ಡಾಕ್ಟರ್‌ ಆಗಬೇಕೆಂದು ಕನಸು ಕಂಡಿದ್ದ ಹುಡುಗಿ ರಕ್ತದ ಕ್ಯಾನ್ಸರ್‌ಗೆ ಬಲಿ – ಮಗಳ ಆಸೆಯಂತೆ ದೇಹದಾನ ಮಾಡಿದ ಪೋಷಕರು

Public TV
1 Min Read
hassan student blood cancer

ಹಾಸನ: ವೈದ್ಯೆ ಆಗಬೇಕು ಎಂದು ಕನಸು ಕಂಡಿದ್ದ ಹುಡುಗಿ ದ್ವಿತೀಯ ಪಿಯುಸಿ ಓದು ಮುಗಿಯುತ್ತಿರುವಾಗಲೇ ರಕ್ತದ ಕ್ಯಾನ್ಸರ್‌ಗೆ ಬಲಿಯಾಗಿರುವ ಮನಕಲಕುವ ಘಟನೆ ಹಾಸನದಲ್ಲಿ (Hassan) ನಡೆದಿದೆ. ಮಗಳ ಆಸೆಯಂತೆಯೇ ಹಿಮ್ಸ್ ಆಸ್ಪತ್ರೆಗೆ ದೇಹದಾನ ಮಾಡಿ ಪೋಷಕರು ನೋವಿನಲ್ಲೂ ಮಾನವೀಯತೆ ಮೆರೆದಿದ್ದಾರೆ.

ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಕ್ಕೆ 624 ಅಂಕ ಪಡೆದಿದ್ದ ಹಾಸನ ಮೂಲದ ಪ್ರತಿಭಾವಂತ ವಿದ್ಯಾರ್ಥಿನಿ ನೇಹಾ (17) ಕಳೆದ ರಾತ್ರಿ ಸಾವನ್ನಪ್ಪಿದ್ದಾಳೆ. ಪತ್ರಕರ್ತ ಸೋಮೇಶ್ (ಸುಗಂಧರಾಜು) ಅವರ ಪುತ್ರಿ ನೇಹ ಎಸ್.ರಾಜು ಹಾಸನದ ಹೋಲಿ ಚಿಲ್ಡ್ರನ್ ಶಾಲೆಯಲ್ಲಿ ಹತ್ತನೇ ತರಗತಿ ವರೆಗೆ ಓದಿದ್ದು, ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೇ ಎರಡನೇ ರ‍್ಯಾಂಕ್ ಪಡೆದಿದ್ದರು. ನೇಹಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದಕ್ಕೆ, ಹಾಸನ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಗಿತ್ತು. ಇದನ್ನೂ ಓದಿ: ಬಾಲಕಿ ಅಪಹರಿಸಿ 10 ಲಕ್ಷಕ್ಕೆ ಬೇಡಿಕೆ – ಉದ್ಯಮಿ ಕುಟುಂಬ ಅಂದರ್

DOCTOR 1

ವೈದ್ಯೆಯಾಗಬೇಕೆಂಬ ಮಹದಾಸೆಯನ್ನು ಹೊಂದಿದ್ದ ನೇಹಾ ಹಾಲಿ ಬೆಂಗಳೂರಿನ ನಾರಾಯಣ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ನೇಹಾ ಪೋಷಕರು ಸಹ ಮಗಳು ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದರು. ಪ್ರತಿಭಾವಂತ ವಿದ್ಯಾರ್ಥಿನಿ ನೇಹಾಳಿಗೆ ರಕ್ತದ ಕ್ಯಾನ್ಸರ್‌ (Blood Cancer) ಇತ್ತು ಎನ್ನಲಾಗಿದ್ದು, ಕೆಲವು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಕಾಯಿಲೆ ಗಂಭೀರ ಸ್ವರೂಪ ಪಡೆದಿದ್ದು ಕೆಲ ದಿನಗಳ ಹಿಂದೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ಸಂಜೆ ಕೊನೆಯುಸಿರೆಳೆದಳು.

ತಡರಾತ್ರಿ ಎರಡು ಗಂಟೆ ಸುಮಾರಿಗೆ ಮೃತದೇಹವನ್ನು ಹಾಸನ ನಗರಕ್ಕೆ ತರಲಾಯಿತು. ಬೆಳಗ್ಗೆ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಮಗಳ ಇಚ್ಛೆಯಂತೆ ಸೋಮೇಶ್ ದಂಪತಿ ಹಾಗೂ ಇತರರು ನೇಹಾ ಅವರ ಮೃತದೇಹವನ್ನು ಹಿಮ್ಸ್ ಆಸ್ಪತ್ರೆಗೆ ದಾನ ಮಾಡಿದರು. ಆದರೆ ಅವಳ ಮತ್ತು ಹೆತ್ತವರ ಆಸೆ ಕೈಗೂಡುವ ಮುನ್ನವೇ ನೇಹಾ ಇಹಲೋಕ ತ್ಯಜಿಸಿದ್ದು ಪೋಷಕರಲ್ಲಿ ಅತೀವ ದುಃಖ ತರಿಸಿದೆ. ಇದನ್ನೂ ಓದಿ: ಡಾ.ನಟರಾಜ್ ಆತ್ಮಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ: ಮಂಡ್ಯ ಡಿಹೆಚ್‌ಒ

Share This Article