ಆನೇಕಲ್: ಮದುವೆಯಾಗಿದ್ದರೂ (Marriage) ಗಂಡನಿಂದ ದೂರವಾಗಿದ್ದ ವಿವಾಹಿತೆಯೊಬ್ಬಳು ಮತ್ತೊಬ್ಬನನ್ನ ಮದುವೆಯಾಗಿ ರಾಜರೋಷವಾಗಿ ಓಡಾಡಿಕೊಂಡಿದ್ದಳು. ಕೊನೆಗೆ ಅವನಿಂದಲೇ ಕೊಲೆಯಾಗಿರುವ ಘಟನೆ ಆನೇಕಲ್ ತಾಲೂಕಿನ ಹೆಬ್ಬಗೋಡಿ (Hebbagodi) ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ (Anekal) ತಾಲೂಕಿನ ಹೆಬ್ಬಗೋಡಿ ವ್ಯಾಪ್ತಿಯ ಸಿಂಗೇನ ಅಗ್ರಹಾರ ನಿರ್ಜನ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಮಂಜುಳಾ (32) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಕೊನೆಯದ್ದು ಅಂತ 92ನೇ ವಯಸ್ಸಿನಲ್ಲಿ ಪ್ಲಾನ್ ಮಾಡಿದ್ದ 5ನೇ ಮದುವೆ ರದ್ದುಪಡಿಸಿದ ಮುರ್ಡೋಕ್
ಕೆಲ ದಿನಗಳ ಹಿಂದೆಯಷ್ಟೇ ಮಂಜುಳಾ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಇತ್ತೀಚೆಗೆ 2ನೇ ಪತಿ ನಾರಾಯಣ ಜೊತೆ ಹೊರಗೆ ಹೋಗಿದ್ದ ಮಂಜುಳಾ ಮತ್ತೆ ವಾಪಸ್ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡಿದ್ದ ಕುಟುಂಬಸ್ಥರು ಹೆಬ್ಬಗೋಡಿ ಠಾಣೆಯಲ್ಲಿ (Hebbagodi Police) ದೂರು ದಾಖಲಿಸಿದ್ದರು. ನಿರ್ಜನ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹ ದೊರೆತಾಗ ಗುರುತು ಪತ್ತೆಗಾಗಿ ಮಂಜುಳಾ ತಂಗಿ ಲಕ್ಷ್ಮಿಯನ್ನ ಕರೆಸಲಾಗಿತ್ತು. ಆಕೆ ಕಿವಿಯೋಲೆ, ಕೊರಳಲ್ಲಿದ್ದ ಸರ ನೋಡಿ ಗುರುತು ಪತ್ತೆಹಚ್ಚಿದ್ದಾರೆ. ಇದನ್ನೂ ಓದಿ: ಶೀಘ್ರವೇ ಬರಲಿದೆ ವಾಟ್ಸಪ್ ಚಾಟ್ ಲಾಕ್ ಮಾಡೋ ಹೊಸ ಫೀಚರ್
ಮದುವೆಯಾಗಿದ್ದರೂ ಸಲುಗೆ ಬೆಳೆಸಿದ್ದ ಮಂಜುಳಾ: ಕಳೆದ 10 ವರ್ಷಗಳ ಹಿಂದೆ ಇಲ್ಲಿನ ಸಂಪಿಗೆನಗರದ ನಿವಾಸಿ ನಾರಾಯಣಪ್ಪ ಹಾಗೂ ಮಂಜುಳಾ ನಡುವೆ ಸ್ನೇಹ ಬೆಳೆದಿತ್ತು. ಮದುವೆಯಾಗಿದ್ದರೂ ಗಂಡನಿಂದ ದೂರವಾಗಿದ್ದ ಮಂಜುಳಾ ರಾಜಾರೋಷವಾಗಿ ನಾರಾಯಣಪ್ಪ ಜೊತೆಗೆ ಸಲುಗೆಯಿಂದ ಓಡಾಡಿಕೊಂಡಿದ್ದಳು. ಹಲವು ಬಾರಿ ಇವರಿಬ್ಬರ ಮಧ್ಯೆ ಕಿರಿಕ್ ಆದಾಗ ಠಾಣೆಯಲ್ಲೇ ನಾರಾಯಣಪ್ಪ ಮದುವೆ ಆಗಿದ್ದ. ಕೆಲ ದಿನಗಳವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆ ನಂತರ ದುಡ್ಡು ಕೊಡುವಂತೆ ನಾರಾಯಣಪ್ಪ, ಮಂಜುಳಾ ಜೊತೆ ಕಿರಿಕ್ ಮಾಡುತ್ತಿದ್ದ. ಅಲ್ಲದೇ ನಿನ್ನನ್ನ ಸುಟ್ಟುಹಾಕಿಬಿಡುತ್ತೇನೆ ಎಂದು ಸಂಬಂಧಿಕರ ಮಧ್ಯೆಯೇ ಬೆದರಿಕೆ ಹಾಕಿದ್ದ.
ಕಳೆದ ಮಾರ್ಚ್ 29 ರಂದು ನಾರಾಯಣಪ್ಪ ಆಕ್ಟೀವಾದಲ್ಲಿ ಮಂಜುಳಾಳನ್ನ ಕರೆದುಕೊಂಡು ಹೋಗಿದ್ದನು, ಇದೇ ವೇಳೆ ಆಕೆಯನ್ನ ಕೊಲೆ ಮಾಡಿ, ನಿರ್ಜನ ಪ್ರದೇಶದಲ್ಲಿ ಸುಟ್ಟುಹಾಕಿದ್ದಾನೆ ಎನ್ನಲಾಗಿದೆ. ಕೆಲ ಗಂಟೆಗಳ ಬಳಿಕ ತಾನೊಬ್ಬನೆ ಮನೆಗೆ ಹಿಂದಿರುಗಿದ್ದಾನೆ ಎಂದು ತಿಳಿದುಬಂದಿದೆ. ಈಗಾಗಲೇ ನಾರಾಯಣಪ್ಪನನ್ನ ಬಂಧಿಸಿರುವ ಹೆಬ್ಬಗೋಡಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.