ಶಿಮ್ಲಾ: ಉಚಿತ ಗ್ಯಾರಂಟಿಗಳಿಂದ ಆರ್ಥಿಕ ಬಿಕ್ಕಟು ಎದುರಿಸುತ್ತಿರುವ ಹಿಮಾಚಲ ಪ್ರದೇಶ ಸರ್ಕಾರ Himachal Govt) ಇದೀಗ ಶೌಚಾಲಯಳಿಗೆ ತೆರಿಗೆ (Toilet Tax) ವಿಧಿಸಲು ಮುಂದಾಗಿದೆ ಎಂಬ ವದಂತಿ ಹರಿದಾಡುತ್ತಿದೆ.
ಗ್ಯಾರಂಟಿಗಳ ಹೊಡೆತದಿಂದ ಕಂಗೆಟ್ಟಿರುವ ಹಿಮಾಚಲ ಸರ್ಕಾರ ಈಗಾಗಲೇ ಕ್ಯಾಬಿನೆಟ್ ಸಚಿವರಿಗೆ (Cabinet Ministers) 2 ತಿಂಗಳ ವೇತನ ಕಡಿತಗೊಳಿಸಿದೆ. ಗಾಂಜಾ ಕೃಷಿಯನ್ನು ಕಾನೂನು ಬದ್ಧಗೊಳಿಸಿದೆ. ಪಕ್ಷಾಂತರ ಮಾಡುವ ಶಾಸಕರಿಗೆ ಪಿಂಚಣಿ ಕಡಿತಗೊಳಿಸುವ ಮಸೂದೆಯನ್ನೂ ಅಂಗೀಕರಿಸಿದೆ. ಈ ಬೆನ್ನಲ್ಲೇ ಶೌಚಾಲಯ ಆಸನಗಳನ್ನು ಆಧರಿಸಿ ತೆರಿಗೆ ವಿಧಿಸಲು ಮುಂದಾಗಿದೆ ಎಂಬ ವದಂತಿ ಹರಡಿದೆ. ಈ ನಡುವೆ ಶೌಚಾಲಯಗಳ ಮೇಲೆ ಯಾವುದೇ ಹೆಚ್ಚುವರಿ ಸೆಸ್ ವಿಧಿಸಿಲ್ಲ, ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸಿಎಂ ಸುಖ್ವಿಂದರ್ ಸಿಂಗ್ ಸುಖು (Sukhvinder Singh Sukhu) ಸ್ಪಷ್ಟನೆ ನೀಡಿದ್ದಾರೆ. ನೀರಿಗೆ ವಿಧಿಸುವ ತೆರಿಗೆಯಲ್ಲೇ ಶೇ.25 ಶೌಚಾಲಯ ತೆರಿಗೆಯೂ ಸೇರಿರುತ್ತದೆ. ಅದಕ್ಕೆ ಪ್ರತ್ಯೇಕವಾಗಿ ವಿಧಿಸುವುದಿಲ್ಲ ಎಂದು ಹೇಳಿದ್ದಾರೆ.
ಶಿಮ್ಲಾದಲ್ಲಿ ಈಗಾಗಲೇ ಒಳಚರಂಡಿ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ. ಇನ್ನೂ ಶೌಚಾಲಯ ತೆರಿಗೆಯು ಹಳೆಯ ಅಧಿಸೂಚನೆಯಾಗಿದೆ. ಕೆಲವು ಹೋಟೆಲ್‌ಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ. ಶೀಘ್ರದಲ್ಲೇ ಹೊಸ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಾಲವೆಂಬ ಪರ್ವತಗಳ ಸುಳಿಯಲ್ಲಿ ಹಿಮಾಚಲ – ಆರ್ಥಿಕ ಅಪಾಯದಲ್ಲಿರುವ ರಾಜ್ಯಗಳು ಯಾವುವು? ತಜ್ಞರು ಸೂಚಿಸುವ ಪರಿಹಾರವೇನು?
ಬಿಜೆಪಿ ಕಿಡಿ:
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಿಜಕ್ಕೂ ಇದನ್ನು ನಂಬಲಾಗುತ್ತಿಲ್ಲ. ಪ್ರಧಾನಿ ಮೋದಿ ಅವರು 10ನೇ ವರ್ಷದ ಸ್ವಚ್ಛಭಾರತ್ ಮಿಷನ್ ಆಚರಣೆ ಮಾಡುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್ ಶೌಚಾಲಯಕ್ಕೆ ತೆರಿಗೆ ವಿಧಿಸುವುದಕ್ಕೆ ಮುಂದಾಗಿದೆ. ಮೊದಲು ಅವರ ಕಾಲದಲ್ಲಿ ಒತ್ತಮ ನೈರ್ಮಲ್ಯ ಒದಗಿಸಿರಲಿಲ್ಲ. ಈಗ ಇರುವುದನ್ನೂ ಮುಂದುವರಿಸಿಕೊಂಡು ಹೋಗದಿರುವುದು ನಾಚಿಗೇಡು ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಹೊಡೆತಕ್ಕೆ ಹಿಮಾಚಲ ತತ್ತರ – ಮಂತ್ರಿಗಳು, ಕ್ಯಾಬಿನೆಟ್ ದರ್ಜೆಯ ಸದಸ್ಯರಿಗೆ 2 ತಿಂಗಳ ಸಂಬಳ ಕಟ್
ಅಲ್ಲದೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಸಹ ವಾಗ್ದಾಳಿ ನಡೆಸಿದ್ದಾರೆ. ಹಿಮಾಚಲ ಸರ್ಕಾರವು ನಿರಂತರವಾಗಿ ಜನರ ಮೇಲೆ ಹೊಸ ತೆರಿಗೆಗಳು ಮತ್ತು ನಿರ್ಬಂಧಗಳನ್ನು ಹೇರುತ್ತಿದೆ. ಇದು ಹಿಮಾಚಲ ಸರ್ಕಾರದ ಆರ್ಥಿಕ ದಿವಾಳಿತನ, ನೀತಿ ದಿವಾಳಿತನ ಮತ್ತು ಮಾನಸಿಕ ದಿವಾಳಿತನದ ಪ್ರತಿಬಿಂಬವಾಗಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಹಿಮಾಚಲದಲ್ಲಿ ಗಾಂಜಾ ಕೃಷಿ ಕಾನೂನುಬದ್ಧ – ಆರ್ಥಿಕತೆಯನ್ನು ಹೆಚ್ಚಿಸಲು ಅನುಕೂಲ ಎಂದ ಸರ್ಕಾರ