ಕೆಲಸದ ಒತ್ತಡ, ನಗರದ ಜಂಜಾಟದಿಂದ ಮನಸ್ಸು ಭಾರವಾದಾಗ ಕೆಲವೊಮ್ಮೆ ಮೊಬೈಲ್ ಎಲ್ಲಾ ಬಿಟ್ಟು, ಯಾರ ಸಂಪರ್ಕಕ್ಕೂ ಸಿಗದೆ ನೆಮ್ಮದಿಯಾಗಿ ಎಲ್ಲಾದರೂ ಹೋಗಿ ಒಂದೆರಡು ದಿನ ಕಳೆದು ಫ್ರೆಶ್ ಆಗಿಬಿಡಬೇಕು ಅನಿಸುವುದು ಸಹಜ. ಇಂತಹ ಸಂದರ್ಭಗಳಲ್ಲಿ ಕೆಲವರು ದೇವಸ್ಥಾನಗಳ ಭೇಟಿಯನ್ನು ಬಯಸಿದರೆ ಇನ್ನೂ ಕೆಲವರು ಗೆಳೆಯರ ಬಳಗದೊಂದಿಗೆ ಚಾರಣವನ್ನು ಆಯ್ಕೆ ಮಾಡುತ್ತಾರೆ. ಈ ಚಾರಣ ಮಾಡಲು ಕರಾವಳಿ ಭಾಗದಲ್ಲಿ ಸಾಕಷ್ಟು ಸ್ಥಳಗಳಿವೆ. ಇಂಥವುಗಳಲ್ಲಿ ಕೂಡ್ಲು ತೀರ್ಥ ಜಲಪಾತ ಕೂಡ ಒಂದಾಗಿದೆ.
ಉಡುಪಿ- ಆಗುಂಬೆ ರಸ್ತೆಯ ಹೆಬ್ರಿ ಬಳಿ ಈ ಜಲಪಾತವು ಪ್ರವಾಸಿಗರನ್ನು (Tourist) ಕೈ ಬೀಸಿ ಕರೆಯುತ್ತಿದೆ. ಪಶ್ಚಿಮ ಘಟ್ಟಗಳ ದಟ್ಟ ಕಾನನದ ನಡುವೆ ಸೀತಾನದಿ ಹರಿಯುತ್ತದೆ. ಈ ನದಿಯಿಂದ ಜಲಪಾತ ಉಂಟಾಗಿದ್ದು, ಮೈದುಂಬಿ ಹರಿಯುತ್ತಿರುವ ಕೂಡ್ಲು ತೀರ್ಥವನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿದೆ. ಜೊತೆಗೆ ಹಚ್ಚ ಹಸಿರಿನ ನಡುವೆ ಇರುವ ಸುಂದರ ದೃಶ್ಯವನ್ನು ನೋಡುತ್ತಿದ್ದರೆ ನಮ್ಮನ್ನೇ ನಾವು ಮರೆತು ಹೋಗುವುದರಲ್ಲಿ ಎರಡು ಮಾತಿಲ್ಲ.
Advertisement
Advertisement
ವಿಶೇಷತೆ ಏನು..?: ಪುರಾಣಗಳ ಪ್ರಕಾರ, ಸುಮಾರು ಸಾವಿರ ವರ್ಷಗಳ ಹಿಂದೆ ಈ ಸ್ಥಳದಲ್ಲಿ ಸನ್ಯಾಸಿಗಳು ಧ್ಯಾನ ಮಾಡುತಿದ್ದರಂತೆ. ಹಾಗಾಗಿ ಈ ಜಲಪಾತಕ್ಕೆ ಕೂಡ್ಲು ತೀರ್ಥ ಎಂಬ ಹೆಸರು ಬಂದಿದೆ. ಈ ಕೂಡ್ಲು ತೀರ್ಥ ಜಲಪಾತವು ಸುಮಾರು 120 ಅಡಿಗಳಷ್ಟು ಎತ್ತರದಿಂದ ಧುಮ್ಮಿಕ್ಕಿ ಹರಿಯುತ್ತಿದೆ. ಬೆಟ್ಟದ ತುತ್ತ ತುದಿಯಿಂದ ಹರಿಯುವ ಜಲಪಾತದ ಸೌಂದರ್ಯ ನೋಡುವುದೇ ಕಣ್ಣಿಗೆ ಹಬ್ಬ.
Advertisement
ಹೆಬ್ಬಂಡೆಗಳನ್ನು ಸೀಳಿ ರಭಸವಾಗಿ ನೀರು ಮೇಲಿಂದ ಬೀಳುತ್ತಿದ್ದರಿಂದ ನೈಸರ್ಗಿಕವಾಗಿಯೇ ಕೊಳವೊಂದು ರಚನೆಯಾಗಿದೆ. ಆದರೆ ಇದು ಹೆಚ್ಚು ಆಳವಿಲ್ಲದ ಕಾರಣ ನಿರ್ಭಯವಾಗಿ ನೀರಿಗೆ ಇಳಿದು ಮೋಜು ಮಸ್ತಿ ಮಾಡಬಹುದಾಗಿದೆ. ಇದು ಪ್ರವಾಸಿಗರನ್ನು ಇನ್ನಷ್ಟು ಎಂಜಾಯ್ ಮಾಡುವುದಕ್ಕೆ ಸಹಾಯ ಮಾಡುತ್ತಿದೆ. ಬಿಳಿ ನೊರೆಯಂತೆ ಧುಮ್ಮುಕ್ಕಿ ಹರಿಯುತ್ತಿರುವ ಈ ಜಲಪಾತದ ಕೆಳಗೆ ನಿಂತು ಸ್ನಾನ ಮಾಡಿದರೆ ಮೈ ಹಾಗೂ ಮನಸ್ಸಿಗೆ ಉಲ್ಲಾಸ ಸಿಗುತ್ತದೆ. ಆದರೆ ನೀರು ರಭಸವಾಗಿ ಮೇಲಿಂದ ಬೀಳುವುದರಿಂದ ಮೈಗೆ ಚುಚ್ಚಿದ ಅನುಭವವಾಗುತ್ತದೆ. ಹೀಗಾಗಿ ಸ್ವಲ್ಪ ಎಚ್ಚರದಿಂದಿರುವುದು ಸೂಕ್ತ.
Advertisement
ಹೋಗುವುದು ಹೇಗೆ..?: ಉಡುಪಿ ಆಥವಾ ಶಿವಮೊಗ್ಗದಿ0ದ ಮಿನಿಬಸ್ಸಿನಲ್ಲಿ ಪ್ರಯಾಣ ಬೆಳಸಬಹುದು. ಉಡುಪಿ ಹಾಗೂ ಶಿವಮೊಗ್ಗದಿಂದ ಹೆಬ್ರಿಯವರೆಗೂ ವಾಹನ ಸೌಕರ್ಯಗಳಿರುತ್ತವೆ. ಹೆಬ್ರಿಯಿಂದ ಸ್ಥಳೀಯ ಆಟೋಗಳ ಸಹಾಯ ಪಡೆಯಬೇಕು. ಸ್ಥಳ ಪರಿಚಯವಿರುವ ವಾಹನ ಚಾಲಕರ ಜೊತೆ ಹೋಗಿಬರಬಹುದು. ಇದನ್ನೂ ಓದಿ: ಪ್ರಕೃತಿ ರಮಣೀಯ ನರಹರಿ ಪರ್ವತದ ಸೌಂದರ್ಯ ಸವಿಯಲು ನೀವೂ ಭೇಟಿ ಕೊಡಿ
ಚಾರಣ ಮಾಡುವವರು ಕೂಡ್ಲು ತೀರ್ಥ ಜಲಪಾತವನ್ನು ತಲುಪಲು ಪಶ್ಚಿಮ ಘಟ್ಟಗಳ ಅಭಯಾರಣ್ಯದ ಮಧ್ಯೆ ಹರಿಯುವ ಸೀತಾನದಿಯನ್ನು ದಾಟಿ ಹೋಗಬೇಕು. ಹೀಗಾಗಿ ದಟ್ಟವಾದ ಕಾಡಿನ ನಡುವೆ ಕಾಲುದಾರಿಯಲ್ಲಿ ಸುಮಾರು 2 ಕಿ.ಮೀ ದೂರ ಸಾಗಬೇಕಾಗುತ್ತದೆ. ನಡೆಯುವ ದಾರಿ ಎತ್ತರ ತಗ್ಗಿನ ಭೂಪ್ರದೇಶವಾಗಿರುವ ಕಾರಣ ಸ್ವಲ್ಪ ಕಷ್ಟವೆನಿಸಬಹುದು. ಆದರೆ ಜಲಪಾತ ಬಳಿ ಬರುತ್ತಿದ್ದಂತೆಯೇ ಝುಳು-ಝುಳು ನೀರಿನ ನಾದದ ಜೊತೆ ಸಿಗುವ ಆನಂದ ಈ ದಣಿವನ್ನೆಲ್ಲ ಮರೆ ಮಾಡಿ ಮನಸ್ಸಿಗೆ ಮುದ ನೀಡುತ್ತದೆ.
ಯಾವ ಸಮಯದಲ್ಲಿ ಭೇಟಿ ಸೂಕ್ತ : ಈ ಫಾಲ್ಸ್ ಗೆ ಭೇಟಿ ನೀಡಲು ಆಗಸ್ಟ್ ನಿಂದ ಜನವರಿ ತಿಂಗಳು ಸೂಕ್ತ. ಯಾಕೆಂದರೆ ಈ ಸಮಯದಲ್ಲಿ ನೀರಿನ ಹರಿವು ಹೆಚ್ಚು ಪ್ರಮಾಣದಲ್ಲಿ ಇರುವುದರಿಂದ ಜಲಪಾತ ವೀಕ್ಷಣೆ ಮಜಾ ನೀಡುತ್ತದೆ. ಮಳೆಗಾಲದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದರೆ ಜಿಗಣೆಗಳ ಕಾಟ ಇರುತ್ತದೆ.
ನೀರು, ಆಹಾರ ಪ್ಯಾಕ್ ಮಾಡಿಕೊಳ್ಳಿ: ದಟ್ಟವಾದ ಅರಣ್ಯ ಪ್ರದೇಶದೊಳಗೆ ಈ ಫಾಲ್ಸ್ ಇರುವುದರಿಂದ ಇದರ ಹತ್ತಿರ ಯಾವುದೇ ಅಂಗಡಿಗಳಿಲ್ಲ. ಹೀಗಾಗಿ ಚಾರಣ ಮಾಡುವಾಗ ಬೇಕಾಗುವ ಅಗತ್ಯ ವಸ್ತುಗಳು, ನೀರು ಹಾಗೂ ಆಹಾರವನ್ನು ಕೊಂಡೊಯ್ಯಬೇಕಿದೆ.
ನಿಷೇಧಿತ ವಸ್ತುಗಳು ಬ್ಯಾನ್: ಚಾರಣ ಮಾಡುವಾಗ ಕೆಲವರು ಎಂಜಾಯ್ ಮಾಡಲೆಂದು ಮದ್ಯ, ಸಿಗರೇಟ್ ಮೊದಲಾದವುಗಳನ್ನು ಕೊಂಡೊಯ್ಯುತ್ತಾರೆ. ಆದರೆ ಈ ಫಾಲ್ಸ್ ನಲ್ಲಿ ಅವುಗಳಿಗೆ ಅನುಮತಿ ಇಲ್ಲ. ಹೀಗಾಗಿ ಮದ್ಯ, ಸಿಗರೇಟ್ ಮುಂತಾದವುಗಳನ್ನು ಜಲಪಾತದ ಬಳಿ ಕೊಂಡೊಯ್ಯುವಂತಿಲ್ಲ.
ಅನುಮತಿ ಅಗತ್ಯ: ಕಾಡಿನ ಮಧ್ಯೆ ಈ ಜಲಪಾತ ಇರುವ ಹಿನ್ನೆಲೆಯಲ್ಲಿ ಚಾರಣ ಮಾಡುವುದಕ್ಕೂ ಮುನ್ನ ಅರಣ್ಯ ಇಲಾಖೆಯ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಚಾರಣಿಗರು ಅರಣ್ಯ ಇಲಾಖೆಯ ಆಫೀಸ್‍ನಲ್ಲಿ ಪ್ರವೇಶ ಶುಲ್ಕವನ್ನು ಪಾವತಿಸಬೇಕು. ಜೊತೆಗೆ ಸ್ಪಷ್ಟ ಹೆಸರು, ಮೊಬೈಲ್ ನಂಬರ್ ಹಾಗೂ ತಾವು ತೆಗೆದುಕೊಂಡು ಹೋಗುತ್ತಿರುವ ವಸ್ತುಗಳ ಬಗ್ಗೆ ಮಾಹಿತಿ ನೀಡಿ ಚಾರಣ ಮುಂದುವರಿಸಬೇಕಾಗಿದೆ.
ಒಟ್ಟಿನಲ್ಲಿ ಪ್ರಶಾಂತವಾದ ದಟ್ಟಕಾಡಿನ ಮಧ್ಯೆ ಇರುವ ಈ ಕೂಡ್ಲು ತೀರ್ಥ ಜಲಪಾತವು ಪ್ರತ್ಯೇಕವಾದ ಸೌಂದರ್ಯದಿಂದಲೇ ಖ್ಯಾತಿ ಪಡೆದುಕೊಂಡಿದೆ. ಹೀಗಾಗಿ ಈ ಫಾಲ್ಸ್ ಗೆ ನೀವೂ ಒಂದು ಬಾರಿ ಭೇಟಿ ಕೊಟ್ಟು ಮನಸ್ಸನ್ನು ಹಗುರಮಾಡಿಕೊಳ್ಳಿ.