ದಕ್ಷಿಣ ಕನ್ನಡ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಗಡಾಯಿ ಕಲ್ಲು (Gadaikallu) ಕೂಡ ಒಂದಾಗಿದೆ. ಅರೇ ಗಡಾಯಿ ಕಲ್ಲು ಅಂದ್ರೆ ಭಾರೀ ಗಾತ್ರದ ಬಂಡೆ ಕಲ್ಲು ಅದರಲ್ಲೇನು ವಿಶೇಷ ಇರುತ್ತದೆ? ಅದು ಪ್ರವಾಸಿ ತಾಣ ಹೇಗಾಗುತ್ತದೆ? ಬರೀ ಬಂಡೆಗಲ್ಲು ನೋಡಲು ಅಲ್ಲಿಗೆ ಹೋಗಬೇಕಾ ಎಂಬೆಲ್ಲ ಪ್ರಶ್ನೆಗಳು ನಿಮ್ಮಲ್ಲಿ ಹುಟ್ಟಿಕೊಳ್ಳಬಹುದು. ಆದರೆ ಈ ಗಡಾಯಿ ಕಲ್ಲಿಗೆ ಐತಿಹಾಸಿಕ ಹಿನ್ನೆಲೆ ಇದೆ. ಟಿಪ್ಪು ಸುಲ್ತಾನ್‍ಗೂ ಈ ಗಡಾಯಿ ಕಲ್ಲಿಗೂ ಅವಿನಾಭಾವ ಸಂಬಂಧವಿದೆ. ಈ ಐತಿಹಾಸಿಕ ಚರಿತ್ರೆ ತಿಳಿದುಕೊಂಡರೆ ನಿಮಗೂ ಒಮ್ಮೆ ಅಲ್ಲಿಗೆ ಭೇಟಿ ನೀಡುವ ಆಸಕ್ತಿ ಹುಟ್ಟಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.
ಗಡಾಯಿಕಲ್ಲು ಕುದುರೆಮುಖ ಪರ್ವತ ಶ್ರೇಣಿಯ ಒಂದು ಭಾಗವಾಗಿರುತ್ತದೆ. ಈ ಬೆಟ್ಟದ ಮೇಲ್ಭಾಗದಲ್ಲಿ ಸುಸಜ್ಜಿತವಾದ ಕೋಟೆ ಇದೆ. ಸ್ಥಳೀಯ ಜನರು ಇದನ್ನು ಗಡಾಯಿಕಲ್ಲು, ಜಮಲಾಬಾದ್ ಕೋಟೆ, ನರಸಿಂಹ ಘಡ ಅಂತೆಲ್ಲಾ ಕರೆಯುತ್ತಾರೆ. ಸದ್ಯ ಈ ಜಾಗ ಚಾರಣಿಗರ ಹಾಟ್ ಫೇವರೆಟ್ ಆಗಿದೆ.
ಹೋಗುವುದು ಹೇಗೆ?: ಜಮಲಾಬಾದ್ ಕೋಟೆಯು ಕರ್ನಾಟಕದ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿಯಿಂದ 8 ಕಿ.ಮಿ ಉತ್ತರದಲ್ಲಿದೆ (ಮಂಗಳೂರಿನಿಂದ 65 ಕಿ.ಮಿ). ಇಲ್ಲಿಗೆ ಬೆಳ್ತಂಗಡಿ-ಉಜಿರೆ (Belathangady- Ujire) ರಸ್ತೆಯಲ್ಲಿ ಸಿಗುವ ಲಾಯಿಲ (ಭಗತ್ ಸಿಂಗ್ ವೃತ್ತ) ಎಂಬಲ್ಲಿ ತಿರುಗಿ ಸುಮಾರು 5 ಕಿಮೀ ಪ್ರಯಾಣಿಸಿದಾಗ ಗಡಾಯಿಕಲ್ಲಿಗೆ ಹೋಗುವ ರಸ್ತೆ ಸಿಗುತ್ತದೆ. ಅದರಲ್ಲಿ 2 ಕಿಮೀ ಕ್ರಮಿಸಿದಾಗ ಗಡಾಯಿಕಲ್ಲಿನ ಪ್ರವೇಶ ಸ್ಥಳ ಸಿಗುತ್ತದೆ. ಬೆಳ್ತಂಗಡಿಯಿಂದ ಕಿಲ್ಲೂರು ರಸ್ತೆಯಲ್ಲಿ 8 ಕಿ.ಮೀ ಚಲಿಸಿದರೆ ಮಂಜೊಟ್ಟಿ ಎಂಬ ಸ್ಥಳ ಸಿಗುತ್ತದೆ. ಅಲ್ಲಿಂದ 1 ಕಿ.ಮೀ ದೂರ ಕ್ರಮಿಸಿದರೆ ಗಡಾಯಿ ಕಲ್ಲು ಬೆಟ್ಟ ಸಿಗುತ್ತದೆ.
ಐತಿಹಾಸಿಕ ಹಿನ್ನೆಲೆ ಹಾಗೂ ವಿಶೇಷತೆ: ಕ್ರಿ.ಶ 1794ರಲ್ಲಿ ಟಿಪ್ಪು ಸುಲ್ತಾನ್ ತನ್ನ ತಾಯಿ ಜಮಲಾಬಿಯ ನೆನಪಿಗಾಗಿ ಈ ಕೋಟೆಯನ್ನು ಕಟ್ಟಿಸಿದ್ದನೆಂದು ಹೇಳಲಾಗುತ್ತಿದೆ. ಜೊತೆಗೆ ಮೈಸೂರು ಸಂಸ್ಥಾನವನ್ನು ಆಳಿದ ಟಿಪ್ಪು ತನ್ನ ಸಂಪ್ರದಾಯದಂತೆ ಈ ಕೋಟೆಯ ಹೆಸರು ಬದಲಾಯಿಸಿ ಜಮಾಲಾಬಾದ್ ಎಂದು ಕರೆದನು. ಫ್ರೆಂಚ್ ಎಂಜಿನಿಯರ್‍ಗಳು ಕೋಟೆ ನಿರ್ಮಿಸಿರುವುದರಿಂದ ಇಲ್ಲಿ ಮುಸ್ಲಿಂ ಹಾಗೂ ಫ್ರೆಂಚ್ ಮಾದರಿಯ ವಾಸ್ತು ಶಿಲ್ಪಗಳ ಕುರುಹು ಕಾಣಸಿಗುತ್ತಿವೆ.
ಸಮುದ್ರ ಮಟ್ಟದಿಂದ ಗಡಾಯಿಕಲ್ಲು 1,788 ಅಡಿ ಎತ್ತರದಲ್ಲಿದೆ. ಇದರ ಮೇಲ್ಭಾಗದಲ್ಲಿ ಕೋಟೆ ಕಾಣಬಹುದಾಗಿದೆ. 2,800 ಮೆಟ್ಟಿಲುಗಳನ್ನು ಹತ್ತುತ್ತಾ ಹೋದರೆ ಜಮಲಾಬಾದ್ ಮೇಲ್ಭಾಗ ತಲುಪಬಹುದು. ಗಡಾಯಿಕಲ್ಲಿನ ಮೇಲಕ್ಕೇರುತ್ತಾ ಸಾಗಿದಂತೆ ಒಂದು ದ್ವಾರ ಸಿಗುತ್ತದೆ. ಈ ದ್ವಾರದ ನಂತರ ಕಲ್ಲನ್ನೇ ಕಡಿದು ವಿನ್ಯಾಸಗೊಳಿಸಿ ಮೆಟ್ಟಿಲು ರಚಿಸಲ್ಪಟ್ಟಿದೆ. ತುಂಬಾ ಕಡಿದಾದ ಈ ಮೆಟ್ಟಿಲುಗಳ ಮೇಲೆ ಸಾಗುವುದೇ ಬಹು ದೊಡ್ಡ ಸಾಹಸವಾಗಿರುತ್ತದೆ. ಇದನ್ನೂ ಓದಿ: ಅತ್ಯದ್ಭುತ ವ್ಯೂವ್ ಪಾಯಿಂಟ್ ‘ಎತ್ತಿನ ಭುಜ’ಕ್ಕೆ ಭೇಟಿ ಕೊಟ್ಟು ಪ್ರಕೃತಿಯ ಸೌಂದರ್ಯ ಸವಿಯಿರಿ
ಗಡಾಯಿಕಲ್ಲಿನ ಮೇಲ್ಭಾಗದಲ್ಲಿ ಎರಡು ಕಟ್ಟಡಗಳನ್ನು ಕಾಣಬಹುದಾಗಿದೆ. ಸುಣ್ಣದ ಕಲ್ಲಿನ ಗಾರೆಯಿಂದ ಇದನ್ನು ನಿರ್ಮಿಸಿದ್ದು ಶಸ್ತ್ರಾಸ್ರಗಳನ್ನು ಮತ್ತು ಮದ್ದು ಗುಂಡುಗಳನ್ನು ಸಂಗ್ರಹಿಸಲು ನಿರ್ಮಿಸಲಾಗಿದೆ. ಎರಡನೇ ಕಟ್ಟಡದಲ್ಲಿ ಕೋವಿ ಕಿಂಡಿ ಕಾಣಬಹುದು. ಈ ಕಲ್ಲಿನ ಮೇಲ್ಭಾಗದಲ್ಲಿ ಅನೇಕ ಕಟ್ಟಡಗಳ ಅವಶೇಷಗಳು ಕಂಡುಬರುತ್ತವೆ. ಇವೆಲ್ಲವೂ ಸೈನಿಕರು ಉಳಿಯುತ್ತಿದ್ದ ಮತ್ತು ಆಹಾರ ದಾಸ್ತಾನುಗಳನ್ನು ಸಂಗ್ರಹಿಸಿಡುತ್ತಿದ್ದ ಕೊಠಡಿಗಳು ಆಗಿರಬಹುದೆಂದು ಊಹಿಸಲಾಗುತ್ತಿದೆ.
ಇನ್ನೊಂದು ವಿಶೇಷವೆಂದರೆ, ಬಿರು ಬೇಸಿಗೆಯಲ್ಲೂ ಸದಾ ನೀರಿರುವ ಒಂದು ಕೊಳವಿದೆ. ಇಲ್ಲಿಂದ ಸ್ವಲ್ಪ ಮುಂದೆ ಹೋದರೆ ಸುರಂಗ ಮಾರ್ಗ ಸಿಗುತ್ತದೆ. ಅದರೊಳಗಡೆಯಿಂದ ಮುಂದಕ್ಕೆ ಚಲಿಸುತ್ತಾ ಹೋದರೆ ತುತ್ತ ತುದಿಯಲ್ಲಿರುವ ಕಟ್ಟಡದ ಸಮೀಪ ತಲುಪುತ್ತೇವೆ. ಇಲ್ಲಿ ನಿಂತರೆ ಬೆಳ್ತಂಗಡಿ ಮತ್ತು ಉಜಿರೆ ಪಟ್ಟಣಗಳ ವಿಹಂಗಮ ನೋಟ ಕಣ್ಮನ ಸೆಳೆಯುತ್ತವೆ. ಕೋಟೆಯ ಕೊನೆಯ ಭಾಗದಲ್ಲಿ ಸಂಪೂರ್ಣ ಶಿಥಿಲಗೊಂಡ ಫಿರಂಗಿ ಮನೆ ಇದೆ. ಇಲ್ಲಿಯೇ ಟಿಪ್ಪು ಸುಲ್ತಾನ್ ನ ಸೈನಿಕರು, ಫಿರಂಗಿಗಳಿಗೆ ಅವಶ್ಯವಿರುವ ಮದ್ದು ಗುಂಡುಗಳನ್ನು ಸಂಗ್ರಹಿಸುತ್ತಿದ್ದರು. ಕೋಟೆಯ ಪ್ರಮುಖ ಸ್ಥಳಗಳಲ್ಲಿ ಈ ಫಿರಂಗಿಗಳನ್ನು ಜೋಡಿಸಿ ಇಡಲಾಗಿದೆ. ಕೋಟೆಯ ಒಳಗಡೆ ಧಾವಿಸುವ ಪ್ರತಿಯೊಬ್ಬ ಶತ್ರುಗಳನ್ನು ಇಲ್ಲಿಂದಲೇ ಗುಂಡು ಹಾರಿಸಿ ಟಿಪ್ಪು ಹಿಮ್ಮೆಟ್ಟಿಸುತ್ತಿದ್ದ ಎಂದು ಇತಿಹಾಸ ಹೇಳುತ್ತಿದೆ.
ಈ ಕೋಟೆ ಪ್ರವೇಶಿಸಲು ಇರುವುದು ಒಂದೇ ದಾರಿ. ಅದು ತುಂಬಾ ಕಡಿದಾದ ದಾರಿಯಾಗಿದೆ. ಕ್ರಿ.ಶ 1799ರ ಮೈಸೂರು ಯುದ್ಧದ ಸಂದರ್ಭದಲ್ಲಿ ಈ ಕೋಟೆ ಬ್ರಿಟೀಷರ ವಶವಾಯಿತು. ಈ ಕಡಿದಾದ ದಾರಿಯಲ್ಲಿ ಪಾಶಿಗುಂಡಿ ಪ್ರಪಾತ ಇದೆ. ಯುದ್ಧಗಳಲ್ಲಿ ಸೆರೆ ಸಿಕ್ಕ ಅನೇಕರನ್ನು ಇಲ್ಲಿಂದ ಕೆಳಗೆ ನೂಕಿ ಟಿಪ್ಪು ಸುಲ್ತಾನ್ ಕೊಲ್ಲುತ್ತಿದ್ದನು ಎಂಬುದು ಇತಿಹಾಸದಲ್ಲಿದೆ.
ಕೋಟೆಯೊಳಗೆ ಎರಡು ಬೀಸುವ ಕಲ್ಲು ಕಾಣುತ್ತವೆ. ಒಟ್ಟಿನಲ್ಲಿ ನರಸಿಂಹಗಡ, ಜಮಲಾಗಡ, ಜಮಲಾಬಾದ್ ಇತ್ಯಾದಿ ಹೆಸರುಗಳಿಂದ ಪ್ರಸಿದ್ಧಿ ಪಡೆದಿರುವ ಗಡಾಯಿ ಕಲ್ಲಿನ ಬಗ್ಗೆ ವಿದೇಶಿಯರೂ ಆಕರ್ಷಿತರಾಗಿದ್ದಾರೆ. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಪ್ರಾಚೀನ ಸ್ಮಾರಕಗಳ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿದೆ. ಗಡಾಯಿ ಕಲ್ಲು ಕೂಡಾ ಇದೇ ಇಲಾಖೆಯ ವತಿಯಿಂದ `ರಕ್ಷಿತ ಸ್ಮಾಕರ’ ಎಂದು ಘೋಷಿಸಲ್ಪಟ್ಟಿದೆ.
ಚಾರಣಕ್ಕೆ ನಿಯಮಗಳು: ಗಡಾಯಿ ಕಲ್ಲಿಗೆ ತೆರಳಬೇಕಾದರೆ ಅರಣ್ಯ ಇಲಾಖೆ ಅನುಮತಿ ಪಡೆಯಬೇಕಾಗುತ್ತದೆ. ಅಲ್ಲದೆ ಪ್ರವೇಶ ಶುಲ್ಕವನ್ನು ಕೂಡ ನಿಗದಿ ಮಾಡಲಾಗಿದೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಅಲ್ಲಿ ಎಂಜಾಯ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬೇಸಿಗೆ ಕಾಲ ಚಾರಣಕ್ಕೆ ಬೆಸ್ಟ್. ಮಳೆಗಾಲದಲ್ಲಿ ಕಲ್ಲಿನ ಮೆಟ್ಟಲುಗಳು ಜಾರುವುದರಿಂದ ಹಾಗೂ ಚಳಿಗಾಲದಲ್ಲಿ ಮಂಜಿನ ಕಾಟವಿರುವುದರಿಂದ ಚಾರಣಕ್ಕೆ ಯೋಗ್ಯವಲ್ಲ.
ತಾತ್ಕಾಲಿಕ ನಿಷೇಧ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದ ಪರಿಣಾಮ ಕಳೆದ ಜುಲೈ ತಿಂಗಳಿನಿಂದ ಗಡಾಯಿಕಲ್ಲು ಚಾರಣಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.
Web Stories