ ನಿತೀಶ್ ರೆಡ್ಡಿ ವರ್ಷದ ಕೊನೆಯಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿ ಹಲವು ದಾಖಲೆ ಬರೆದರು. ಆಸ್ಟ್ರೇಲಿಯಾದಲ್ಲಿ ಶತಕ ಭಾರಿಸಿದ ಭಾರತದ 3ನೇ ಕಿರಿಯ ಆಟಗಾರ, 2020ರ ಬಳಿಕ ಮೆಲ್ಬೋರ್ನ್‌ನಲ್ಲಿ ಶತಕ ಬಾರಿಸಿದ ಏಕೈಕ ಭಾರತೀಯ ಎಂಬ ಖ್ಯಾತಿ ಪಡೆದರಲ್ಲದೇ 8ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಾಗ ಅತಿಹೆಚ್ಚು ರನ್ ಗಳಿಸಿದ ದಿಗ್ಗಜ ಅನಿಲ್ ಕುಂಬ್ಳೆ ಅವರ ದಾಖಲೆಯನ್ನೂ ಉಡೀಸ್ ಮಾಡಿದರು.
ಅತಿಹೆಚ್ಚು ರನ್ ಬಾರಿಸಿದ ಭಾರತದ ಟಾಪ್-5 ಬ್ಯಾಟರ್ಸ್
ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ನಿರಾಸೆ ಅನುಭವಿಸಿದ ಟೀಂ ಇಂಡಿಯಾ ಟಿ20 ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ ಮಾಡಿತು. ಟೀಂ ಇಂಡಿಯಾ ಪ್ರಸಕ್ತ ವರ್ಷದಲ್ಲಿ ಒಟ್ಟು 26 ಪಂದ್ಯಗಳನ್ನಾಡಿ, 22ರಲ್ಲಿ ಜಯ ಸಾಧಿಸಿತು. ಈ ವರ್ಷ ಹಲವು ಯುವ ಆಟಗಾರರು ಅಮೋಘ ಪ್ರದರ್ಶನ ನೀಡಿದರು. ಈ ಪೈಕಿ ಸಂಜು ಸ್ಯಾಮ್ಸನ್ (436 ರನ್), ಸೂರ್ಯಕುಮಾರ್ ಯಾದವ್ (429 ರನ್), ರೋಹಿತ್ ಶರ್ಮಾ (378 ರಮ್), ತಿಲಕ್ ವರ್ಮಾ (306 ರನ್) ಅತಿಹೆಚ್ಚು ರನ್ ಸಿಡಿಸಿದ ಟಾಪ್-5 ಬ್ಯಾರ್‌ಗಳಾಗಿ ಹೊರಹೊಮ್ಮಿದರು.
ಕಿವೀಸ್ ವನಿತೆಯರಿಗೆ ಚೊಚ್ಚಲ ಚಾಂಪಿಯನ್ ಕಿರೀಟ
ಅಕ್ಟೋಬರ್ ತಿಂಗಳು ದುಬೈನಲ್ಲಿ ನಡೆದ ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಮಹಿಳೆಯರ ತಂಡ ಟ್ರೋಫಿ ಮುಡಿಗೇರಿಸಿಕೊಂಡಿತು. 14 ವರ್ಷಗಳ ಬಳಿಕ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್ ತಲುಪಿದ್ದ ನ್ಯೂಜಿಲೆಂಡ್ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ದಕ್ಷಿಣ ಆಫ್ರಿಕಾ ತಂಡ 2ನೇ ಬಾರಿಗೆ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ಟೀಂ ಇಂಡಿಯಾಕ್ಕೆ ಸೋಲಿನ ಕಹಿ
2024ರ ವರ್ಷಾರಂಭದಲ್ಲಿ ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್ ಮಾದರಿಯಲ್ಲಿ ನಂ.1 ಸ್ಥಾನದಲ್ಲಿದ್ದ ಭಾರತ, ವರ್ಷದ ಕೊನೇ ದಿನಗಳಲ್ಲಿ ಸಾಲು-ಸಾಲು ಸೋಲುಗಳನ್ನು ಎದುರಿಸಿತು. 2024ರ ಟಿ20 ವಿಶ್ವಕಪ್ ಗೆದ್ದ ಬಳಿಕ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದಲ್ಲಿ ಸೋಲುಕಂಡಿತು. ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ವೈಟ್‌ವಾಶ್ ಆಗಿ ಕೆಟ್ಟ ದಾಖಲೆ ಹೆಗಲಿಗೇರಿಸಿಕೊಂಡಿತು. ಈ ಬೆನ್ನಲ್ಲೇ ಬಾರ್ಡರ್ ಗವಾಸ್ಕರ್ ಟ್ರೋಫಿಯ 5 ಪಂದ್ಯಗಳ ಸರಣಿಯ ಪೈಕಿ ಮೊದಲ ನಾಲ್ಕು ಪಂದ್ಯಗಳಲ್ಲಿ 2-1 ಹಿನ್ನಡೆ ಅನುಭವಿಸಿತು. ಇದರಿಂದಾಗಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಭಾರೀ ಟೀಕೆಗೆ ಗುರಿಯಾದರು.