ಬೆಂಗಳೂರು: ಸುಮ್ಮನೆ ಒಂದು ಸಲ ಕನ್ನಡ ಚಿತ್ರರಂಗದತ್ತ ಕಣ್ಣು ಹಾಯಿಸಿ ಅಲ್ಲಿ ಪ್ರಸಿದ್ಧಿ ಪಡೆದುಕೊಂಡವರು, ಗೆದ್ದವರ ಹಿನ್ನೆಲೆಗಳನ್ನೊಮ್ಮೆ ಕೆದಕಿದರೆ ಯಾವ್ಯಾವುದೋ ದಿಕ್ಕುಗಳಿಂದ ಮನಮಿಡಿಯುವ, ಅಚ್ಚರಿ ಹುಟ್ಟಿಸುವ ಕಥೆಗಳು ತೆರೆದುಕೊಳ್ಳುತ್ತವೆ. ಯಾವುದೋ ಹಳ್ಳಿ ಮೂಲೆಯಿಂದ ಬಂದು ಎಲ್ಲೋ ಕಳೆದು ಹೋಗಬೇಕಿದ್ದವರನ್ನೂ ಸಿನಿಮಾ ಮಾಯೆಯೆಂಬುದು ಸುತ್ತಿ ಬಳಸಿ ಬರ ಸೆಳೆದುಕೊಂಡ ಕಥೆಗಳೂ ತೆರೆದುಕೊಳ್ಳುತ್ತವೆ. ಹೀಗೆ ಬಂದ ಬಹುತೇಕರ ಬಂಡವಾಳ ಪ್ರತಿಭೆ ಮಾತ್ರವೇ ಆಗಿರುತ್ತದೆ. ಇದೇ ತಿಂಗಳ 11ರಂದು ತೆರೆಗಾಣಲಿರುವ `ಎಲ್ಲಿದ್ದೆ ಇಲ್ಲಿತನಕ’ ಚಿತ್ರದ ನಿರ್ದೇಶಕ ತೇಜಸ್ವಿಯವರ ಬದುಕಿನ ಹಾದಿಯೂ ಇದಕ್ಕೆ ಪೂರಕವಾಗಿದೆ.
Advertisement
ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿ ಬಂದಿದ್ದ ಯಶಸ್ವಿ ಕಿರುತೆರೆ ಶೋ ಮಜಾ ಟಾಕೀಸ್. ಅದರ ಕ್ರಿಯೇಟಿವ್ ನಿರ್ದೇಶಕರಾಗಿ, ಯಶಸ್ಸಿನ ರೂವಾರಿಗಳಲ್ಲೊಬ್ಬರಾಗಿರುವವರು ತೇಜಸ್ವಿ. ಅದಕ್ಕೂ ಹಿಂದೆಯೇ ಒಂದಷ್ಟು ಕಿರುತೆರೆ ಶೋಗಳನ್ನು ನಿರ್ವಹಿಸುತ್ತಾ, ಧಾರಾವಾಹಿಗಳನ್ನು ನಿರ್ದೇಶನ ಮಾಡುತ್ತಾ ಪ್ರಸಿದ್ಧಿ ಪಡೆದುಕೊಂಡಿರುವವರು, ಪ್ರತಿಭಾವಂತರಾಗಿ ಗುರುತಿಸಿಕೊಂಡಿರುವವರು ತೇಜಸ್ವಿ. ಅವರು ಸೃಜನ್ ಅಭಿನಯದ ಎಲ್ಲಿದ್ದೆ ಇಲ್ಲಿತನಕ ಚಿತ್ರವನ್ನು ಕೂಡ ಭಿನ್ನವಾಗಿಯೇ ನಿರ್ದೇಶನ ಮಾಡಿರುತ್ತಾರೆಂಬ ನಂಬಿಕೆ ಹುಟ್ಟಿಕೊಂಡಿರೋದಕ್ಕೆ ತೇಜಸ್ವಿಯವರ ಈವರೆಗಿನ ಕಲಾ ಯಾನವೇ ಕಾರಣವಾಗಿದೆ. ಹಂತ ಹಂತವಾಗಿ ಹೊರಬಂದು ಸೂಪರ್ ಹಿಟ್ ಆಗಿರೋ ಹಾಡುಗಳು ಮತ್ತು ಎಲ್ಲರಿಗೂ ಮೆಚ್ಚುಗೆಯಾಗಿರೋ ಟ್ರೇಲರ್ ಮೂಲಕವೇ ಎಲ್ಲಿದ್ದೆ ಇಲ್ಲಿತನಕ ಚಿತ್ರ ಹೆಚ್ಚೆಚ್ಚು ಪ್ರೇಕ್ಷಕರನ್ನು ತಲುಪಿಕೊಂಡಿದೆ. ತಾಜಾ ಕಥೆಯ ಸುಳಿವಿನೊಂದಿಗೆ ಪ್ರೇಕ್ಷಕರೆಲ್ಲ ಬಿಡುಗಡೆಯ ಕ್ಷಣಕ್ಕಾಗಿ ತುದಿಗಾಲಲ್ಲಿ ನಿಲ್ಲುವಂತೆಯೂ ಮಾಡಿದೆ.
Advertisement
Advertisement
ಇವತ್ತಿಗೆ ಎಲ್ಲಿದ್ದೆ ಇಲ್ಲಿತನಕ ಸಿನಿಮಾ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿರೋ ತೇಜಸ್ವಿಯವರು ಸಾಗಿ ಬಂದ ರೀತಿಯೇ ವಿಶೇಷವಾದದ್ದು. ಸಾಮಾನ್ಯವಾಗಿ ಹಳ್ಳಿಗಾಡುಗಳಿಂದ ಬಂದು ಹೀಗೆ ಬಣ್ಣದ ಲೋಕದಲ್ಲಿ ಹೆಜ್ಜೆ ಗುರುತು ಮೂಡಿಸಿದವರು ಅದನ್ನೇ ಗುರಿಯಾಗಿಸಿಕೊಂಡಿರುತ್ತಾರೆ. ಆದರೆ ಕೊಳ್ಳೇಗಾಲದಲ್ಲಿಯೇ ಹುಟ್ಟಿ ಅಲ್ಲಿಯೇ ಶಾಲಾ ಕಾಲೇಜು ವ್ಯಾಸಂಗ ಮಾಡಿದ್ದ ತೇಜಸ್ವಿಯವರ ಪಾಲಿಗೆ ಅಂಥಾ ಕನಸೇನೂ ಇರಲಿಲ್ಲ. ಚಿಕ್ಕ ವಯಸ್ಸಿಗೇ ಹಚ್ಚಿಕೊಂಡಿದ್ದ ಓದಿನ ಹುಚ್ಚು ಅವರೊಳಗೆ ಬರವಣಿಗೆಯ ಆಸಕ್ತಿ ಹುಟ್ಟಿಸಿತ್ತು. ಅದುವೇ ನಾಟಕ ಮತ್ತು ರಂಗಭೂಮಿಯ ನಂಟನ್ನೂ ಬೆಳೆಸುವಂತೆ ಮಾಡಿತ್ತು. ಆದರೆ ಬದುಕಿನ ಅನಿವಾರ್ಯತೆಗೆ ದುಡಿಯಲೇ ಬೇಕಾದ ಅನಿವಾರ್ಯ ಸೃಷ್ಟಿಸಿದಾಗ ತೇಜಸ್ವಿ ದಶಕಗಳಷ್ಟು ಹಿಂದೆ ಮುಖ ಮಾಡಿದ್ದು ಬೆಂಗಳೂರಿನತ್ತ. ಆ ಕ್ಷಣದಲ್ಲಿ ಅವರ ಮುಂದಿದ್ದದ್ದು ಯಾವುದಾದರೊಂದು ಕೆಲಸ ಮಾಡಿ ಮನೆಯಲ್ಲಿದ್ದ ಆರ್ಥಿಕ ಸಂಕಷ್ಟ ನೀಗಿಸಬೇಕೆಂಬುದರ ಹೊರತಾಗಿ ಬೇರೆ ಯಾವ ಇಂಗಿತವೂ ಇರಲಿಲ್ಲ.
Advertisement
ಆದರೆ, ಅವರಿಗೇ ಅರಿವಿಲ್ಲದಂತೆ ಇಡೀ ಬದುಕು ಬೆಳಗಿ ಬಿಡುವಂತಹ ಬರವಣಿಗೆಯ ಕಲೆ ಅವರೊಳಗಿತ್ತು. ಅದುವೇ ಅಚ್ಚರಿದಾಯಕವಾಗಿ ಅವರನ್ನು ಬಣ್ಣದ ಲೋಕಕ್ಕೆ ಕೈ ಹಿಡಿದು ಸೆಳೆದುಕೊಂಡಿತ್ತು. ಬೆಂಗಳೂರಿಗೆ ಬಂದಿಳಿದ ತೇಜಸ್ವಿಯವರಿಗೆ ರಂಗಭೂಮಿಯಲ್ಲಿಯೂ ಹೆಸರು ಮಾಡಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಬಸವರಾಜ್ ಸೂಳೇರಿಪಾಳ್ಯ ಪರಿಚಯವಾಗಿದ್ದರು. ಅವರೇ ತೇಜಸ್ವಿಯೊಳಗಿನ ಬರವಣಿಗೆಯ ತೇಜಸ್ಸನ್ನು ಪತ್ತೆಹಚ್ಚಿ ಬರೆಯಲು ಪ್ರೇರೇಪಿಸಿದ್ದರು. ಹಾಗೆ ಕಿರುತೆರೆಗೆ ಬರವಣಿಗೆಯ ಮೂಲಕ ಎಂಟ್ರಿ ಕೊಟ್ಟಿದ್ದ ತೇಜಸ್ವಿ, ಅಲ್ಲಿನ ಎಲ್ಲ ಪಟ್ಟುಗಳನ್ನೂ ಶ್ರದ್ಧೆಯಿಂದಲೇ ಕರಗತ ಮಾಡಿಕೊಂಡಿದ್ದರು. ಆ ನಂತರ ಒಂದಷ್ಟು ವರ್ಷಗಳ ಕಾಲ ಅಲ್ಲಿಯೇ ಸಕ್ರಿಯರಾಗಿದ್ದರು. ಕಡೆಗೂ ಸೃಜನ್ ಲೋಕೇಶ್ ಸಂಪರ್ಕಕ್ಕೆ ಬಂದ ತೇಜಸ್ವಿಯವರ ಮುಂದೆ ಹೊಸ ಸಾಧ್ಯತೆಗಳು ಬಿಚ್ಚಿಕೊಳ್ಳಲಾರಂಭಿಸಿದ್ದವು.
ಸೃಜನ್ ಜೊತೆ ಕಿಚನ್ ಕಿಲಾಡಿ ಎಂಬ ಶೋ ಆರಂಭಿಸಿದ್ದ ತೇಜಸ್ವಿ ಆ ನಂತರದಿಂದ ಇಲ್ಲಿವರೆಗೂ ಸೃಜನ್ ಜೊತೆಯಾಗಿಯೇ ಸಾಗಿ ಬಂದಿದ್ದಾರೆ. ಜೊತೆಯಾಗಿಯೇ ಲೋಕೇಶ್ ಪ್ರೊಡಕ್ಷನ್ ಸಂಸ್ಥೆಯನ್ನೂ ಹುಟ್ಟು ಹಾಕಿದ್ದಾರೆ. ಆ ಬಳಿಕ ಸೃಜನ್ ಪ್ರೊಡಕ್ಷನ್ಸ್ ಅಡಿಯಲ್ಲಿಯೇ ಮಜಾ ಟಾಕೀಸ್ ಎಂಬ ಯಶಸ್ವೀ ಕಾರ್ಯಕ್ರಮವನ್ನೂ ಅವರು ನಿರ್ದೇಶನ ಮಾಡಿದ್ದಾರೆ. ಹೀಗೆ ಹಲವಾರು ವರ್ಷಗಳಿಂದ ಸೃಜನ್ ಲೋಕೇಶ್ ಅವರೊಂದಿಗೆ ಒಡನಾಡಿರುವ ತೇಜಸ್ವಿ ಇದೀಗ ಅವರಿಗಾಗಿ ಎಲ್ಲಿದ್ದೆ ಇಲ್ಲಿತನಕ ಚಿತ್ರವನ್ನೂ ನಿರ್ದೇಶನ ಮಾಡಿದ್ದಾರೆ. ಇದು ಅವರು ನಿರ್ದೇಶನ ಮಾಡಿರೋ ಮೊದಲ ಚಿತ್ರ. ಆದರೆ ಅದು ಈಗಾಗಲೇ ದೊಡ್ಡ ಮಟ್ಟದಲ್ಲಿ ಹಿಟ್ ಆಗೋ ಎಲ್ಲ ಲಕ್ಷಣಗಳನ್ನೂ ಹೊಮ್ಮಿಸುತ್ತಿದೆ. ಕಿರುತೆರೆಯಲ್ಲಿ ಆರಂಭದಿಂದಲೂ ಯಶಸ್ವಿಯಾಗುತ್ತಾ ಬಂದಿರೋ ತೇಜಸ್ವಿ ಎಲ್ಲಿದ್ದೆ ಇಲ್ಲಿತನಕ ಮೂಲಕ ಸಿನಿಮಾ ನಿರ್ದೇಶಕರಾಗಿಯೂ ಗೆಲ್ಲುವ ಲಕ್ಷಣಗಳೇ ದಟ್ಟವಾಗಿವೆ.