ಮಡಿಕೇರಿ: ಜಮ್ಮು-ಕಾಶ್ಮೀರ (Jammu Kashmir) ಪೂಂಚ್‌ನಲ್ಲಿ ನಡೆದ ದುರಂತದಲ್ಲಿ ಕರ್ನಾಟದ ಮೂವರು ಸೈನಿಕರು ಹುತಾತ್ಮರಾಗಿದ್ದರು. ಈ ನಡುವೆ ಗಂಭೀರ ಗಾಯಗೊಂಡು ಶ್ರೀನಗರದ ಉದಂಪುರ್ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ಕೊಡಗಿನ ಯೋಧ (Kodagu soldier) ದಿವಿನ್ (28) ಭಾನುವಾರ ರಾತ್ರಿ ಹುತಾತ್ಮರಾಗಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಸೇನಾ ವಾಹನ ಪ್ರಪಾತಕ್ಕೆ ಉರುಳಿದ ದುರಂತದಲ್ಲಿ ಕೊಡಗಿನ ಯೋಧ ಗಂಭೀರ ಗಾಯಗೊಂಡಿದ್ದರು. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಗ್ರಾಮದ 28 ವರ್ಷ ಪ್ರಾಯದ ದಿವಿನ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರು. ಶುಕ್ರವಾರ ಮಧ್ಯಾಹ್ನದ ವೇಳೆಗೆ ದಿವಿನ್ ಹುಟ್ಟೂರು ಸೋಮವಾರಪೇಟೆ ತಾಲೂಕಿನಲ್ಲಿ ಸಿದ್ದರಾಪುರದಲ್ಲಿರುವ ದಿವಿನ್ ಅವರ ತಾಯಿಗೆ (ಜಯ) ಸೇನಾಧಿಕಾರಿಗಳು ಕರೆ ಮಾಡಿ ಮಗನ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದರು.
ಮಾಹಿತಿ ಪಡೆದ ನಂತರ ದಿವಿನ್ ಅವರ ತಾಯಿ ಹಾಗೂ ಕುಟುಂಬಸ್ಥರು ಶುಕ್ರವಾರ ಶ್ರೀನಗರಕ್ಕೆ ಹೋರಟ್ಟಿದ್ದರು. ಶ್ರೀನಗರದ ಆಸ್ಪತ್ರೆಗೆ ತೆರಳಿ ಮಗನ ಪರಿಸ್ಥಿತಿ ಕಂಡು ದುಃಖ ಹೋರ ಹಾಕಿದ್ರು. ಈ ಸಂದರ್ಭದಲ್ಲಿ ತಾಯಿಯ ಧ್ವನಿ ಕೇಳಿ ಚಿಕಿತ್ಸೆಗೆ ಸ್ಪಂದಿಸುವ ರೀತಿಯಲ್ಲಿ ದಿವಿನ್ ಕಣ್ಣಿನ ರೆಪ್ಪೆ ತೆರೆದು ನೋಡಿದ್ದರಂತೆ, ಬಳಿಕ ಹಾಗೆಯೇ ಮಲಗಿದ್ದರಂತೆ. ಇದನ್ನು ಕಂಡ ಜಯ ಅವರು ಮಗನ ಆರೋಗ್ಯದಲ್ಲಿ ಸ್ವಲ್ಪ ಚೇತರಿಗೆ ಆಗುತ್ತಿದೆ ಎಂದು ಸಮಾಧಾನಪಟ್ಟುಕೊಂಡಿದ್ದರು.
ದಿವಿನ್ ತಾಯಿ ಮಗನ ಆರೈಕೆ ಮಾಡುತ್ತಿದ್ದರು. ಆದ್ರೆ ಶ್ವಾಸಕೋಶದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ದಿವಿನ್ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇನ್ನೂ ಯೋಧ ದಿವಿನ್ ಮೃತದೇಹ ಶ್ರೀನಗರದ ಉದಂಪುರ್ ಕಮಾಂಡೋ ಆಸ್ಪತ್ರೆಯಲ್ಲೇ ಇರಿಸಲಾಗಿದೆ. ಸೋಮವಾರ (ಡಿ.30) ಬೆಳಗ್ಗೆ ಯೋಧನ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ಕಳಿಸುವ ಪ್ರಕ್ರಿಯೆ ನಡೆಯಲಿದೆ.