Connect with us

ಕೊಡಗು: ವಿದ್ಯಾರ್ಥಿನಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿ ಬಲಿ ತೆಗೆದುಕೊಂಡ ಕಾಡಾನೆ!

ಕೊಡಗು: ವಿದ್ಯಾರ್ಥಿನಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿ ಬಲಿ ತೆಗೆದುಕೊಂಡ ಕಾಡಾನೆ!

– ಘಟನೆಯಿಂದ ಸಹೋದರ ಪಾರು
– ದಾಳಿಯ ರಭಸಕ್ಕೆ ಆನೆ ದಂತವೇ ಕಟ್

ಮಡಿಕೇರಿ: ಸ್ಕೂಟಿಯಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿ ಮತ್ತು ಅಕೆಯ ಸಹೋದರನ ಮೇಲೆ ಕಾಡಾನೆ ದಾಳಿಮಾಡಿದ ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನೆಲ್ಲಿಕಾಡು ಬಳಿ ನಡೆದಿದೆ.

ಮೃತ ದುರ್ಧೈವಿ ವಿದ್ಯಾರ್ಥಿನಿಯನ್ನು 20 ವರ್ಷದ ಸಫಾನಾ ಎಂದು ಗುರುತಿಸಲಾಗಿದೆ.

ಘಟನೆ ವಿವರ: ಇಂದು ಬೆಳಗ್ಗೆ ಸಫಾನಾ ತನ್ನ ಸಹೋದರನ ಜೊತೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕಾಡಾನೆ ಅಡ್ಡಗಟ್ಟಿ ದಾಳಿ ಮಾಡಿದೆ. ಸ್ಕೂಟಿಗೆ ಗುದ್ದಿದ ರಭಸಕ್ಕೆ ಆನೆಯ ದಂತವೇ ಮುರಿದು ಬಿದ್ದಿದೆ. ಈ ವೇಳೆ ಬೈಕ್ ಸವಾರ ಸಫಾನಾ ಸಹೋದರ ಓಡಿ ಹೋಗಿದ್ದು, ಅಪಾಯದಿಂದ ಪಾರಾಗಿದ್ದಾನೆ. ಆದ್ರೆ ಹಿಂಬದಿಯಲ್ಲಿ ಕುಳಿತಿದ್ದ ಸಫಾನಾಳನ್ನು ಮಾತ್ರ ತನ್ನ ಸೊಂಡಿಲಿನಿಂದ ಎತ್ತಿ ಬಿಸಾಡಿದ್ದು ಸಫನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆ ವಿರುದ್ಧ ತೀವ್ರವಾಗಿ ಪ್ರತಿಭಟನೆ ನಡೆಸಿದ್ದಾರೆ. ಕೊಡಗಿನಲ್ಲಿ ದಿನದಿಂದ ದಿನಕ್ಕೆ ಕಾಡಾನೆ ಹಾವಳಿ ಮಿತಿಮೀರಿದ್ದು ಅರಣ್ಯ ಇಲಾಖೆ ಮಾತ್ರ ಏನೂ ಗೊತ್ತಿಲ್ಲದಂತೆ ವರ್ತಿಸುತ್ತಿದೆ. ಇದರಿಂದ ಇಲ್ಲಿನ ಜನ ಭಯದಿಂದಲೇ ಜೀವನ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಇಲ್ಲಿನ ವಿದ್ಯಾರ್ಥಿಗಳು ಗೋಣಿಕೊಪ್ಪ ಕಾಲೇಜಿಗೆ ಈ ಮಾರ್ಗವಾಗಿಯೇ ತೆರಳಬೇಕಾಗುತ್ತದೆ. ಹೀಗಾಗಿ ದಿನನಿತ್ಯ ಆತಂಕದಲ್ಲಿ ಹೋಗಿಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ತಿತಿಮತಿ ಮತ್ತು ಪಾಲಿಬೆಟ್ಟ ರಸ್ತೆಯನ್ನು ಕೆಲ ಕಾಲ ಬಂದ್ ಮಾಡುವಂತೆ ಅಕ್ರೋಶ ವ್ಯಕ್ತಪಡಿಸಿದರು.

ಮೃತಪಟ್ಟ ವಿದ್ಯಾರ್ಥಿನಿ ಕುಟುಂಬಕ್ಕೆ ಸ್ಥಳದಲ್ಲೇ ಪರಿಹಾರ ನೀಡುವವರೆಗೂ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗುವುದಿಲ್ಲ ಅಂತಾ ಗ್ರಾಮಸ್ಥರು ಪಟ್ಟುಹಿಡಿದಿದ್ದರು.

Advertisement
Advertisement