ತಮ್ಮ ನೆಚ್ಚಿನ ನಟನ ಹೆಸರಿನಲ್ಲಿ ನಾನಾ ರೀತಿಯ ಕೆಲಸಗಳನ್ನು ಮಾಡಿದ ಉದಾಹರಣೆಗಳು ಇವೆ. ಅದರಲ್ಲೂ ಡಾ.ವಿಷ್ಣು ಸೇನಾ ಸಮಿತಿಯು ಪ್ರತಿ ವರ್ಷವೂ ಹತ್ತಾರು ಜನಪರ ಕೆಲಸಗಳನ್ನು ಮಾಡುತ್ತಲೇ ಇರುತ್ತದೆ. ಇದೀಗ ವಿಷ್ಣು ಅಭಿಮಾನಿಯೊಬ್ಬರು (fan) ತಮ್ಮ ಪುತ್ರನಿಗೆ ನೆಚ್ಚಿನ ನಟ ಹೆಸರನ್ನು ಇಟ್ಟಿದ್ದಾರೆ. ಆ ಹೆಸರನ್ನು ನೋಂದಾವಣೆ ಕೂಡ ಮಾಡಿದ್ದಾರೆ. ಈ ಮೂಲಕ ಡಾ.ವಿಷ್ಣುವರ್ಧನ್ (Vishnuvardhan) ಅವರನ್ನು ಸದಾ ಜೀವಂತವಾಗಿರಿಸುವ ಕೆಲಸ ಮಾಡಿದ್ದಾರೆ.
ಈ ವಿಷಯವನ್ನು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ (Veerakaputra Srinivas) ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ‘ಅಭಿಮಾನಿಯ ಅಭಿಮಾನ ತಾಯಿ ಪ್ರೀತಿಯಷ್ಟೇ ಶ್ರೇಷ್ಠ ಎಂಬ ನನ್ನ ಅಭಿಪ್ರಾಯ ಮತ್ತೊಮ್ಮೆ ನಿಜವೆಂದು ಸಾಬೀತಾಯಿತು. ನಿನ್ನ ಅಭಿಮಾನಕ್ಕೆ ಶರಣು ಗೆಳೆಯ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಅಭಿಮಾನಿ ಮಗುವಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಧ್ವನಿಯಿಂದ ಎದುರಿಸಿದ ಟೀಕೆ ಬಗ್ಗೆ ಬಾಯ್ಬಿಟ್ಟ ರಾಣಿ ಮುಖರ್ಜಿ
ಅಂದಹಾಗೆ ರವಿ ದೇವರಮನಿ (Ravi Devarmani) ಹೆಸರಿನ ಈ ಅಭಿಮಾನಿ ಯಾದಗಿರಿ ಜಿಲ್ಲೆಯವರು. ತಮ್ಮ ಮಗನಿಗೆ ವಿಷ್ಣುವರ್ಧನ ದೇವರಮನಿ ಎಂದು ಹೆಸರಿಟ್ಟಿದ್ದಾರೆ. ಚಿಕ್ಕಂದಿನಿಂದಲೂ ವಿಷ್ಣುವರ್ಧನ್ ಅಭಿಮಾನಿಯಾಗಿರುವ ರವಿ, ವಿಷ್ಣು ಹೆಸರಿನಲ್ಲಿ ನಾನಾ ಕೆಲಸಗಳನ್ನು ಮಾಡುತ್ತಲೇ ಇರುತ್ತಾರಂತೆ. ನೆಚ್ಚಿನ ನಟ ತಮ್ಮ ಮನೆಯಲ್ಲಿ ಸದಾ ಓಡಾಡುತ್ತಿರಲಿ ಎನ್ನುವ ಕಾರಣಕ್ಕಾಗಿ ಮಗನಿಗೆ ವಿಷ್ಣು ಹೆಸರು ಇಟ್ಟಿದ್ದಾರೆ.