ಬೆಂಗಳೂರು: ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ (RCB) ಪುರುಷರು ಹಾಗೂ ಮಹಿಳಾ ತಂಡಕ್ಕೆ ಸಾಕಷ್ಟು ಟ್ರೆಂಡ್ ಇದೆ. ಕಳೆದ ವರ್ಷದಿಂದ ಆರಂಭಗೊಂಡಿದ್ದರೂ ಆರ್‌ಸಿಬಿ ಮಹಿಳಾ ತಂಡಕ್ಕೆ ಇರುವ ಅಭಿಮಾನಿಗಳ (RCB Fans) ಸಂಖ್ಯೆ ಕಡಿಮೆಯೇನಿಲ್ಲ. ಹಾಗಾಗಿಯೇ ಇತರ ತಂಡಗಳಿಗಿಂತ ಆರ್‌ಸಿಬಿ ವಿಶೇಷವಾಗಿ ಗುರುತಿಸಿಕೊಂಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ನಡೆದ ಪಂದ್ಯವು ಕ್ರಿಕೆಟ್ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿತ್ತು. 25 ಸಾವಿರಕ್ಕೂ ಹೆಚ್ಚು ಮಂದಿ ಮೈದಾನದಲ್ಲಿ ಸೇರಿದ್ದರು. ಆದ್ರೆ ಆರಂಭಿಕ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ ತಂಡ ಮಹಿಳಾ ಪ್ರೀಮಿಯರ್ ಲೀಗ್ನ (TATA WPL 2024) ತನ್ನ 3ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 25 ರನ್‌ಗಳ ಅಂತರದಿಂದ ಸೋಲು ಕಂಡಿತು.
ಪ್ರತಿ ಆವೃತ್ತಿಗಳಲ್ಲೂ ಒಂದಿಲ್ಲೊಂದು ಸ್ಮರಣಿಕೆಯನ್ನು ಅಭಿಮಾನಿಗಳ ಕಣ್ಣಿಗೆ ಕಟ್ಟಿಕೊಡುವ ಆರ್‌ಸಿಬಿ ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯವನ್ನೂ ಅಭಿಮಾನಿಗಳ ನೆನಪಿನಲ್ಲಿ ಉಳಿಯುವಂತೆ ಮಾಡಿದೆ. ಇದನ್ನೂ ಓದಿ: ವ್ಯರ್ಥವಾಯ್ತು ಸ್ಮೃತಿ ಸ್ಫೋಟಕ ಅರ್ಧಶತಕ – ಡೆಲ್ಲಿಗೆ 25 ರನ್‌ಗಳ ಜಯ
ಹೌದು. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಆರ್‌ಸಿಬಿ ಆರಂಭದಲ್ಲಿ ಉತ್ತಮ ಹಿಡಿತ ಸಾಧಿಸಿದರೂ ಡೆತ್ ಓವರ್‌ನಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿತು. ಈ ವೇಳೆ ಜಾರ್ಜಿಯಾ ವೇರ್ಹ್ಯಾಮ್ (Georgia Wareham) ಅವರ ಬೌಂಡರಿ ಲೈನ್ ಬಳಿ ಹಿಡಿದ ಬಾಲ್‌ವೊಂದು ಆರ್‌ಸಿಬಿ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ (Ab De Villiers) ಅವರ ಕ್ಯಾಚ್ ಅನ್ನು ನೆನಪಿಸುವಂತೆ ಮಾಡಿತು. 11ನೇ ಓವರ್ನ 3ನೇ ಎಸೆತದಲ್ಲಿ ಶಫಾಲಿ ವರ್ಮಾ ಆಕ್ರಮಣಕಾರಿ ಆಟವಾಡುತ್ತಿದ್ದರು. ಈ ವೇಳೆ ಡಿ-ಕ್ಲೆರ್ಕ್ ಅವರ ಚೆಂಡನ್ನು ಮಿಡ್ ವಿಕೆಟ್ ಕಡೆಗೆ ಸಿಕ್ಸರ್ ಬಾರಿಸಲು ಯತ್ನಿಸಿದರು. ಚೆಂಡು ಬೌಂಡರಿ ಗೆರೆಯಾಚೆ ಬಿದ್ದು ಸಿಕ್ಸರ್ ಆಗಬೇಕಾಗಿತ್ತು. ಆದರೆ, ಮೈದಾನದಲ್ಲಿ ಜಾರ್ಜಿಯಾ ವೇರ್ಹ್ಯಾಮ್ ಅದ್ಭುತ ಫೀಲ್ಡಿಂಗ್‌ನೊಂದಿಗೆ ಸಿಕ್ಸರ್ ಆಗುವುದನ್ನು ತಡೆದರು.
ಜಾರ್ಜಿಯಾ ವೇರ್ಹ್ಯಾಮ್ ಬೌಂಡರಿ ಲೈನ್ ಮೇಲೆ ಹಾರಿ ಚೆಂಡು ಹಿಡಿದ ವೇಳೆ ಅದೇ ಸ್ಟೇಡಿಯಮ್ನಲ್ಲಿ ಎಬಿ ಡಿವಿಲಿಯರ್ಸ್ ಅವರ ವಿಶೇಷ ಕ್ಯಾಚ್ ಅಭಿಮಾನಿಗಳ ನೆನಪಿಗೆ ಬಂತು. ಬೆಂಗಳೂರು ತಂಡದ ಮಾಜಿ ಬ್ಯಾಟರ್ ಐಪಿಎಲ್ 2018 ರಲ್ಲಿ ಅದೇ ರೀತಿ ಹಾರಿ ಒಂದೇ ಕೈನಲ್ಲಿ ಅದ್ಭುತ ಕ್ಯಾಚ್ ಹಿಡಿದಿದ್ದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಲೆಕ್ಸ್ ಹೇಲ್ಸ್ ಆರ್‌ಸಿಬಿ ಬೌಲರ್ ಮೊಯಿನ್ ಅಲಿ ಎಸೆತಕ್ಕೆ ಸಿಕ್ಸರ್ ಎತ್ತುವ ಪ್ರಯತ್ನ ಮಾಡಿದ್ದರು. ಚೆಂಡು ಸಿಕ್ಸರ್‌ಗೆ ಹೋಯ್ತು ಅನ್ನುವಷ್ಟರಲ್ಲೇ ಎಬಿಡಿ ಕ್ಯಾಚ್ ಹಿಡಿದು ಸರ್ಪ್ರೈಸ್ ಕೊಟ್ಟಿದ್ದರು. ಜಾರ್ಜಿಯಾ ಅವರ ಕ್ಯಾಚ್ ಈ ಸನ್ನಿವೇಶವನ್ನ ನೆನಪಿಸಿದ್ದು, ಸೋಶಿಯಲ್ ಮೀಡಿಯಾಗಳಲ್ಲೂ ʻಲೇಡಿ ಎಬಿಡಿʼ ಎಂಬ ಟ್ರೆಂಡ್ ಹುಟ್ಟಿಕೊಂಡಿದೆ. ಇದನ್ನೂ ಓದಿ: WPL 2024: ಆರ್‌ಸಿಬಿ ಸ್ಟಾರ್ ಶ್ರೇಯಾಂಕ ಪಾಟೀಲ್‌ಗೆ ಮದುವೆ ಪ್ರಪೋಸಲ್ ಕೊಟ್ಟ ಅಭಿಮಾನಿ