ಕನ್ನಡ ಚಿತ್ರರಂಗವೀಗ ಹೊಸಾ ಹರಿವಿನ ಮೂಲಕ ತಾಜಾತನದಿಂದ ನಳನಳಿಸಲಾರಂಭಿಸಿದೆ. ಹೊಸಬರ ತಂಡ, ಹೊಸಾ ಆಲೋಚನೆಗಳಿಂದ ಕಳೆಗಟ್ಟಿಕೊಳ್ಳುತ್ತಿದೆ. ಅದನ್ನು ಮತ್ತಷ್ಟು ಹೊಳಪಾಗಿಸುವಂಥಾ ಮತ್ತೊಂದು ಚಿತ್ರವೀಗ ಸದ್ದೇ ಇಲ್ಲದಂತೆ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ತಯಾರಾಗಿದೆ. `ಸಾರಾಂಶ’ (Saaramsha) ಎಂಬ ಈ ಚಿತ್ರವನ್ನು ಬಹುಮುಖ ಪ್ರತಿಭೆ ಸೂರ್ಯ ವಸಿಷ್ಠ (Surya Vasistha) ನಿರ್ದೇಶನ ಮಾಡಿದ್ದಾರೆ. ಶೀರ್ಷಿಕೆಯಲ್ಲಿಯೇ ವೈಶಿಷ್ಟ್ಯವೊಂದನ್ನು ಬಚ್ಚಿಟ್ಟುಕೊಂಡಂತಿರೋ ಈ ಸಿನಿಮಾ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದೆ.
ವಿಶೇಷವೆಂದರೆ, ಇತ್ತೀಚಿನ ವರ್ಷಗಳಲ್ಲಿ ವಿರಳವಾದರೂ ಹೊಸಾ ಸಾಧ್ಯತೆಗಳತ್ತ ತೆರೆದುಕೊಳ್ಳುತ್ತಿರುವ ಶ್ರುತಿ ಹರಿಹರನ್ (Shruti Hariharan) ಇಲ್ಲಿ ಪ್ರಧಾನ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಓರ್ವ ಕಥೆಗಾರ ತಾನು ಸೃಷ್ಟಿಸಿದ ಪಾತ್ರವನ್ನೇ ಎದುರುಗೊಳ್ಳುವ ರೋಮಾಂಚಕ ಕಥಾ ಎಳೆ, ಆ ಪಾತ್ರವನ್ನು ಕಥೆಗಾರ ಬರೆದನೋ, ಆ ಪಾತ್ರವೇ ಕಥೆಗಾರನ ಮೂಲಕ ಬರೆಸಿಕೊಳ್ಳುತ್ತಿದೆಯೋ ಎಂಬಂಥಾ ಸೂಕ್ಷ್ಮ ಕದಲಿಕೆಯ ಸುತ್ತ ಈ ಸಿನಿಮಾ ಚಲಿಸುತ್ತದೆಯಂತೆ. ಸದ್ಯಕ್ಕೆ ನಿರ್ದೇಶಕರು ಇವಿಷ್ಟು ವಿಚಾರವನ್ನಷ್ಟೇ ಬಿಟ್ಟುಕೊಟ್ಟಿದ್ದಾರೆ. ಅದರ ಜೊತೆಗೆ ಮೋಹಕ ವಾಸ್ತವಿಕತೆ ಅಥವಾ ಮ್ಯಾಜಿಕಲ್ ರಿಯಲಿಸಂ ಎಂಬ ವಿರಳ ಜಾನರಿಗೆ ಈ ಸಿನಿಮಾ ಒಳಪಡಲಿದೆ ಎಂಬ ಸ್ಪಷ್ಟೀಕರಣವನ್ನೂ ಕೊಡುತ್ತಾರೆ.
ಇನ್ನುಳಿದಂತೆ, ಈ ಚಿತ್ರದ ಚಿತ್ರೀಕರಣವನ್ನು ಅಂದುಕೊಂಡಂತೆಯೇ ವ್ಯವಸ್ಥಿತವಾಗಿ ಚಿತ್ರತಂಡ ಮುಗಿಸಿಕೊಂಡಿದೆ. ಇಲ್ಲಿ ಬಹುಮುಖ್ಯವಾಗಿ ನಾಲಕ್ಕು ಪಾತ್ರಗಳ ಸುತ್ತ ಕಥೆ ಚಲಿಸುತ್ತದೆ. ಅದಕ್ಕೆ ದೀಪಕ್ ಸುಬ್ರಹ್ಮಣ್ಯ, ಸೂರ್ಯ ವಸಿಷ್ಠ, ಶೃತಿ ಹರಿಹರನ್, ಶ್ವೇತಾ ಗುಪ್ತ ಜೀವ ತುಂಬಿದ್ದಾರೆ. ಸೂರ್ಯ ವಸಿಷ್ಠ ಮತ್ತು ಗಂಟುಮೂಟೆ ಖ್ಯಾತಿಯ ರೂಪಾ ರಾವ್ ಸಂಭಾಷಣೆ ಬರೆದಿದ್ದಾರೆ. ಆ ದಿನಗಳು, ತಮಸ್ಸು, ಮಠ ಮುಂತಾದ ಸಿನಿಮಾಗಳ ಮೂಲಕ ಖ್ಯಾತರಾಗಿರೋ ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಾರಾಂಶ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದಾವೆ. ಅವೆಲ್ಲವಕ್ಕೆ ಉದಿತ್ ಹರಿತಾಸ್ (ಅಜ್ಞಾತ) ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಮೋದ್ ಮರವಂತೆ ಮತ್ತು ಸೂರ್ಯ ವಸಿಷ್ಠ ಸಾಹಿತ್ಯವಿರೋ ಹಾಡುಗಳಿಗೆ ಮಾಧುರಿ ಶೇಷಾದ್ರಿ ಮತ್ತು ಪಂಚಮ್ ಜೀವಾ ಧ್ವನಿಯಾಗಿದ್ದಾರೆ. ಅಪರಾಜಿತ್ ಹಿನ್ನೆಲೆ ಸಂಗೀತ, ಭೀಮಸೇನ ನಳಮಹರಾಜ, ಗಂಟುಮೂಟೆ ಖ್ಯಾತಿಯ ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. ರವಿ ಕಶ್ಯಪ್ ಮತ್ತು ಆರ್ ಕೆ ನಲ್ಲಮ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.