ಝಗಮಗಿಸುವ ವೇದಿಕೆ, ವರ್ಣರಂಜಿತ ನೃತ್ಯಗಳ ಮಧ್ಯೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಟ ಪ್ರಕಾಶ್ ರಾಜ್, ಡಾಲಿ ಧನಂಜಯ್, ಮೇರು ಕಲಾವಿದರಾದ ಶ್ರೀನಾಥ್, ಉಮಾಶ್ರೀ, ಸಾಧುಕೋಕಿಲ, ಸಾಹಿತಿ ಜೋಗಿ, ಕವಿ ಬಿ.ಆರ್.ಲಕ್ಷ್ಮಣರಾವ್ ಸೇರಿದಂತೆ ಕರುನಾಡಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಿದ `ಉದಯ ಕನ್ನಡಿಗ-2025′ ಪುರಸ್ಕಾರ ಇದೇ ಶನಿವಾರ (ಜ.24) ಮತ್ತು ಭಾನುವಾರ (ಜ.25) ಸಂಜೆ 6 ಗಂಟೆಗೆ ಉದಯ ಟಿವಿಯಲ್ಲಿ (Udaya TV) ಪ್ರಸಾರವಾಗಲಿದೆ.
ಗಾಯಕ ಸಂಜಿತ್ ಹೆಗ್ಡೆ, ಕಬ್ಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ, ಕಾರ್ಗಿಲ್ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ, ಉದ್ಯಮಿ ಕಿಶೋರ್ ಕುಮಾರ್ ರೈ, ಪರಿಸರವಾದಿ ಶಿವಾನಂದ ಕಳವೆ, ಸುರಂಗ ಕೊರೆದು ನೀರು ಉಕ್ಕಿಸಿದ ಕೃಷಿಕ ಅಮೈ ಮಹಾಲಿಂಗ ನಾಯ್ಕ, ಪತ್ರಕರ್ತೆ ಶೋಭಾ ಮಳವಳ್ಳಿ, ಐದು ರೂ.ವೈದ್ಯ ಎಂದೇ ಖ್ಯಾತರಾದ ಡಾ. ಶಂಕರೇಗೌಡ, ಜಾನಪದ ಗಾಯಕ ಪದ್ಮಶ್ರೀ ವೆಂಕಟಪ್ಪ ಸುಗತೇಕರ್ `ಉದಯ ಕನ್ನಡಿಗ-2025′ ಪುರಸ್ಕಾರ ಸ್ವೀಕರಿಸಿದ ಇತರ ಸಾಧಕರು. ನಾಗತಿಹಳ್ಳಿ ಚಂದ್ರಶೇಖರ್, ಬರಗೂರು ರಾಮಚಂದ್ರಪ್ಪ, ನಿರ್ಮಾಪಕರಾದ ಚಿನ್ನೇಗೌಡ, ಸಾ.ರಾ.ಗೋವಿಂದು, ಸುಪ್ರೀಮ್ ಹಿರೋ ಶಶಿಕುಮಾರ್, ನಿರ್ದೇಶಕರಾದ ಓಂ ಸಾಯಿಪ್ರಕಾಶ್, ಕೆ.ಎಮ್.ಚೈತನ್ಯ, ಸಿಂಪಲ್ ಸುನಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಕಲಾವಿದರಾದ ರಮೇಶ್ ಭಟ್, ಗಿರಿಜಾ ಲೋಕೇಶ್, ಮಂಡ್ಯ ರಮೇಶ್, ಅರುಣ್ ಸಾಗರ್, ರಾಗು ನಿಡುವಾಳ್ ಅತಿಥಿಗಳಾಗಿ ಆಗಮಿಸಿ, ಸಾಧಕರಿಗೆ ವಿಶಿಷ್ಟ ವಿನ್ಯಾಸದ `ಉದಯ ಕನ್ನಡಿಗ’ ಟ್ರೋಫಿ ನೀಡಿ ಗೌರವಿಸಿದರು. ಇದನ್ನೂ ಓದಿ: BBK 12 | ಗಿಲ್ಲಿಯನ್ನ ಮದ್ವೆ ಆಗ್ತೀರಾ ಅಂದಿದ್ದಕ್ಕೆ ಕಾವ್ಯ ಕೊಟ್ಟ ಉತ್ತರವೇನು?
ಶಿವರಾಜ್ ಕುಮಾರ್ ಮಾತನಾಡಿ, `ಕನ್ನಡ ಚಿತ್ರೋದ್ಯಮಕ್ಕೆ ದಶಕಗಳಿಂದ ಬೆಂಬಲವಾಗಿರುವ ಉದಯ ಟಿವಿ ನೀಡಿದ ಈ ಪುರಸ್ಕಾರ ಅತ್ಯಂತ ಮಹತ್ವದ್ದೆನಿಸುತ್ತದೆ’ ಎಂದು ಹೃದಯ ತುಂಬಿ ಮಾತನಾಡಿದರು. ನಟ ಶಶಿಕುಮಾರ್ ಜೊತೆಗೂಡಿ ನವಿಲೇ ಪಂಚರಂಗಿ ನವಿಲೇ ಹಾಡಿಗೆ ಶಿವಣ್ಣ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಕಲಾವಿದೆ ಉಮಾಶ್ರೀ ಕಷ್ಟಪಟ್ಟ ದಿನಗಳನ್ನು ನೆನೆದು ಭಾವುಕರಾದರು. ಪ್ರಕಾಶ್ ರಾಜ್ ಬಹಳ ವರ್ಷಗಳ ನಂತರ ಕರ್ನಾಟಕದ ವಾಹಿನಿಯೊಂದರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ರಾಕಿಂಗ್ ಸ್ಟಾರ್ ಯಶ್ ಅವರ `ಯಶೋಮಾರ್ಗ’ದ ವಿವರ ನೀಡಿದರು ಶಿವಾನಂದ ಕಳವೆ.
ವಿಶೇಷವೆಂದರೆ ನಟ ಡಾಲಿ ಧನಂಜಯ್ ತಮ್ಮ ಜೀವನದ ಮಹತ್ವದ ವಿಷಯವೊಂದನ್ನು ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ಚಿತ್ರ ತಾರೆಯರಾದ ನಿಧಿ ಸುಬ್ಬಯ್ಯ, ರಚನಾ ಇಂದರ್, ಮೋಕ್ಷಾ ಕುಶಾಲ್, ಅಂಕಿತಾ ಅಮರ್, ಅನುಷಾ ರೈ, ಪೃಥ್ವಿ ಅಂಬರ್ ನೃತ್ಯಪ್ರದರ್ಶನ, ಗಾಯಕರಾದ ವಾಸುಕಿ ವೈಭವ್, ಅಲೋಕ್ ಬಾಬು ಕಂಠಸಿರಿ ಕಾರ್ಯಕ್ರಮಕ್ಕೆ ಮೆರುಗು ನೀಡಿವೆ. ಕನ್ನಡ ಭಾಷೆ, ಪರಂಪರೆಗೆ ಮತ್ತು ಕರ್ನಾಟಕದ ಅಭ್ಯುದಯಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿರುವ ಸಾಧಕರನ್ನು ಗೌರವಿಸುವ ಉದ್ದೇಶದಿಂದ ಉದಯ ಟಿವಿ `ಉದಯ ಕನ್ನಡಿಗ’ ಪುರಸ್ಕಾರ ಆರಂಭಿಸಿದೆ. ಕಲೆ, ಸಾಹಿತ್ಯ, ಶಿಕ್ಷಣ, ಮಾಧ್ಯಮ, ಸಮಾಜ ಸೇವೆ, ಕೃಷಿ, ಉದ್ಯಮ ಮತ್ತಿತರ ಕ್ಷೇತ್ರಗಳಲ್ಲಿ ಕನ್ನಡದ ಹಿರಿಮೆ ಹೆಚ್ಚಿಸಿರುವ ವ್ಯಕ್ತಿಗಳನ್ನು ಗುರುತಿಸಿ, ಗೌರವಿಸುವ ಪುಟ್ಟ ಪ್ರಯತ್ನ ವಾಹಿನಿಯದಾಗಿದೆ. ಕಳೆದ ಮೂವತ್ತು ವರ್ಷಗಳಿಂದ ಮನರಂಜನೆ ನೀಡುತ್ತಿರುವ ಉದಯ ಟಿವಿ ಬಳಗದಿಂದ `ಉದಯ ಕನ್ನಡಿಗ’ ಪುರಸ್ಕಾರ ಕೃತಜ್ಞತೆಯ ಪುಟ್ಟ ಸಂಕೇತವಾಗಿದೆ ಎನ್ನುತ್ತಾರೆ ಉದಯ ಟಿ.ವಿ ಮುಖ್ಯಸ್ಥರು. ಇದೇ ಶನಿವಾರ (ಜ.24) ಮತ್ತು ಭಾನುವಾರ (ಜ.25) ಸಂಜೆ 6 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.ಇದನ್ನೂ ಓದಿ: ಶಿವಣ್ಣನ ಭೇಟಿಯಾದ ಬಿಗ್‌ಬಾಸ್ 12ರ ವಿನ್ನರ್ ಗಿಲ್ಲಿನಟ


