– ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ
ಮೈಸೂರು: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕಿಡಿಗೇಡಿ ಹಸುವಿನ ಕೆಚ್ಚಲು ಕತ್ತರಿಸಿದ ಪ್ರಕರಣದ ಬೆನ್ನಲ್ಲೇ ಮೈಸೂರಿನ ನಂಜನಗೂಡಿನಲ್ಲೂ (Nanjanagudu) ಕೂಡ ಕಿಡಿಗೇಡಿಯೊಬ್ಬ ಹಸುವಿನ ಬಾಲ ಕತ್ತರಿಸಿದ್ದಾನೆ.
ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ನಂಜನಗೂಡಿನ ನಂಜುಡೇಶ್ವರ ದೇವಾಲಯಕ್ಕೆ ಹರಕೆ ರೂಪದಲ್ಲಿ ಭಕ್ತರು ಹಸುಗಳನ್ನು ದಾನವಾಗಿ ನೀಡುವ ಪದ್ಧತಿ ಇದೆ. ಹೀಗೆ ದಾನ ನೀಡಿದ ಹಸುಗಳು ದೇವಸ್ಥಾನದ ಆವರಣದಲ್ಲೇ ಇರುತ್ತವೆ. ಹೀಗೆ ಇದ್ದ ಹಸುಗಳನ್ನು ಕದಿಯಲು ಇವತ್ತು ಬೆಳಗಿನ ಜಾವ ಕಳ್ಳ ಬಂದಿದ್ದಾನೆ. ಕಳ್ಳನಿಂದ ಹಸು ತಪ್ಪಿಸಿಕೊಳ್ಳಲು ಮುಂದಾದಾಗ ಮಚ್ಚಿನಿಂದ ಹಸುವಿನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಮಚ್ಚು ಹಸುವಿನ ಬಾಲಕ್ಕೆ ಬಿದ್ದು, ಬಾಲ ತುಂಡಾಗಿ ಹಸುವಿಗೆ ತೀವ್ರ ರಕ್ತಸ್ರಾವ ಉಂಟಾಗಿದೆ. ಇದನ್ನೂ ಓದಿ: ಹಸುವಿನ ಕೆಚ್ಚಲು ಕೊಯ್ದವನು ಮಾನಸಿಕ ಅಸ್ವಸ್ಥ ಅಲ್ಲ, ಹಲಾಲ್ ಕೋರ್ ಸಾಬಿ: ಪ್ರತಾಪ್ ಸಿಂಹ ಕಿಡಿ
ಸ್ಥಳೀಯರಿಗೆ ವಿಚಾರ ತಿಳಿದ ತಕ್ಷಣ ಹಸುವನ್ನು ರಕ್ಷಿಸಲು ಮುಂದಾಗಿದ್ದಾರೆ. ಹಸುವನ್ನು ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಸದ್ಯ ಹಸು ಪ್ರಾಣಾಪಾಯದಿಂದ ಪಾರಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸರು ಕೇಸ್ ದಾಖಲಿಸಿ ಕಳ್ಳನ ಪತ್ತೆಗೆ ಮುಂದಾಗಿದ್ದಾರೆ.
ಭಕ್ತರು ದೇವಸ್ಥಾನಕ್ಕೆ ದಾನವಾಗಿ ನೀಡುವ ಹಸುಗಳ ಕಳ್ಳತನ ನಿರಂತರವಾಗಿ ನಡೆಯುತ್ತಿದೆ. ಗೋಕಳ್ಳರ ಹಾವಳಿಯು ಹೆಚ್ಚಾಗಿದ್ದು, ಇವರಿಂದ ಗೋವುಗಳ ರಕ್ಷಣೆಗೆ ಸೂಕ್ತ ಕ್ರಮ ವಹಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.