ನವೀನ್ ಸಾಗರ್
ಕಾರವಾರ: ಒಂದಿಷ್ಟು ಟ್ರೆಕ್ಕಿಂಗ್ (Trekking) ಮಾಡಬೇಕು, ಪ್ರಕೃತಿ ಸೌಂದರ್ಯ ಸವಿಯಬೇಕು, ಗಿಜಿಗಿಡುವ ಗದ್ದಲ ಬೇಡ, ಸಮುದ್ರಕ್ಕಿಳಿಯಬೇಕು, ಆದ್ರೆ ಸಮಯವೇ ಇಲ್ಲ. ಹೆಚ್ಚು ದಿನ ರಜೆಯೂ ಸಿಗೋದಿಲ್ಲ ಎಂಬ ಬೇಜಾರಾ..? ಹಾಗೆ ನೀವು ಬೇಸರಿಸೋದೇ ಬೇಡ. ಇವೆಲ್ಲವೂ ಒಂದೇ ಕಡೆ ಸಿಕ್ಕಿದ್ರೆ ಯಾರು ತಾನೇ ಪ್ರವಾಸ ಹೋಗದೇ ಇರಲು ಸಾಧ್ಯ. ಇಂತದ್ದೊಂದು ನಮ್ಮ ಕರಾವಳಿಯ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿದೆ. ಕಾರವಾರದ (Karwar) ರವೀಂದ್ರನಾಥ ಕಡಲ ತೀರದಿಂದ ಹತ್ತು ಕಿಲೋಮೀಟರ್ ದೂರ ಬೋಟಿನಲ್ಲಿ ಹೋದರೇ ನಿಮ್ಮನ್ನು ಸ್ವಾಗತಿಸುತ್ತೆ ಐತಿಹಾಸಿಕ ಮಹತ್ವ ಹೊಂದಿದ ದೇವಗಢ (Devgad Dweep) ನಡುಗಡ್ಡೆ. ಈ ದ್ವೀಪ ಲೈಟ್ ಹೌಸ್ ದ್ವೀಪ ಎಂದೇ ಪ್ರಸಿದ್ಧಿ ಪಡೆದಿದೆ. ಹಾಗಿದ್ರೆ ಇಲ್ಲಿಗೆ ಹೋಗೋದು ಹೇಗೆ? ವ್ಯವಸ್ಥೆ ಏನು ಅಂತೀರಾ ಇದರ ವಿವರ ಸಹ ನೀಡ್ತೇವೆ ಓದಿ.
Advertisement
ಲೈಟ್ ಹೌಸ್ ದ್ವೀಪದಲ್ಲಿ ಏನಿದೆ?: ಆರ್ಭಟಿಸುವ ಅರಬ್ಬಿ ಸಮುದ್ರದ ನಡುವೆ ಹಚ್ಚ ಹಸಿರಿನಿಂದ ಕಂಗೊಳಿಸುವ ಸುಂದರ ದ್ವೀಪ ಇದಾಗಿದ್ದು ದ್ವೀಪದ ಸುತ್ತಲೂ ಹಸಿರನ್ನು ಆಲಿಂಗಿಸಿ ಅಲೆಗಳಿಗೆ ಎದೆಕೊಟ್ಟು ನಿಂತ ಬೃಹದಾಕಾರದ ಕಲ್ಲುಗಳು ನೋಡುಗರಿಗೆ ಮುದ ನೀಡುತ್ತದೆ. ದೋಣಿಯಲ್ಲಿ ಸಾಗಿದ ನಂತರ ಏರುದಾರಿಯಲ್ಲಿ ಹತ್ತಿ ಇಳಿದರೆ ಸುಂದರ ನೀಲಿ ಕಡಲು ನಿಮ್ಮನ್ನು ಸ್ವಾಗತಿಸುತ್ತದೆ. ಈ ದ್ವೀಪ 20 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿದೆ. ಇದನ್ನೂ ಓದಿ: ಬ್ಲೂ ಫ್ಲ್ಯಾಗ್ ಖ್ಯಾತಿಯ ಶುಭ್ರ, ಸುಂದರ ಉಡುಪಿಯ ಪಡುಬಿದ್ರೆ ಬೀಚ್!
Advertisement
ಅದೃಷ್ಟವಿದ್ದರೆ ಡಾಲ್ಫಿನ್ ನೋಡಬಹುದು!: ಕೇಂದ್ರ ಸರ್ಕಾರ ಹಾಗೂ ಬಂದರು ಇಲಾಖೆಯ ಉಸ್ತುವಾರಿಯಲ್ಲಿ ಇರುವ ಈ ದ್ವೀಪದಲ್ಲಿ ಬ್ರಿಟಿಷರ ಕಾಲದ ಲೈಟ್ ಹೌಸ್ (Light House) ಇದೆ. ಶತ್ರುಗಳಿಂದ ರಕ್ಷಣೆ ಮಾಡಿಕೊಳ್ಳಲು ಬಳಸುತ್ತಿದ್ದ ಫಿರಂಗಿಗಳನ್ನು ಇಂದಿಗೂ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದಲ್ಲದೇ ಪುರಾತನ ಕಾಲದ ಚಿಮಣಿ, ಬ್ಯಾರೋ ಮೀಟರ್ ದುರ್ಬೀನು, ಪುರಾತನ ಚಿಮಣಿ ದೀಪಗಳು ಇಲ್ಲಿವೆ. ಬರುವ ಪ್ರವಾಸಿಗರಿಗೆ ಲೈಟ್ ಹೌಸ್ ನ ತುತ್ತತುದಿಗೆ ತೆರಳಿ ಸುಂದರ ದೃಶ್ಯ ಸವಿಯಬೇಕು ಎಂದರೆ ಅನುಮತಿ ಬೇಕು. ಆದ್ರೆ ಇಲ್ಲಿನ ಪರಿಸರದಲ್ಲಿ ವಿರಮಿಸಲು ಪರ್ಮಿಷನ್ ಅವಶ್ಯವಿಲ್ಲ. ಇಲ್ಲಿನ ದೊಡ್ಡ ದೊಡ್ಡ ಕಲ್ಲುಬಂಡೆಗಳು ಅದ್ಭುತವಾಗಿದ್ದು ಇಡೀ ದಿನ ತಂಪು ಗಾಳಿ, ಸುಂದರ ಕಡಲು ನೋಡುವ ಜೊತೆ ಆಗಾಗ ಕಾಣುವ ಡಾಲ್ಫಿನ್ ಗಳು ಮನಸೆಳೆಯುತ್ತವೆ.
Advertisement
Advertisement
ಸುತ್ತಲೂ ಬಂಡೆಗಳಿಂದಲೇ ತುಂಬಿರುವುದರಿಂದ ಯಾವುದೋ ಹಳೆಯ ಕೋಟೆ ಎಂಬ ಭಾವನೆ ಮೂಡಿಸುತ್ತದೆ. ಇಲ್ಲಿನ ಸೂರ್ಯಾಸ್ತ ನೋಡುವುದಕ್ಕೆ ಎರಡು ಕಣ್ಣು ಸಾಲದು. ಸದ್ಯ ಪ್ರವಾಸಿಗರಿಗಾಗಿ ಓಡಾಲು ವಾಕಿಂಗ್ ಪಾತ್, ವಿರಮಿಸಲು ಪಾರ್ಕ್ ಸಹ ನಿರ್ಮಾಣ ಹಂತದಲ್ಲಿದ್ದು ಶೀಘ್ರದಲ್ಲೇ ಪ್ರವಾಸಿಗರಿಗೆ ಮೂಲಸೌಕರ್ಯದ ವ್ಯವಸ್ಥೆಯೂ ಸಿದ್ಧವಾಗಲಿದೆ.
ಮಳೆಗಾಲದಲ್ಲಿ ನಿರ್ಬಂಧ: ಪ್ರಕೃತಿ ಸೌಂದರ್ಯ ಸವಿಯಬೇಕು, ಸಮುದ್ರ ಯಾನದ ಆನಂದ ಪಡೆದು ಜಲಚರ ವೀಕ್ಷಣೆ ಮಾಡಬೇಕು, ಟ್ರೆಕ್ಕಿಂಗ್ ಹೋಗಬೇಕು ಎಂಬ ಪ್ರವಾಸಿಗರಿಗೆ ಈ ತಾಣ ಹೇಳಿಮಾಡಿಸಿದಂತಿದೆ. ಇದರ ಪಕ್ಕದಲ್ಲೇ ಕೂರ್ಮಗಡ ಸೇರಿದಂತೆ ಹಲವು ದ್ವೀಪಗಳ ಸಾಲೇ ಇದ್ದು ಇವುಗಳಿಗೂ ಭೇಟಿ ನೀಡುವ ಮೂಲಕ ಮತ್ತಷ್ಟು ಆನಂದ ಪಡೆಯಬಹುದಾಗಿದೆ. ಈ ಭಾಗಕ್ಕೆ ಮಳೆಗಾಲದಲ್ಲಿ ಮಾತ್ರ ನಿರ್ಬಂಧ ಇದ್ದು ಬೇಸಿಗೆ ಮತ್ತು ಚಳಿಗಾಲದಲ್ಲಿ ತೆರಳಲು ಬಲು ಸೂಕ್ತವಾಗಿದೆ. ನೀವೊಮ್ಮೆ ಇಲ್ಲಿಗೆ ಬಂದರೆ ಕಾರವಾರದ ಕಡಲ ತೀರ, ರಾಕ್ ಗಾರ್ಡನ್, ವಾರ್ ಮ್ಯೂಸಿಯಮ್, ಟಫಲೋ ಯುದ್ಧ ವಿಮಾನ, ಶಿವಾಜಿ ಕೋಟೆ ನೋಡುವ ಜೊತೆ ಜಲಸಾಹಸ ಕ್ರೀಡೆಗೆ ಸಹ ಅವಕಾಶ ಇಲ್ಲಿದೆ. ಜೊತೆಗೆ ಕಾರವಾರದಿಂದ ಗೋಕರ್ಣದ ಕಡಲತೀರ, ಮುರ್ಡೇಶ್ವರ, ದಾಂಡೇಲಿ ಪ್ರವಾಸಿ ಸ್ಥಳಗಳಿಗೂ ತೆರಳಬಹುದಾಗಿದ್ದು ನಿಸರ್ಗ ಸೌಂದರ್ಯ ಸವಿಯಬಹುದಾಗಿದೆ. ಹಾಗಿದ್ರೆ ಮತ್ತಿನ್ನೇಕೆ ತಡ ನೀವೂ ವೊಮ್ಮೆ ಭೇಟಿ ನೀಡಿ, ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ಬನ್ನಿ.
ತಲುಪವುದು ಹೇಗೆ?: ಬೆಂಗಳೂರಿನಿಂದ ಕಾರವಾರಕ್ಕೆ 520 ಕಿಲೋಮೀಟರ್ ಪ್ರಯಾಣ. ಕಾರವಾರಕ್ಕೆ ತೆರಳಲು ಸರ್ಕಾರಿ ಹಾಗೂ ಖಾಸಗಿ ಬಸ್ ವ್ಯವಸ್ಥೆಗಳಿವೆ. ಜೊತೆಗೆ ಬೆಂಗಳೂರಿನಿಂದ ರೈಲು ಪ್ರಯಾಣದ ಮೂಲಕವೂ ಬರಬಹುದು. ವಿಮಾನ ಹತ್ತಿ ಹೋಗೋಣ ಎಂದುಕೊಂಡರೂ ಗೋವಾಕ್ಕೆ ಹೋಗಿ ಅಲ್ಲಿಂದ ಇಲ್ಲಿಗೆ ಬರಬೇಕು. ಗೋವಾದ ಪಣಜಿಯಿಂದ ಕಾರವಾರಕ್ಕೆ 100 ಕಿಲೋಮೀಟರ್ ದೂರವಿದ್ದು ಕರ್ನಾಟಕದ ವಾಯುವ್ಯ ಸಾರಿಗೆ ಬಸ್ ಗಳ ಜೊತೆ ಗೋವಾ ಸರ್ಕಾರದ ಕದಂಬ ಬಸ್ ಸೇವೆಯೂ ನಿಮಗೆ ದೊರೆಯುತ್ತದೆ. ಸಾರಿಗೆ ಬಸ್ ನಲ್ಲಿ ಶನಿವಾರ, ಭಾನುವಾರ ಹೊರತುಪಡಿಸಿ ಉಳಿದ ದಿನ ಬಂದಲ್ಲಿ ಜನಸಂದಣಿ ಕಡಿಮೆ ಇರುತ್ತೆ.
ವಸತಿ ವ್ಯವಸ್ಥೆ ಏನು?: ದ್ವೀಪದಲ್ಲಿ ತಂಗಲು ವ್ಯವಸ್ಥೆ ಇಲ್ಲ. ಆದ್ರೆ ಕಾರವಾರ ನಗರದಲ್ಲಿ ಲಾಡ್ಜ್ ಗಳು, ಹೋಮ್ ಸ್ಟೇಗಳು ಸಾಕಷ್ಟಿವೆ. ಇದನ್ನೂ ಓದಿ: ಮಾಲ್ಡೀವ್ಸ್ ನಾಚಿಸುವ ಸಾಗರ ತೀರಗಳು ನಮ್ಮ ಕರಾವಳಿಯಲ್ಲೇ ಇವೆ ಕಣ್ತುಂಬಿಕೊಳ್ಳಿ..!