ತುಳುನಾಡು ಅಂದ ಕೂಡಲೇ ಅಲ್ಲಿನ ಆಚರಣೆ, ಕ್ರಮಗಳು ವಿಭಿನ್ನವಾಗಿರುತ್ತವೆ. ತುಳುವರು ಪ್ರಕೃತಿಯನ್ನು ಹೆಚ್ಚಾಗಿ ಆರಾಧನೆ ಮಾಡುತ್ತಾರೆ. ಮರ, ಕಲ್ಲು, ಕುಡಿಯುವ ನೀರು , ಕಾಡಿನ ಮೃಗಗಳಲ್ಲೂ ದೇವರನ್ನು ಕಾಣುವವರಾಗಿದ್ದಾರೆ. ಇಲ್ಲಿ ಭೂಮಿಯನ್ನು ಹೆಣ್ಣು ಎಂದು ಪೂಜಿಸುತ್ತಾರೆ. ಭೂಮಿ ತಾಯಿಯ ಋತುಸ್ರಾವವನ್ನು ಸಂಭ್ರಮಿಸುವುದು ಇಲ್ಲಿನ ವಿಶೇಷ ಆಚರಣೆಗಳಲ್ಲಿ ಒಂದಾಗಿದೆ. ಹೀಗೆ ಭೂಮಿತಾಯಿಯನ್ನು ಆರಾಧನೆ ಮಾಡುವ ಹಬ್ಬವನ್ನು ಕೆಡ್ಡಸ ಎಂದು ಕರೆಯುತ್ತಾರೆ.
Advertisement
ಆಚರಣೆ ಯಾವಾಗ..?: ಇದು ತುಳು ಮಾಸದ ಪೊನ್ನಿ ತಿಂಗಳು ಅಂದರೆ ಮಕರ ಮಾಸದ 27ನೇ ದಿನ ಸಂಜೆಯಿಂದ ಕುಂಭ ಸಂಕ್ರಮಣದವರೆಗೆ ಕೆಡ್ಡಸವನ್ನು ಆಚರಿಸಲಾಗುತ್ತದೆ. ಮೂರು ದಿನ ನಡೆಯುವ ಈ ಹಬ್ಬದ ಆಚರಣೆಯಲ್ಲಿ ಭೂಮಿ ತಾಯಿ ಮದುವೆ ಆಗಿ ಹೊರಹೋಗಿ ಪ್ರಕೃತಿಗೆ ಫಲ ಕೊಡುತ್ತಾಳೆ ಎಂಬುದು ನಂಬಿಕೆ. ಆ ನಂಬಿಕೆಯ ಪ್ರಕಾರ ಇಂದಿಗೂ ಆಚರಣೆ ನಡೆಯುತ್ತಿದೆ. ಈ ದಿನ ಭೂಮಿಗೆ ಗಾಯವಾಗುವಂತಹ ಹಾರೆ, ಪಿಕಾಸಿಯಂತಹ ವಸ್ತುಗಳಿಂದ ಕೆಲಸ ಮಾಡಬಾರದು. ಹಿಂದೊಮ್ಮೆ ಯಾರೋ ಈ ದಿನ ಭೂಮಿಯಲ್ಲಿ ರಕ್ತವನ್ನು ಕಂಡಿದ್ದರು ಎನ್ನುವ ಮಾತು ಇದೆ. ಆದ್ದರಿಂದ ಇಂದು ಕೂಡ ಯಾರೂ ಈ ದಿನ ಇಂತಹ ಕೆಲಸ ಮಾಡುವುದಿಲ್ಲ.
Advertisement
ಆಚರಣೆ ಹೇಗೆ..?: ಕೆಡ್ಡಸದ (Tulunadu Festival Keddsa) ಮೂರನೇ ದಿವಸದಂದು ಮುಂಜಾನೆ ಅಂಗಳ ಗುಡಿಸಿ, ತುಳಸಿಕಟ್ಟೆಯ ಮುಂದೆ ಸೆಗಣಿ ಸಾರಿಸಿ, ಮಸಿ ತುಂಡು, ಸರೋಳಿ ಎಲೆ, ಮಾವಿನ ಎಲೆ, ತೆಂಗಿನಕಾಯಿ, ನನ್ನೆರಿ, ಬಾಳೆಹಣ್ಣು ಜೊತೆಗೆ ಕತ್ತಿ ಹಾಗೂ ಒಂದು ಚೊಂಬು ಇಟ್ಟು, ನೊರೆಕಾಯಿ, ಸೀಗೆಕಾಯಿ ಹಾಗೂ 5 ವೀಳ್ಯದೆಲೆ ಒಂದು ಅಡಿಕೆ, ಪೊರಕೆ ಇಡುವ ಕ್ರಮವಿದೆ. ಇದಾದ ನಂತರ ಮನೆಯ ಯಜಮಾನಿ ಒಂದು ಬೌಲ್‌ನಲ್ಲಿ ಸ್ವಲ್ಪ ಎಣ್ಣೆ ತಂದು ಭೂಮಿಗೆ ಬಿಟ್ಟು ಸಂಜೆಯವರೆಗೆ ಅದನ್ನು ಅಲ್ಲೇ ಬಿಡುವ ಕ್ರಮ ಹಿಂದಿನಿಂದಲೂ ಬಂದಿದೆ.
Advertisement
Advertisement
ಕೆಡ್ಡಸದ ವಿಶೇಷ ಏನು..?: ಕೆಡ್ಡಸದ ವಿಶೇಷ ಅಂದ್ರೆ ನನ್ನೆರಿ. ಕುಚ್ಚಲಕ್ಕಿಯನ್ನು ಹುರಿದು ಹುಡಿಮಾಡಿ, ತುರಿದ ತೆಂಗಿನಕಾಯಿ, ಬೆಲ್ಲ, ಮೆಂತೆ ಹಾಗೂ ತುಪ್ಪ ಮಿಶ್ರಣ ಮಾಡುವುದೇ ನನ್ನೆರಿ. ಇದನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಕೆಡ್ಡಸದ ನನ್ನೆರಿಯನ್ನು ವಾರಗಟ್ಟಲೆ ಇಟ್ಟು ಕೂಡ ತಿನ್ನಬಹುದು. ಇನ್ನೊಂದು ವಿಷಯ ಮನೆಯಲ್ಲಿ ನುಗ್ಗೆ, ಬದನೆ ಸಾಂಬಾರು ಮಾಡುವ ಪದ್ಧತಿ ಇಂದಿಗೂ ರೂಢಿಯಲ್ಲಿದೆ.
ಬೇಟೆಯಾಡುವ ಸಂಪ್ರದಾಯ: ನಡು ಕೆಡ್ಡಸದ ದಿನ ಬೇಟೆಯಾಡುವ ಸಂಪ್ರದಾಯವಿದೆ. ಹಾಗಾಗಿ ಊರಿನವರೆಲ್ಲಾ ಸೇರಿ ಕಾಡಿಗೆ ತೆರಳಿ ಪ್ರಾಣಿಗಳನ್ನು ಬೇಟೆಯಾಡುತ್ತಾರೆ. ಬೇಟೆಯಾಡಿ ಸಿಕ್ಕ ಪ್ರಾಣಿಗಳನ್ನು ಎಲ್ಲರೂ ಹಂಚಿ ತಿನ್ನುವುದು ವಾಡಿಕೆ. ಒಟ್ಟಿನಲ್ಲಿ ʼಕೆಡ್ಡಸದ ಬೋಂಟೆʼ ಎಂಬುದು ತುಳುನಾಡಿನಲ್ಲಿ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ.