ಬೆಂಗಳೂರು: ಇದು `ಒಳಿತು ಮಾಡು ಮನುಸ’ ಅಂತ ಸಮಾಜಕ್ಕೆ ಸಂದೇಶ ಸಾರಿದವರ ನೋವಿನ ಕಥೆ. ಈ ಹಾಡನ್ನ ಕಂಚಿನ ಕಂಠದಲ್ಲಿ ಅಮೋಘವಾಗಿ ಹಾಡಿದ್ದ ಗಾಯಕ ಸಿ. ಅಶ್ವಥ್ ನಮ್ಮೊಂದಿಗಿಲ್ಲ. ಈ ಹಾಡು ಬರೆದವರು, ಸಂಗೀತ ಸಂಯೋಜನೆ ಮಾಡಿದವರ ಕಥೆ ಮಾತ್ರ ಕರುಣಾಜನಕ.
`ಒಳಿತು ಮಾಡು ಮನುಸ.. ನೀ ಇರೋದು ಮೂರು ದಿವಸ’… ಯಾವುದೇ ಆರ್ಕೆಸ್ಟ್ರಾ ಆದ್ರೂ ಈ ಹಾಡಿಲ್ಲದೆ ಕಾರ್ಯಕ್ರಮ ಮುಕ್ತಾಯವಾಗಲ್ಲ. ಈ ಹಾಡು ಅದೆಷೋ ಜನರಿಗೆ ಸ್ಫೂರ್ತಿ. ಕೆಲವರಿಗೆ ಬದುಕು ಬದಲಿಸಿ ಒಳಿತನ್ನ ಕಲಿಸಿರುವ ಶಕ್ತಿ ಈ ಹಾಡಿಗಿದೆ. ಆದ್ರೆ ಈ ಹಾಡಿನ ಹಿಂದೆ ಒಂದು ಕರುಣಾಜನಕ ಕಥೆ ಇದೆ.
Advertisement
ಈ ಹಾಡಿಗೆ ಸಾಹಿತ್ಯ ಬರೆದವರು ನಿರ್ದೇಶಕ ಋಷಿ, ಸಂಗೀತ ಸಂಯೋಜಿಸಿದವರು ಶ್ರೀ ಮಧುರ ನಾಯಿರಿ, ಹಾಡಿದವರು ಸಿ. ಅಶ್ವಥ್. ಅಶ್ವಥ್ ಅಂತೂ ಈಗ ನಮ್ಮೊಂದಿಗಿಲ್ಲ. ಸಾಹಿತ್ಯ ಬರೆದ ಋಷಿ ಜಾಮೀನಿಗಾಗಿ ಕೇವಲ 20 ಸಾವಿರ ರೂಪಾಯಿ ಹೊಂದಿಸಲಾಗದೆ 11 ತಿಂಗಳು ಜೈಲಿನಲ್ಲಿದ್ರು. ಜೈಲಿನಲ್ಲೂ ಇವರನ್ನ ಕೈ ಹಿಡಿದಿದ್ದು ಇದೇ ಒಳಿತು ಮಾಡು ಮನುಸ ಹಾಡು. ಈ ಹಾಡನ್ನ ಋಷಿ ಬರೆದಿದ್ದು ಅನ್ನೋ ಕಾರಣಕ್ಕೆ ಜೈಲಿನಲ್ಲೇ ಇರುವ ಮತ್ತೊಬ್ಬ ಕೈದಿ ಅಜಯ್ ಶಂಕರ್ ಸುಮಾರು 40 ರಿಂದ 50 ಸಾವಿರ ಖರ್ಚು ಮಾಡಿ ಜಾಮೀನು ಕೊಡಿಸಿ ಋಷಿ ಜೈಲಿಂದ ಹೊರಬರುವಂತೆ ಮಾಡಿದ್ದಾರೆ. ಋಷಿ ಇತ್ತೀಚೆಗಷ್ಟೆ ಜೈಲಿಂದ ಹೊರಬಂದಿದ್ದಾರೆ.
Advertisement
Advertisement
ಮರುಭೂಮಿ ಚಿತ್ರಕ್ಕಾಗಿ ಈ ಹಾಡನ್ನ ಮಾಡಲಾಯ್ತು. ಕಾರಣಾಂತರಗಳಿಂದ ಆ ಚಿತ್ರ ರಿಲೀಸ್ ಕೂಡ ಆಗಲಿಲ್ಲ. ಋಷಿ ಕಥೆ ಇದಾದ್ರೆ, ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿರುವ ಶ್ರೀ ಮಧುರ ನಾಯಿರಿ ಕಳೆದ ಆರು ತಿಂಗಳಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಇದ್ದಾರೆ. ತೀವ್ರ ಅನಾರೋಗ್ಯದಿಂದ ಮಧುರ ಬಳಲುತ್ತಿದ್ದು, ಕುಟುಂಬದವರು ಕಂಗಾಲಾಗಿದ್ದಾರೆ. ಕುಟುಂಬದ ಆಧಾರವಾಗಿದ್ದ ಮಧುರ ಹಾಸಿಗೆ ಹಿಡಿದಿರೋದ್ರಿಂದ ಕುಟುಂಬಕ್ಕೂ ನಿತ್ಯ ನೋವಿನ ದಿನವಾಗಿದೆ.
Advertisement
ಹಾಡಿನ ಸಾಹಿತ್ಯ ಇಷ್ಟಪಟ್ಟಿದ್ದ ಸಿ. ಅಶ್ವಥ್ ಮೂರು ಬಾರಿ ತಮ್ಮದೆ ಖರ್ಚಿನಲ್ಲಿ ಸ್ಟುಡಿಯೋಗೆ ಬಂದು ಹೋಗಿ ಹಾಡಿದ್ರಂತೆ. ಐದು ವರ್ಷದ ಹಿಂದೆ ಗಾಯಕ ನವೀನ್ ಸಜ್ಜುಗೆ ಒರಿಜಿನಲ್ ಕರೋಕೆ ನೀಡಿದ್ರು ನಿರ್ದೇಶಕ ಋಷಿ. ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಎದುರು ನವೀನ್ ಸಜ್ಜು ಹಾಡಿದಾಗ ಹಾಡು ಮತ್ತಷ್ಟು ಫೇಮಸ್ ಆಯ್ತು. ಪರಪ್ಪನ ಅಗ್ರಹಾರದಲ್ಲೂ ಈ ಹಾಡನ್ನ ಪ್ರತಿನಿತ್ಯ ಹಾಡ್ತಾರೆ.
ಇಷ್ಟೆಲ್ಲಾ ಒಳಿತುಗಳನ್ನ ಮಾಡಿರುವ ಹಾಡು, ಹಾಡಿನ ಸೃಷ್ಟಿಕರ್ತರಿಗೆ ಮಾತ್ರ ಅದ್ಯಾಕೋ ಬದುಕು ಬರಡಾಗುವಂತೆ ಮಾಡಿದೆ. ಕನ್ನಡ ಚಿತ್ರರಂಗ ದೊಡ್ಡದು, ದೊಡ್ಡ ದೊಡ್ಡ ಮನಸ್ಸಿನವರು ಯಾರಾದ್ರೂ ಇವರ ಸಹಾಯಕ್ಕೆ ಬರಲಿ ಅನ್ನೋದು ನಮ್ಮ ಆಶಯ.