ಹಾವೇರಿ: ಅವರಿಬ್ಬರೂ ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಜಾತಿ ಬೇರೆ ಬೇರೆಯಾದರೂ ಪ್ರೀತಿ ಎಂಬ ಎರಡಕ್ಷರ ಅವರಿಬ್ಬರನ್ನು ಒಂದು ಮಾಡಿತ್ತು. ನಾಲ್ಕೈದು ವರ್ಷಗಳ ಕಾಲ ಅನ್ಯೋನ್ಯವಾಗಿದ್ದ ಇವರ ಸಂಸಾರದಲ್ಲಿ ಈಗ ಬಿರುಕು ಮೂಡಿದೆ. ಕಳೆದ ಕೆಲವು ದಿನಗಳಿಂದ ಪತಿರಾಯ ಪತ್ನಿ ಮೇಲೆ ಹಲ್ಲೆ ಮಾಡಿ ಇನ್ನಿಲ್ಲದ ಕಿರುಕುಳ ನೀಡಿ ಕೈಕೊಟ್ಟು ಹೋಗಿದ್ದಾನೆ. ಈಗ ನ್ಯಾಯ ಕೊಡಿಸಿ ಎಂದು ಪೊಲೀಸರ ದುಂಬಾಲು ಬಿದ್ದ ಮಹಿಳೆ ಇವತ್ತು ಎಸ್ಪಿ ಕಚೇರಿಗೆ ಬಂದು ಗಂಡ ಬೇಕು ಗಂಡ ಎಂದು ಕುಳಿತಿದ್ದಾಳೆ.
ಸರ್ ನನ್ನ ಗಂಡನನ್ನ ಹುಡುಕಿ ಕೊಡಿ ಎಂದು ಪೊಲೀಸರ ಮುಂದೆ ಅಳಲು ತೋಡಿಕೊಳುತ್ತಿರೋ ಮಹಿಳೆ. ಹೌದು. ಮೂಲತಃ ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ಹೆಸರು ಯಲ್ಲವ್ವ ಕಳ್ಳೀಮನಿ ಸದ್ಯ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ಖಾಸಗಿ ಹೈಸ್ಕೂಲ್ ನಲ್ಲಿ ದೈಹಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಏಳು ವರ್ಷಗಳ ಹಿಂದೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಐರಣಿ ಗ್ರಾಮದ ನಿಂಗಪ್ಪ ಕಳ್ಳೀಮನಿಯನ್ನು ಪ್ರೀತಿಸಿ ಯಲ್ಲವ್ವ ಮದುವೆಯಾಗಿದ್ದರು.
Advertisement
Advertisement
ಮದುವೆ ನಂತರದ ಕೆಲವು ವರ್ಷಗಳ ಕಾಲ ನಿಂಗಪ್ಪ ಮತ್ತು ಯಲ್ಲವ್ವ ಸಂಸಾರ ಸುಂದರವಾಗಿ ನಡೆಯುತಿತ್ತು. ನಂತರದಲ್ಲಿ ಪತಿ ನಿಂಗಪ್ಪ ಮತ್ತು ಆತನ ಮನೆಯವರು ಯಲ್ಲವ್ವಳಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡೋಕೆ ಶುರು ಮಾಡಿದ್ದರು. ಗರ್ಭಿಣಿ ಆಗಿದ್ದ ವೇಳೆಯೂ ತನ್ನ ಮೇಲೆ ಹಲ್ಲೆ ಮಾಡಿ ಅರ್ಬಾಶನ್ ಆಗುವಂತೆ ಮಾಡಿದ್ದರು. ಆದರೂ ಗಂಡ ಬೇಕು ಎಂದು ಎಲ್ಲವನ್ನೂ ಸಹಿಸಿಕೊಂಡಿದ್ದೆ. ಆದರೆ ಕೆಲವು ದಿನಗಳಿಂದ ಗಂಡ ನಿಂಗಪ್ಪ ತನ್ನನ್ನು ಬಿಟ್ಟು ಹೋಗಿದ್ದಾನೆ. ಹೀಗಾಗಿ ನನಗೆ ಗಂಡ ಬೇಕು. ಹುಡುಕಿಕೊಡಿ ಎಂದು ಯಲ್ಲವ್ವ ಈಗ ನಗರದ ಎಸ್ಪಿ ಕಚೇರಿ ಮುಂದೆ ಪ್ರತಿಭಟಿಸುತ್ತಿದ್ದಾರೆ.
Advertisement
ಅಕ್ಟೋಬರ್ 2 ರಂದು ಹಾವೇರಿ ಗ್ರಾಮೀಣ ಠಾಣೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸುವಂತೆ ಹೇಳಿ ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಮೀಣ ಠಾಣೆ ಪಿಎಸ್‍ಐ ಶಶಿಧರ್ ಪತಿಯನ್ನ ಹುಡುಕಿ ಕೊಡುವುದು ಬಿಟ್ಟು ನಂತರದಲ್ಲಿ ರಾಜಿ ಮಾಡಿಕೊಳ್ಳುವಂತೆ ದುಂಬಾಲು ಬಿದ್ದರು ಎಂದು ಯಲ್ಲವ್ವ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಗ್ರಾಮೀಣ ಠಾಣೆ ಪೊಲೀಸರು ಪತಿಯನ್ನ ಪತ್ತೆ ಮಾಡೋ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿರೋ ಯಲ್ಲವ್ವ ಪೊಲೀಸರು ಪತಿಯನ್ನು ಹುಡುಕಿಕೊಂಡು ಬರೋವರೆಗೂ ಎಸ್ಪಿ ಕಚೇರಿ ಆವರಣದಿಂದ ಹೋಗೋದಿಲ್ಲ. ಪತಿ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿಕೊಳ್ಳಿ ಎಂದರೆ ಪೊಲೀಸರು ಮಿಸ್ಸಿಂಗ್ ಕೇಸ್ ಮಾಡಿಕೊಂಡಿದ್ದಾರೆ. ಹೀಗಾಗಿ ನನಗೆ ನ್ಯಾಯ ಕೊಡಿಸಿ ಎಂದು ಯಲ್ಲವ್ವ ಮಾಧ್ಯಮಗಳ ಬಳಿ ತನ್ನ ಅಳಲು ತೋಡಿಕೊಂಡಿದ್ದಾರೆ.
ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮತ್ತು ಗ್ರಾಮೀಣ ಠಾಣೆ ಪಿಎಸ್‍ಐ ಶಶಿಧರ್, ಮಹಿಳೆಯನ್ನು ಗ್ರಾಮೀಣ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.