ಇನ್ಫೋಸಿಸ್ (Infosys) ಎಂಬ ಐ.ಟಿ ದಿಗ್ಗಜ ಸಂಸ್ಥೆಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರ ಹೆಮ್ಮೆ ಹೆಚ್ಚಿಸಿದ ಕನ್ನಡತಿ. ಲಕ್ಷಾಂತರ ಮಂದಿಗೆ ಕೆಲಸ ಕೊಟ್ಟ ಉದ್ಯಮಿ, ಸಮಾಜಸೇವಕಿ, ಲೇಖಕಿ ಸುಧಾಮೂರ್ತಿ (Sudhamurthy) ಅವರ ಸಾಮಾಜಿಕ ಸೇವೆಗಾಗಿ ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಭೂಷಣ (Padma Bhushan) ಪ್ರಶಸ್ತಿ ಪ್ರದಾನ ಮಾಡಿದ್ದರು. ಈ ನಿಟ್ಟಿನಲ್ಲಿ, ಇತ್ತೀಚಿಗೆ ಖ್ಯಾತ ನಿರ್ಮಾಪಕರಾದ ರಮೇಶ್ ರೆಡ್ಡಿ (Ramesh Reddy) ನೇತೃತ್ವದಲ್ಲಿ, `ಸುಧಾಮೂರ್ತಿ ಅವರ ಆತ್ಮೀಯ ಗೆಳೆಯರ ಬಳಗ’ ಮೂಲಕ ಸನ್ಮಾನ ಕಾರ್ಯಕ್ರವನ್ನು ಏರ್ಪಡಿಸಲಾಗಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಧಾಮೂರ್ತಿ ಅವರು.’ನನಗೆ ಸನ್ಮಾನ ಹೊಗಳಿಕೆಗಳು ತುಂಬಾ ಮುಜುಗರ ಮಾಡುತ್ತದೆ. ಆದರೆ, ರಮೇಶ್ ರೆಡ್ಡಿ ಹಲವು ವರ್ಷಗಳಿಂದ ನಮ್ಮ ಸಂಸ್ಥೆಗಾಗಿ ದುಡಿದಿದ್ದಾರೆ. ಅವರ ಕೆಲಸದ ಬಗ್ಗೆ ಇರುವ ಶ್ರದ್ಧೆಯನ್ನು ನಾನು ಮೆಚ್ಚಿದ್ದೇನೆ. ನಾನು ಸನ್ಮಾನ ಸ್ವೀಕರಿಸುವುದರಿಂದ ಹಲವರಿಗೆ ಸಂತೋಷವಾಗುವುದರಿಂದ ಅವರ ಸಂತೋಷದಲ್ಲಿ ನಾನು ಸಂತೋಷ ಕಾಣುತ್ತೇನೆ. ನನ್ನ ಕೆಲಸ ನಾನು ಮಾಡಿದ್ದೀನಿ, ಯಾವತ್ತೂ ಪ್ರಶಸ್ತಿಗಾಗಿ ಕೆಲಸ ಮಾಡಿದವಳು ನಾನಲ್ಲ. ಈಗ ಪ್ರಶಸ್ತಿ ಬಂದಿದ್ದಕ್ಕೆ ಸಂತೋಷ. ಇನ್ನು ಹೆಣ್ಣು ಮಕ್ಕಳಿಗೆ ಒಂದು ಕಿವಿಮಾತು ಹೇಳಲು ಇಚ್ಚಿಸುತ್ತೇನೆ. ಹೆಣ್ಣು ಮಕ್ಕಳು ನಾಲ್ಕು ಗೋಡೆಯ ಮಧ್ಯೆ ಬಂಧಿಯಾಗದೆ, ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು. ನಾನು ನನ್ನ ಸಂಪೂರ್ಣ ಶಕ್ತಿಯನ್ನು ಬಳಸಿಕೊಂಡೆ ಅಷ್ಟೇ. ಎಲ್ಲರಿಂದಲೂ ಇದು ಸಾಧ್ಯವಿದೆ’ ಎಂದರು. ಇದನ್ನೂ ಓದಿ:ಜುಲೈನಲ್ಲಿ ಹೆರಿಗೆ : ಗುಟ್ಟು ಬಿಟ್ಟುಕೊಟ್ಟ ರಾಮ್ ಚರಣ್ ಪತ್ನಿ ಉಪಾಸನಾ
‘ಇನ್ನೊಂದು ಬಹಳ ಮುಖ್ಯವಾದ ಬಿನ್ನಹವೆಂದರೆ, ದಯವಿಟ್ಟು ಎಲ್ಲರೂ ದಿನಕ್ಕೆ ಹತ್ತು ರುಪಾಯಿಯಾದರೂ ಮೂಕಪ್ರಾಣಿಗಳ ಕಲ್ಯಾಣಕ್ಕೆ ಕೂಡಿಡಿ. ಆ ದುಡ್ಡನ್ನು ಪ್ರಾಣಿ ದಯಾ ಸಂಘಗಳಿಗೆ ಕೊಡಿ. ಇದರಿಂದ ಸರಿಯಾದ ಆಹಾರವಿಲ್ಲದೆ ಬಳಲುತ್ತಿರುವ ಪ್ರಾಣಿಗಳಿಗೆ ಆಹಾರ, ಆರೋಗ್ಯ ಸಿಗುತ್ತದೆ’ ಎಂದು ತಮ್ಮ ಮನದಾಳದ ಮಾತುಗಳನ್ನು ತರೆದಿಟ್ಟರು. ಕಾರ್ಯಕ್ರಮದಲ್ಲಿ ಸಾಕಷ್ಟು ಮಂದಿ ಸುಧಾಮೂರ್ತಿ ಅವರ ಆತ್ಮೀಯರು ಮತ್ತು ಅಭಿಮಾನಿಗಳು ಭಾಗವಹಿಸಿದ್ದು, ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.