ಮೈಸೂರು: ವಿಶ್ವ ವಿಖ್ಯಾತ ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಜಂಬೂಸವಾರಿ ವೇಳೆ ಭದ್ರತೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಸುಮಾರು 5 ಸಾವಿರ ಪೊಲೀಸರನ್ನು ಈಗಾಗಲೇ ನಿಯೋಜಿಸಲಾಗಿದೆ.
ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜಂಬೂ ಸವಾರಿ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನಿಗಾ ವಹಿಸಲಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ- ಅಂಬಾರಿ ಹೊರಲು ಕ್ಯಾಪ್ಟನ್ ಅಭಿಮನ್ಯು ರೆಡಿ
ಮೆರವಣಿಗೆಯ ಭದ್ರತೆಗಾಗಿ ಮೈಸೂರು ನಗರದ 1,255 ಪೊಲೀಸರು, ಹೊರ ಜಿಲ್ಲೆಯಿಂದ 3,580, ಗೃಹ ರಕ್ಷಕ ದಳದ 650 ಸಿಬ್ಬಂದಿ ಇರಲಿದ್ದಾರೆ. ಹೀಗೆ ಒಟ್ಟು 5,485 ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮನೆ, ಖಾಸಗಿ ಸಂಸ್ಥೆಗಳು ಸೇರಿ 13 ಸಾವಿರ ಸಿಸಿ ಟಿವಿ ಕ್ಯಾಮೆರಾಗಳು ಹಾಗೂ ಅಂಬಾರಿ ಮಾರ್ಗಕ್ಕೆ ಪೊಲೀಸ್ ಇಲಾಖೆಯಿಂದ ಹೆಚ್ಚುವರಿ 59 ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.
ಹೆಚ್ಚುವರಿಯಾಗಿ ಮೆರವಣಿಗೆ ನಡೆಯುವ ಜಾಗದಲ್ಲಿ 110 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಅನುಚಿತವಾಗಿ ವರ್ತಿಸುವವರ ವಿರುದ್ಧ ಸಿಸಿಟಿವಿ ಜೊತೆ ಮೊಬೈಲ್ ಕಮಾಂಡಿಂಗ್ ವಾಹನದ ಮೂಲಕ ಹದ್ದಿನ ಕಣ್ಣು ಇಡಲಾಗಿದೆ.