ನೆಲಮಂಗಲ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮನೆಗಳು ಕುಸಿಯುವ ಪ್ರಕರಣಗಳು ಪದೇ ಪದೇ ಸಾರ್ವಜನಿಕರನ್ನು ಭಯಭೀತವಾಗಿಸುತ್ತಿವೆ. ಈಗ ನೆಲಮಂಗಲ ಸಮೀಪದ ಮಾದಾವಾರದಲ್ಲಿ ಮೂರು ಅಂತಸ್ಥಿನ ಕಟ್ಟಡ ವಾಲಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
ಸುಮಾರು ಎರಡು ವರ್ಷಗಳ ಹಿಂದೆಯಷ್ಟೆ ನಿರ್ಮಾಣ ಮಾಡಿದ್ದ ಕಟ್ಟಡ ಏಕಾಏಕಿ ಸುಮಾರು ಅರ್ಧ ಅಡಿಗೂ ಹೆಚ್ಚು ವಾಲಿರುವುದರಿಂದ ಕಟ್ಟಡದಲ್ಲಿ ವಾಸವಿದ್ದ ಸುಮಾರು 6 ಕುಟುಂಬಗಳು ಆತಂಕಗೊಂಡು ಮನೆಯನ್ನು ಖಾಲಿ ಮಾಡಿದ್ದಾರೆ. ಇನ್ನೂ ಕಟ್ಟಡ ವಾಲಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾದನಾಯಕನಹಳ್ಳಿ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮನೆಯಲ್ಲಿದ್ದ ಎಲ್ಲಾ ಬಾಡಿಗೆದಾರರನ್ನು ಸ್ಥಳಾಂತರ ಮಾಡಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.
ಇನ್ನೂ ಮನೆ ಮಾಲೀಕ ಶ್ರೀನಿವಾಸ್ ಮಾತನಾಡಿ, ನಾನೇ ಖುದ್ದು ಮನೆಯನ್ನು ಕಟ್ಟದ್ದೇನೆ ನಾನೊಬ್ಬ ಕಂಟ್ರ್ಯಾಕ್ಟರ್ ಆಗಿದ್ದು ನನ್ನ ಮನೆಯನ್ನು ನಾನು ಕಳಪೆಯಾಗಿ ಕಟ್ಟಲು ಸಾಧ್ಯವಾ? ಅತ್ಯಂತ ಬಲಿಷ್ಠವಾದ ಪಿಲ್ಲರ್‌ಗಳನ್ನ ಹಾಕಿ ಸುಮಾರು 80 ಲಕ್ಷ ಹಣ ಖರ್ಚು ಮಾಡಿ ಸಾಲ ಮಾಡಿ ಈ ಮನೆಯನ್ನು ನಿರ್ಮಾಣ ಮಾಡಿದ್ದು. ಈ ಘಟನೆಯಿಂದ ನಾನು ಕೂಡ ಭಯಭೀತನಾಗಿದ್ದು ಮನೆಯಲ್ಲಿರುವ ಕುಟುಂಬದವರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಿದ್ದೇನೆ ಎಂದಿದ್ದಾರೆ.
ಇತ್ತ ಇಂಜಿನಿಯರ್ ನೀಡುವ ಮಾಹಿತಿ ಮೇರೆಗೆ ಮುಂದೆ ಯಾವ ಕ್ರಮ ವಸಿಸುವುದಾಗಿ ಮಾಲೀಕ ತಿಳಿಸಿದ್ದು ಸದ್ಯ ಮನೆಯಲ್ಲಿದ್ದವರು ಅಕ್ಕಪಕ್ಕದ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.