ವಿಶಿಷ್ಟ ರೀತಿಯಲ್ಲಿ ಹಸೆಮಣೆ ಏರಿದ ಯೋಧ – ಹುತಾತ್ಮ ಸೈನಿಕರ ಪತ್ನಿಯರು, ನಿವೃತ್ತ ಯೋಧರಿಗೆ ಮಂಟಪದಲ್ಲೇ ಸನ್ಮಾನ

Public TV
2 Min Read
bagalakote soldier

ಬಾಗಲಕೋಟೆ: ಬೀಳಗಿ ಪಟ್ಟಣದಲ್ಲಿ ದೇಶ ಕಾಯುವ ಸೈನಿಕ ವಿಶಿಷ್ಟ ರೀತಿಯಲ್ಲಿ ಮದುವೆಯಾಗಿದ್ದಾರೆ. ಮದುವೆ ಮಂಟಪದಲ್ಲೇ ಹುತಾತ್ಮ ಯೋಧರ ಪತ್ನಿಯರು, ನಿವೃತ್ತ ಸೈನಿಕರು ಹಾಗೂ ಯುದ್ಧದಲ್ಲಿ ಗಾಯಗೊಂಡ ಯೋಧರನ್ನು ಸನ್ಮಾನಿಸಿ ಗೌರವಿಸಿದ್ದಾರೆ.

ಬೀಳಗಿ ಪಟ್ಟಣ ನಿವಾಸಿಯಾಗಿರುವ ಸಂತೋಷ್ ಭಾವಿಕಟ್ಟಿ ಸೇನಾ ಯೋಧ, ಗುರುವಾರ ಜರುಗಿದ ತಮ್ಮ ಮದುವೆ ಸಮಾರಂಭದಲ್ಲಿ ಹುತಾತ್ಮ ಯೋಧರ ಧರ್ಮಪತ್ನಿಯರು, ಯುದ್ದದಲ್ಲಿ ಗಾಯಾಳು ಆಗಿರುವ ಸೈನಿಕರು, ನಿವೃತ್ತ ಸೈನಿಕರನ್ನು ಸನ್ಮಾನಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆ – ಬ್ರಿಗೇಡ್‌ ರಸ್ತೆಯಲ್ಲಿ ಜೋಡಿಗಳಿಗೆ ಪ್ರತ್ಯೇಕ ಮಾರ್ಗ

bagalakote soldier 1

ಶೃತಿ ಎಂಬ ಯುವತಿಯ ಕೈಹಿಡಿದ ಯೋಧ ಸಂತೋಷ್, ಬೀಳಗಿ ಪಟ್ಟಣದ ಹೊರವಲಯದ ಸಿದ್ದೇಶ್ವರ ದೇವಸ್ಥಾನದಲ್ಲಿ ಮದುಯಾಗಿದ್ದಾರೆ. ಕಲ್ಯಾಣ ಮಂಟಪದಲ್ಲಿ ಆರತಕ್ಷತೆಯ ಮಂತ್ರಗಳ ಜೊತೆ ‘ಬೋಲೋ ಭಾರತ್‌ ಮಾತಾಕೀ ಜೈ… ಇಂಡಿಯನ್ ಆರ್ಮಿಗೆ ಜೈ’ ಎಂಬ ಘೋಷಣೆಗಳು ಮೊಳಗಿದ್ದು ವಿಶೇಷವಾಗಿತ್ತು.

ಸಂತೋಷ್ ಬಾವಿಕಟ್ಟಿ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಹೊಂದಿರುವ ಸೇನಾ ಯೋಧರಾಗಿದ್ದು, ದೇಶಭಕ್ತಿ ಹಾಗೂ ವಿವಿಧ ವಿಷಯದ ಬಗ್ಗೆ ರೀಲ್ಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಯೋಧ ಸಂತೋಷ್ ತಮ್ಮ ಮದುವೆಯಲ್ಲಿ ಪುಲ್ವಾಮಾ, ಸಿಯಾಚಿನ್ ಪ್ರದೇಶದಲ್ಲಿ ಹುತಾತ್ಮ ಯೋಧರ ಪತ್ನಿಯರನ್ನು ಸನ್ಮಾನಿಸುವ ಕನಸು ಹೊತ್ತಿದ್ದರು. ಅದರಂತೆ ಸೈನಿಕರು ಹಾಗೂ ಸೈನಿಕರ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಇದನ್ನೂ ಓದಿ: ವಿಜಯಪುರದ ನಡು ರಸ್ತೆಯಲ್ಲೇ ಹೊತ್ತಿ ಉರಿದ ಜನತಾ ಬಸ್ – ತಪ್ಪಿದ ಭಾರೀ ಅನಾಹುತ

bagalakote soldier 2

ತಮ್ಮ ಮದುವೆಗೆ ಸಿಯಾಚಿನ್ ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ ಪತ್ನಿ ಮಹಾದೇವಿ ಕೊಪ್ಪದ, ಕಾರ್ಗಿಲ್ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ, ಕಾರ್ಗಿಲ್ ಯುದ್ದದ ಗಾಯಾಳು ಯೋಧ ರಂಗಪ್ಪ ಆಲೂರು, ಪುಲ್ವಾಮಾ ಹುತಾತ್ಮ ಯೋಧ ಕಾಶಿರಾಯ ಬೊಮ್ಮನಹಳ್ಳಿ ಅವರ ಪತ್ನಿ ಸಂಗೀತಾ ಬೊಮ್ಮನಹಳ್ಳಿ ಸೇರಿದಂತೆ ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆಯ ಎಂಟು ಮಂದಿಯನ್ನು ಸನ್ಮಾನಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ನಿವೃತ್ತ ಯೋಧರು, ಹುತಾತ್ಮ ಯೋಧರ ಕುಟುಂಬದವರನ್ನ ಸಾಮಾನ್ಯವಾಗಿ ರಾಷ್ಟ್ರೀಯ ಹಬ್ಬಗಳ ಸಮಯದಲ್ಲಿ ಮಾತ್ರ ನೆನಪು ಮಾಡಿಕೊಳ್ಳುತ್ತಾರೆ. ಆದರೆ, ಸಂತೋಷ್ ತನ್ನ‌ ಜೀವನದ ಸಂತೋಷದ ಗಳಿಗೆಗೆ ನಮ್ಮನ್ನೆಲ್ಲ ಕರೆದು ಸನ್ಮಾನಿಸಿ, ಗೌರವಿಸಿದ್ದಾರೆ. ತಮ್ಮ ಕುಟುಂಬದ ಸಂಭ್ರಮದಲ್ಲಿ ನಮ್ಮನ್ನು ಭಾಗಿ ಆಗುವಂತೆ ಮಾಡಿದ್ದಾನೆ. ಅವರ ದಾಂಪತ್ಯ ಜೀವನ ಚೆನ್ನಾಗಿ ಸಾಗಲಿ ಎಂದು ಹಾರೈಸಿದ್ದಾರೆ.

Share This Article