ಉಡುಪಿ: ಇಲ್ಲಿನ ಶ್ರೀಕೃಷ್ಣನ ಪೂಜಾಧಿಕಾರ ಪೇಜಾವರ ಮಠದಿಂದ ಪಲಿಮಾರು ಮಠಕ್ಕೆ ಹಸ್ತಾಂತರವಾಗಲಿದೆ. ಈ ಹಿನ್ನೆಲೆಯಲ್ಲಿ ಹಲವಾರು ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದೆ. ಈ ಪೈಕಿ ಸೂರೆ ಬಿಡುವುದು ಕೂಡಾ ಒಂದು.
ಇಂದು ಮಧ್ಯಾಹ್ನ ಮಠದಲ್ಲಿ ಅನ್ನದಾನ ಇತ್ತು. ಎಲ್ಲರ ಊಟದ ನಂತರ ಮಠದ ಪಾಕಶಾಲೆಯಲ್ಲಿ ಸೂರೆ ಬಿಡುವ ಆಚರಣೆ ನಡೆಯಿತು. ಸೂರೆ ಬಿಡುವ ಆಚರಣೆಗೋಸ್ಕರ ಬಹಳಷ್ಟು ಅನ್ನ, ಸಾರು, ಸಾಂಬಾರು, ಪಾಯಸ, ಸ್ವೀಟ್ ಉಳಿಸಲಾಗುತ್ತದೆ. ಮಠದಿಂದ ಭಕ್ತರೆಲ್ಲರಿಗೆ ಸೂರೆ ಮಾಡಲು ಆದೇಶವಾಗುತ್ತದೆ.
Advertisement
ಸೂರೆಯನ್ನು ನೋಡುವುದೇ ಒಂದು ಕುತೂಹಲ. ಪಾಕಶಾಲೆಯಲ್ಲಿ ಬರುವ ಎಲ್ಲರೂ ಬೇಕು ಬೇಕಾದಷ್ಟು ಅನ್ನ, ಸಾರು, ಪಾಯಸ ಮನೆಗೆ ಕೊಂಡೊಯ್ದರು. ಸ್ವೀಟ್ ಗಳನ್ನು ಬಾಚಿ ಬಾಚಿ ಕೊಂಡೊಯ್ದರು. ಅನ್ನದ ರಾಶಿ- ಸಾರಿನ ಗುಡಾಣವನ್ನು ಸೂರೆಗೈದರು. ಪ್ರತೀ ಪರ್ಯಾಯ ಮುಗಿಯುವ ಹೊತ್ತಿಗೆ ಈ ಸೂರೆ ಕಾರ್ಯಕ್ರಮ ನಡೆಯುತ್ತದೆ.
Advertisement
Advertisement
ಅನ್ನಬ್ರಹ್ಮನ ಸೇವೆಗೆ ಮುಡಿಪಾಗುವ ಮಹೂರ್ತಗಳು:
ತಿರಪತಿಯ ಶ್ರೀನಿವಾಸನನ್ನು ಕಾಂಚನಬ್ರಹ್ಮ ಎಂದೂ, ಪಂಡಾರಪುರದ ಪಾಂಡುರಂಗನನ್ನು ನಾದಬ್ರಹ್ಮನೆಂದೂ, ಉಡುಪಿಯ ಕೃಷ್ಣನನ್ನು ಅನ್ನಬ್ರಹ್ಮನೆಂದೂ ಕರೆಯುತ್ತಾರೆ.
Advertisement
ಭಕ್ತಿಯ ದಾಹದಿಂದ ಉಡುಪಿಗೆ ಬಂದವರು ಬರಿಯ ಹೊಟ್ಟೆಯಲ್ಲಿ ಹಿಂತಿರುಗಬಾರದು ಎಂದು ಶತಮಾನಗಳ ಹಿಂದಿನಿಂದ ಕೃಷ್ಣಮಠದಲ್ಲಿ ಅನ್ನದಾನ ನಡೆಯುತ್ತಿದೆ. ಇದೇ ಕಾರಣಕ್ಕೆ ಕೃಷ್ಣ ಅನ್ನಬ್ರಹ್ಮನೆನಸಿಕೊಂಡಿದ್ದಾನೆ. ಇಲ್ಲಿ ಪ್ರತಿನಿತ್ಯವೂ 10 ಸಾವಿರಕ್ಕೆ ಕಮ್ಮಿ ಇಲ್ಲದಂತೆ ಭಕ್ತರು ಕೃಷ್ಣನ ಪ್ರಸಾದದ ರೂಪದಲ್ಲಿ ಊಟ ಮಾಡುತ್ತಾರೆ. ಹಬ್ಬ ಹರಿದಿನಗಳಂದಂತೂ 25 ಸಾವಿರಕ್ಕೂ ಮಿಕ್ಕಿ ಜನರು ಊಟ ಮಾಡಿದ ದಾಖಲೆ ಇಲ್ಲಿದೆ.
ಇಷ್ಟು ಜನರಿಗೆ ಊಟ ಹಾಕುವುದು ಅಷ್ಟು ಸುಲಭದ ಮಾತಲ್ಲ, ಪ್ರತಿ 2 ವರ್ಷಕ್ಕೊಮ್ಮೆ ಕೃಷ್ಣಮಠದ ಆಡಳಿತ (ಪರ್ಯಾಯ) ಬದಲಾಗುವುದರಿಂದ ಅನ್ನದಾನಕ್ಕೆ ಸಂಪನ್ಮೂಲ ಕ್ರೋಢಿಕರಣ ದೊಡ್ಡ ಸವಾಲು. ಅದಕ್ಕಾಗಿ ಪರ್ಯಾಯ ಪೂಜಾಧಿಕಾರವನ್ನು ಪಡೆಯುವ ಮಠವು 4 ಮುಹೂರ್ತಗಳ ರೂಪದಲ್ಲಿ ಸಿದ್ಧತೆಗಳನ್ನು ನಡೆಸುತ್ತದೆ. ಹಿಂದೆ ಮಠಗಳು ಆರ್ಥಿಕವಾಗಿ ಕಷ್ಟದಲ್ಲಿದ್ದಾಗ ಅನ್ನದಾನಕ್ಕೆ ಬೇಕಾಗಿದ್ದ ಅಕ್ಕಿ, ಕಟ್ಟಿಗೆ, ಭತ್ತಗಳನ್ನು ವಿದ್ಯುಕ್ತವಾಗಿ ಸಂಗ್ರಹಿಸುವುದಕ್ಕಾಗಿ ನಡೆಯುತ್ತಿದ್ದ ಈ ಮುಹೂರ್ತಗಳು ಇಂದ ಮಠಗಳು ಸ್ವಾವಲಂಭಿಯಾಗಿರುವಾಗ ಸಾಂಕೇತಿಕವಾಗಿ ನಡೆಯುತ್ತಿವೆ.
ಪ್ರಥಮತಃ ಬಾಳೆ-ತುಳಸಿ ಮುಹೂರ್ತ:
ಪರ್ಯಾಯ ಪೂಜಾ ಕಾಲದಲ್ಲಿ ಹಾಗೂ ಅನ್ನ ಸಂತರ್ಪಣೆಗೆ ಬಾಳೆ ಎಲೆ, ಬಾಳೆಹಣ್ಣು, ದಿಂಡು – ನಾರು, ತುಳಸಿ ಸಮೃದ್ಧವಾಗಿ ದೊರೆಯಲಿ ಎಂದು ಚಂದ್ರಮೌಳಿಶ್ವರ, ಅನಂತೇಶ್ವರ ಶ್ರೀಕೃಷ್ಣ ಹಾಗೂ ಮಧ್ವಚಾರ್ಯರ ಎದುರಲ್ಲಿ ಪ್ರಾರ್ಥಿಸಿ ಒಂದು ಶುಭ ದಿನದಂದು ಬಾಳೆತೋಟವನ್ನು ಬೆಳೆಸುವ ಮುಹೂರ್ತ ಇದು.
ದ್ವಿತೀಯ ಅಕ್ಕಿ ಮುಹೂರ್ತ:
ಎರಡು ವರ್ಷಗಳ ಪರ್ಯಾಯಾವಧಿಯಲ್ಲಿ ಲಕ್ಷೋಪಲಕ್ಷ ಭಕ್ತರಿಗೆ ಅನ್ನ ಸಂತರ್ಪಣೆಗೆ ಬೇಕಾಗುವ ಅಕ್ಕಿಯನ್ನು ಭಕ್ತರಿಂದ ಸಂಗ್ರಹಿಸುವ ಮುಹೂರ್ತ ಇದು. ಅಂದು ದೇವರಲ್ಲಿ ಚಿನ್ನದ ಪಲ್ಲಕ್ಕಿ ಯಲ್ಲಿ ಅಕ್ಕಿಯ ಮುಡಿಯನ್ನು ಇಟ್ಟು ಮೆರವಣಿಗೆ ಮಾಡಿ ಮುಹೂರ್ತ ನಡೆಸಲಾಗುತ್ತದೆ.
ತೃತೀಯ ಕಟ್ಟಿಗೆ ಮುಹೂರ್ತ:
ಪರ್ಯಾಯಕ್ಕೆ ಆರು ತಿಂಗಳು ಬಾಕಿ ಇರುವಾಗ ಅನ್ನ ಸಂತರ್ಪಣೆಗೆ ಅವಶ್ಯಕವಾದ ಕಟ್ಟಿಗೆಯನ್ನು ಭೋಜನಶಾಲಾ ಹಿಂಭಾಗದಲ್ಲಿ ರಥದ ಆಕೃತಿಯಲ್ಲಿ ಸಂಗ್ರಹಿಸುವ ಶುಭಾವಸರವೇ ಕಟ್ಟಿಗೆ ಮುಹೂರ್ತ.
ಚರ್ತುರ್ಥ ಭತ್ತ ಮುಹೂರ್ತ:
ಇದು ಕೊನೆಯ ಮುಹೂರ್ತ ಇದಾಗಿದೆ. ಅವಿರತ ಅನ್ನಯಜ್ಞಗಾಗಿ ಶ್ರೀಕೃಷ್ಣನ ಪ್ರಾರ್ಥನೆಯೊಂದಿಗೆ ಬಡಗುಮಾಳಿಗೆಯಲ್ಲಿ ಭತ್ತವನ್ನು ಚೀಲದ ಸಂಗ್ರಹವೇ ಭತ್ತ ಮುಹೂರ್ತ. ಪ್ರತಿದಿನ ರಾತ್ರಿ ದೇವರಿಗೆ ವಾಲಗಪೂಜೆಗೆ, ಯತಿಗಳ ಮಾಲಿಕಾ ಮಂಗಳಾರತಿಗೆ ಬೇಕಾಗುವ ಅರಳ ತಯಾರಿಸುವ ಭತ್ತ ಸಂಗ್ರಹವೇ ಇದರ ಉದ್ದೇಶವಾಗಿದೆ.