ಕೊಪ್ಪಳ: ನಮ್ಮ ಜೀವನದಲ್ಲಿ ಯಾವುದೇ ವಿಘ್ನಗಳು ಬಾರದಿರಲಿ ಎಂದು ಜನರು ಗಣಪನನ್ನು ಪೂಜಿಸುತ್ತಾರೆ. ಆದರೆ ಕೊಪ್ಪಳದ ಊರೊಂದರಲ್ಲಿ ವಿಘ್ನೇಶನ ವಾಹನವಾಗಿರುವ ಇಲಿಗೂ ಒಂದು ದಿನ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಹೌದು, ನೇಕಾರಿಕೆಯನ್ನೇ ಜೀವಾಳವಾಗಿಸಿಕೊಂಡಿರುವ ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿ ಇಲಿರಾಯನ ಪೂಜೆ ಬಲು ಸಂಭ್ರಮದಿಂದ ನಡೆಸಲಾಗಿದೆ. ಗಣೇಶ ಪ್ರತಿಷ್ಠಾಪನೆಯ ಮರುದಿನ ಪ್ರತಿ ವರ್ಷ ಇಲಿಗೆ ಪೂಜೆ ಸಲ್ಲಿಸಲಾಗುತ್ತದೆ. ನೇಕಾರರು ಸೇರಿದಂತೆ ಬೇರೆ, ಬೇರೆ ಸಮುದಾಯದ ಜನರ ಮನೆಗಳಲ್ಲಿ ಮಗ್ಗಗಳು ಇರುವುದರಿಂದ ಎಲ್ಲರೂ ಇಲಿಗೆ ಪೂಜೆ ಸಲ್ಲಿಸುತ್ತಾರೆ. ಗಣೇಶ ಹಬ್ಬಕ್ಕಿಂತ ಹೆಚ್ಚು ಶ್ರದ್ಧಾಭಕ್ತಿಯಿಂದ ಇಲಿರಾಯನನ್ನು ಆರಾಧಿಸುತ್ತಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಅಪಘಾತ – ಇನ್ಸ್‌ಪೆಕ್ಟರ್ ದಂಪತಿಯಿಂದ ಕಿರಿಕ್
ಚಿತ್ರಗಾರರ ಮನೆಯಲ್ಲಿ ತಯಾರಿಸಿದ ಮಣ್ಣಿನ ಇಲಿ ಮೂರ್ತಿಗಳನ್ನು ತಂದು ಪೂಜೆ ಮಾಡಲಾಗುತ್ತದೆ. ಮನೆಯಲ್ಲಿ ಓಡಾಡುವ ಇಲಿಗಳು ಮಗ್ಗಗಳ ನೂಲನ್ನು ಹಾಗೂ ಸೀರೆಗಳಿಗೆ ಹಾನಿ ಮಾಡದಿರಲಿ ಎಂಬ ಉದ್ದೇಶದೊಂದಿಗೆ ಈ ಪೂಜೆ ಮಾಡಲಾಗುತ್ತದೆ. ಅಲ್ಲದೇ ಹೀಗೆ ಪೂಜೆ ಮಾಡಿದರೆ ಇಲಿಗಳು ಕಾಟ ಕೊಡುವುದಿಲ್ಲ ಎಂಬ ನಂಬಿಕೆ ಇದೆ. ಹೀಗಾಗಿ ಕಡುಬು, ಚಕ್ಕುಲಿ, ಉಂಡೆ, ಕರ್ಜಿಕಾಯಿ, ಸಂಡಿಗೆ, ಹಪ್ಪಳ ಸೇರಿ ವಿವಿಧ ಅಡುಗೆ ಮಾಡಿ ನೈವೇದ್ಯ ಅರ್ಪಿಸಲಾಗುತ್ತದೆ. ಇದನ್ನೂ ಓದಿ: ಪೋಕ್ಸೋ ಕೇಸ್ – ಸಾಕ್ಷ್ಯ ನಾಶ ಮಾಡಿದ್ರಾ ಮುರುಘಾ ಶ್ರೀ?
ಗಣೇಶ ಹಬ್ಬ ಬಂತು ಅಂದರೆ ಭಾಗ್ಯನಗರದಲ್ಲಿ ಆಚರಣೆಗಳು ಹಲವು ರೂಪಗಳಲ್ಲಿ ಕಂಡು ಬರುತ್ತವೆ. ಒಂದೊಂದು ಆಚರಣೆಯ ಹಿಂದೆಯೂ ಒಂದೊಂದು ಅರ್ಥವಿರುತ್ತದೆ ಎಂಬುದಕ್ಕೆ ಇಲಿಗೂ ಪೂಜೆ ಸಲ್ಲಿಸುವ ಪದ್ಧತಿ ಉದಾಹರಣೆಯಾಗಿದೆ.