‘ನಗುವಿನ ಹೂಗಳ ಮೇಲೆ’ ಚಿತ್ರದ ಮೂಲಕ ಕನ್ನಡಕ್ಕೆ ಬಂದ ತೆಲುಗು ನಿರ್ಮಾಪಕ

Public TV
2 Min Read
Naguvina hugala mele

ಪ್ರೇಮಕಥಾನಕವೆಂಬುದು ಯಾವತ್ತಿದ್ದರೂ ಸಿನಿಮಾ ಫ್ರೇಮಿಗೆ ಫ್ರೆಶ್ ಆಗಿ ಒಗ್ಗುವಂಥಾ ಮಾಯೆ. ಆದರೆ, ನಿರ್ದೇಶಕರು ಯಾವ ರೀತಿಯ ಜಾಣ್ಮೆ ಅನುಸರಿಸುತ್ತಾರೆ? ಅದೆಷ್ಟು ಹೊಸತನದಲ್ಲಿ ಸಿನಿಮಾವನ್ನು ರೂಪಿಸಿದ್ದಾರೆಂಬುದರ ಮೇಲೆ ಪ್ರೇಕ್ಷಕರ ನಿರ್ಧಾರ ನಿಂತಿರುತ್ತೆ. ಅದರಲ್ಲಿಯೂ ಸದಾ ಹೊಸತನಗಳಿಗೆ ಹಾತೊರೆಯುತ್ತಾ, ಆ ಹಾದಿಯಲ್ಲಿಯೇ ಗೆದ್ದಿರೋ ವೆಂಕಟ್ ಭಾರದ್ವಾಜ್ (Venkat Bharadwaj) ಅವರು ಸಾರಥ್ಯ ವಹಿಸಿದ್ದಾರೆಂದ ಮೇಲೆ ನಿರೀಕ್ಷೆ ಮತ್ತಷ್ಟು ತೀವ್ರವಾಗೋದರಲ್ಲಿ ಅಚ್ಚರಿಯೇನಿಲ್ಲ. ಆ ಕಾರಣದಿಂದಲೇ ಗಮನ ಸೆಳೆದು, ಇದೇ ಫೆಬ್ರವರಿ 9ರಂದು ಬಿಡುಗಡೆಗೊಳ್ಳುತ್ತಿರುವ ಚಿತ್ರ `ನಗುವಿನ ಹೂಗಳ ಮೇಲೆ’.

Naguvina hugala mele 1

`ಆಮ್ಲೆಟ್, `ಕೆಂಪಿರ್ವೆ’ ಮುಂತಾದ ಸಿನಿಮಾಗಳ ಮೂಲಕ ತಮ್ಮದು ಭಿನ್ನ ಹಾದಿ ಎಂಬುದನ್ನು ಸಾಬೀತು ಪಡಿಸಿರುವ ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ `ನಗುವಿನ ಹೂಗಳ ಮೇಲೆ’ ನಿರೀಕ್ಷೆಗಳ ಮೆರವಣಿಗೆ ಶುರುವಾಗಿದೆ. ವಿಶೇಷವೆಂದರೆ, ಈ ಚಿತ್ರದ ಮೂಲಕ ತೆಲುಗಿನ ಖ್ಯಾತ ನಿರ್ಮಾಪಕರೊಬ್ಬರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. `ಪಂಥಂ’, `ಬೆಂಗಾಲ್ ಟೈಗರ್’, `ಒಡೇಲ ರೈಲ್ವೇ ಸ್ಟೇಷನ್’ ಮುಂತಾದ ಸೂಪರ್ ಹಿಟ್ ಸಿನಿಮಾಗಳ ನಿರ್ಮಾಪಕರಾಗಿರುವ ಕೆ.ಕೆ ರಾಧಾ ಮೋಹನ್ (KK Radha Mohan) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Naguvina hugala mele 2

ಕೆ.ಕೆ ರಾಧಾ ಮೋಹನ್ ಅವರ ಶ್ರೀ ಸತ್ಯಸಾಯಿ ಆಟ್ರ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೊದಲ ಚಿತ್ರವೆಂಬ ಹೆಗ್ಗಳಿಕೆಯೂ `ನಗುವಿನ ಹೂಗಳ ಮೇಲೆ’ ಚಿತ್ರಕ್ಕೆ ಸಲ್ಲುತ್ತದೆ. ಇದು ನಿಜಕ್ಕೂ ಕನ್ನಡ ಚಿತ್ರರಂಗದ ಘನತೆ ಪರಭಾಷಾ ಚಿತ್ರರಂಗದಲ್ಲಿಯೂ ಮಿಂಚುತ್ತಿರೋದರ ಸಂಕೇತ. ಕೆ.ಕೆ ರಾಧಾ ಮೋಹನ್ ಯಾವುದೇ ಸಿನಿಮಾವನ್ನು ಎಲ್ಲ ದಿಕ್ಕಿನಲ್ಲಿಯೂ ಪರಾಮರ್ಶಿಸಿ ನಿರ್ಮಾಣಕ್ಕಿಳಿಯುವವರು. ವೆಂಕಟ್ ಭಾರದ್ವಾಜ್ ಸಿದ್ಧಪಡಿಸಿಕೊಂಡಿದ್ದ ಕಥೆ, ಅದರಲ್ಲಿ ಮಿಂಚುತ್ತಿದ್ದ ಹೊಸತನಗಳನ್ನು ಕಂಡು ಥ್ರಿಲ್ ಆಗಿಯೇ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರಂತೆ. ಅಂಥಾ ನಂಬಿಕೆಯನ್ನು ಉಳಿಸಿಕೊಳ್ಳುವಂತೆ, ಎಲ್ಲ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಳ್ಳುವಂತೆ ಈ ಸಿನಿಮಾವನ್ನು ನಿರ್ದೇಶನ ಮಾಡಿರುವ ತುಂಬು ತೃಪ್ತಿ ವೆಂಕಟ್ ಭಾರಧ್ವಾಜ್ ಅವರಲ್ಲಿದೆ.

ಹೊಸಾ ತೆರನಾದ ಪ್ರೇಮಕಥನವನ್ನೊಳಗೊಂಡಿರುವ ಚಿತ್ರ `ನಗುವಿನ ಹೂಗಳ ಮೇಲೆ’. ಇದರಲ್ಲಿ ಅಭಿದಾಸ್ ನಾಯಕನಾಗಿ ನಟಿಸಿದ್ದಾರೆ. ಈಗಾಗಲೇ ಸೀರಿಯಲ್ಲುಗಳ ಮೂಲಕ ಮನೆಮಾತಾಗಿರುವ ಅಭಿ ಪಾಲಿಗೆ ಒಂದೊಳ್ಳೆ ಪಾತ್ರವೇ ಸಿಕ್ಕಿದೆಯಂತೆ. ಇನ್ನು ಒಂದಷ್ಟು ಪಾತ್ರಗಳ ಮೂಲಕ ಸೆಳೆದುಕೊಂಡಿದ್ದ ಶರಣ್ಯಾ ಶೆಟ್ಟಿ (Sharanya Shetty) ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿದ್ದಾರೆ. ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಮುಂತಾದವರ ತಾರಾಗಣವಿದೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಅಭಿಷೇಕ್ ಐಯಂಗಾರ್ ಸಂಭಾಷಣೆ, ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Share This Article