ಭೋಪಾಲ್: ಮೂರು ವರ್ಷದ ಪುಟ್ಟ ಕಂದಮ್ಮವೊಂದು ಅಮ್ಮ (Mother) ನ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ಮುಗ್ಧತೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಮಗುವಿನ ಮುಗ್ಧತೆಗೆ ನೆಟ್ಟಿಗರು ಕೂಡ ಮಾರು ಹೋಗಿದ್ದಾರೆ.
ಈ ಪ್ರಕರಣವು ಮಧ್ಯಪ್ರದೇಶ (Madhyapradesh) ದ ಬುರ್ಹಾನ್‍ಪುರ ಜಿಲ್ಲೆಯ ಡೆಡ್ತಲೈ ಗ್ರಾಮದಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಪುಟ್ಟ ಬಾಲಕ ತನ್ನ ತಂದೆಯೊಂದಿಗೆ ನೇರವಾಗಿ ಪೊಲೀಸ್ ಠಾಣೆಗೆ ಬರುತ್ತಾನೆ. ಅಲ್ಲದೆ ಪೊಲೀಸರಿಗೆ ದೂರು ನೀಡುತ್ತಾನೆ. ಇದನ್ನು ನಾವು ವೀಡಿಯೋದಲ್ಲಿ ಕೂಡ ಕಾಣಬಹುದಾಗಿದೆ. ಮಹಿಳಾ ಪೊಲೀಸ್ ಒಬ್ಬರ ಬಳಿ ಬಂದ ಕಂದಮ್ಮ, ನನ್ನ ಅಮ್ಮ ನನ್ನನ್ನು ಚಾಕ್ಲೇಟ್ (Chocolate) ತಿನ್ನಲು ಬಿಡುತ್ತಿಲ್ಲ. ಅಲ್ಲದೆ ಆಕೆ ನನ್ನಲ್ಲಿದ್ದ ಚಾಕ್ಲೇಟ್ ಎಲ್ಲವನ್ನೂ ಕದ್ದಿದ್ದಾಳೆ. ಹೀಗಾಗಿ ಆಕೆಯನ್ನು ನೀವು ಜೈಲಿಗೆ (Jail) ಹಾಕಿ ಎಂದು ದೂರಿನಲ್ಲಿ ತಿಳಿಸಿದ್ದಾನೆ.
ಇಷ್ಟು ಮಾತ್ರವಲ್ಲದೆ ನಾನು ಚಾಕ್ಲೇಟ್ ಕೊಡು ಎಂದು ಕೇಳಿದರೆ ಆಕೆ ನನ್ನನ್ನು ಹೊಡೆಯುತ್ತಾಳೆ ಎಂದೂ ಹೇಳುತ್ತಾನೆ. ಇತ್ತ ಮಹಿಳಾ ಕಾನ್ಸ್ ಸ್ಟೇಬಲ್ ಕೂಡ ಮಗುವಿನ ಎಲ್ಲಾ ದೂರುಗಳನ್ನು ಸ್ವೀಕರಿಸಿದಂತೆ ನಟಿಸುತ್ತಾರೆ. ಅಲ್ಲದೆ ಮಗುವಿನ ಮುಂದೆ ದೂರುಗಳನ್ನು ಬರೆದುಕೊಳ್ಳುತ್ತಿರುವುದನ್ನು ನಾವು ವೀಡಿಯೋದಲ್ಲಿ ಗಮನಿಸಬಹುದು. ಬಾಲಕ ತನ್ನ ತೊದಲು ಮಾತಿನಲ್ಲಿಯೇ ಅಮ್ಮನ ಬಗ್ಗೆ ದೂರು ಹೇಳುತ್ತಿರುವುದನ್ನು ಕೇಳಿಸಿಕೊಳ್ಳುತ್ತಿದ್ದ ಇತರೆ ಪೊಲೀಸ್ ಸಿಬ್ಬಂದಿ ಕೂಡ ನಕ್ಕಿದ್ದಾರೆ. ಇದನ್ನೂ ಓದಿ: ಬಾತ್‍ರೂಮ್ ಚಪ್ಪಲಿಗೆ 54% ಆಫರ್ ನೀಡಿದ್ರೂ 8,990 ರೂ. ಬೆಲೆ – ಫೋಟೋ ವೈರಲ್
3yr old gets angry on mother and lodges complaint with police to put her mother in jail for stealing her toffees ???????? pic.twitter.com/edWtdSQaDv
— Prashant | ಪ್ರಶಾಂತ (@prashantgy9) October 18, 2022
ತಾಯಿ ಆತನನ್ನು ಸ್ನಾನ ಮಾಡಿಸಿ ಕಾಡಿಗೆ ಹಚ್ಚುತ್ತಿದ್ದರು. ಈ ವೇಳೆ ಆತ ನನಗೆ ಚಾಕ್ಲೇಟ್ ಬೇಕು ಎಂದು ಹಠ ಮಾಡಿದ್ದಾನೆ. ಇದರಿಂದ ಸಿಟ್ಟುಗೊಂಡ ಆಕೆ ಮೆಲ್ಲನೆ ಕೆನ್ನೆಗೆ ಹೊಡೆದಿದ್ದಾಳೆ. ಈ ವೇಳೆ ಆತ ಅಳಲು ಶುರು ಮಾಡಿದ್ದಾನೆ. ಅಲ್ಲದೆ ಈ ಕೂಡಲೇ ನನ್ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದ್ದಾನೆ. ಹೀಗಾಗಿ ಕರೆದುಕೊಂಡು ಬಂದೆ ಎಂದು ಬಾಲಕನ ತಂದೆ ವಿವರಿಸಿದ್ದಾರೆ.
ಇತ್ತ ಸಬ್ ಇನ್ಸ್ ಪೆಕ್ಟರ್ ಪ್ರಿಯಾಂಕ ನಾಯಕ್ ಪ್ರತಿಕ್ರಿಯಿಸಿ, ಬಾಲಕ ಮುದ್ದು ಮುದ್ದಾಗಿ ನೀಡಿದ ದೂರು ಕೇಳಿ ನಾವೆಲ್ಲರೂ ನಕ್ಕಿದ್ದೇವೆ. ನಂತರ ನಿನ್ನ ತಾಯಿ ಬೈದಿದ್ದರಲ್ಲಿ ಯಾವುದೇ ದುರುದ್ದೇಶ ಇಲ್ಲ. ಅವಳು ನಿನ್ನ ಒಳ್ಳೆಯದಕ್ಕಾಗಿಯೇ ಹೇಳಿದ್ದಾಳೆ ಅಂತ ತಿಳಿಹೇಳಿದ ಬಳಿಕ ಆತ ಮನೆಗೆ ಹಿಂದಿರಿಗಿರುವುದಾಗಿ ತಿಳಿಸಿದ್ದಾರೆ.