ಭಾರತೀಯ ಉಪಖಂಡದ ಆಗ್ನೇಯದಲ್ಲಿರುವ ದ್ವೀಪ ರಾಷ್ಟ್ರ ಶ್ರೀಲಂಕಾ (Srilanka). ಈ ದೇಶವು ಲಂಕಾ, ಲಂಕಾದ್ವೀಪ, ಸಿಂಹಳದ್ವೀಪ, ಸೆರೆಂದಿಬ್ ಮೊದಲಾದ ಹೆಸರುಗಳಿಂದ ಗುರುತಿಸಲ್ಪಟ್ಟಿದೆ. ಬ್ರಿಟಿಷ್ ಆಡಳಿತದ ಕಾಲದಲ್ಲಿ ಸಿಲೋನ್ (Ceylon ) ಎಂದು ಹೆಸರು ಪಡೆದಿತ್ತು. ಬಳಿಕ 1972 ರಲ್ಲಿ ಅದರ ಹೆಸರನ್ನು ಶ್ರೀಲಂಕಾ ಎಂದು ಬದಲಾಯಿಸಲಾಯಿತು.
ಶ್ರೀಲಂಕಾ ಹಾಗೂ ಭಾರತ (India) ಪವಿತ್ರವಾದ ರಾಮಾಯಣದ (Ramayana) ಜೊತೆ ಸಂಬಂಧ ಹಾಕಿಕೊಂಡಿರುವ ದೇಶಗಳಾಗಿವೆ. ಶ್ರೀ ರಾಮನ (Srirama) ಇರುವಿಕೆಯನ್ನು ಸಾರಿದ ಅದೆಷ್ಟೋ ಸ್ಥಳಗಳು ಈ ಎರಡು ದೇಶಗಳಲ್ಲೂ ಇವೆ. ಇದಕ್ಕೆ ಪುಷ್ಠಿ ನೀಡುವಂತೆ ಭಾರತೀಯ ಮಹಾಕಾವ್ಯವಾದ ರಾಮಾಯಣದಲ್ಲಿ ಉಲ್ಲೇಖಗಳಿವೆ.
Advertisement
Advertisement
ಪ್ರಮುಖ ಪ್ರವಾಸಿ ತಾಣಗಳು: ಶ್ರೀಲಂಕಾ ಅತೀ ಚಿಕ್ಕ ದ್ವೀಪ ಹಾಗೂ ಕಡಿಮೆ ಪ್ರಮಾಣದ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ. ಇಲ್ಲಿ ಅನೇಕ ಬೀಚ್, ಹೋಟೆಲ್, ರೆಸ್ಟೋರೆಂಟ್‍ಗಳು ಅಭಿವೃಧ್ದಿಯ ಪಥದಲ್ಲಿವೆ. ಜೊತೆಗೆ ಇಲ್ಲಿನ ವನ್ಯಸಂಪತ್ತು ಕೂಡ ಪ್ರವಾಸಿಗರನ್ನು (Tourist) ಕೈ ಬೀಸಿ ಕರೆಯುತ್ತಿದೆ. ಈ ದೇಶದ ದಕ್ಷಿಣ ಕರಾವಳಿಯಲ್ಲಿನ ಮೊಟ್ಟೆ ಇಡುವ ಆಮೆಗಳು, ವರ್ಣರಂಜಿತ ಪಕ್ಷಿಗಳು, ನಾನಾ ಬಗೆಯ ಕೋತಿಗಳು, ಚಿರತೆಗಳು, ನೀಲಿ ತಿಮಿಂಗಿಲ, ಹಾರುವ ಮೀನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿರುವ ಅಶೋಕ ವಾಟಿಕಾ (Ashoka Vatika) ಬಗ್ಗೆ ಇಲ್ಲಿ ವಿವರಿಸಲಾಗಿದೆ.
Advertisement
Advertisement
ಹೆಸರಿಡಲು ಕಾರಣವೇನು?: ಹಿಂದೂ ಧರ್ಮದಲ್ಲಿ (Hindu Religion) ಪವಿತ್ರವೆಂದು ಪರಿಗಣಿಸಲ್ಪಟ್ಟ ಅಶೋಕ ವೃಕ್ಷದ (Ashoka Tree) ಹೆಸರನ್ನು ಈ ಉದ್ಯಾನವನಕ್ಕೆ ಇಡಲಾಗಿದೆ. ಹನುಮಂತನು ತನ್ನ ಶಕ್ತಿಯನ್ನು ತೋರಿಸಲು ಮರವನ್ನು ಕಿತ್ತುಹಾಕಿದನು ಎಂದು ಹೇಳಲಾಗುತ್ತದೆ. ಇಂದು ಶ್ರೀಲಂಕಾದಲ್ಲಿ ಸೀತಾ ಅಮ್ಮನ ದೇವಾಲಯ ಎಂದು ಕರೆಯಲ್ಪಡುವ ದೇಗುಲವಿದೆ. ಇದು ಅಶೋಕ್ ವಾಟಿಕಾ ಸ್ಥಳದಲ್ಲಿದೆ ಎಂದು ನಂಬಲಾಗಿದೆ. ಈ ದೇವಾಲಯವು ರಾಮ ಮತ್ತು ಸೀತೆಯ ಭಕ್ತರಿಗೆ ಜನಪ್ರಿಯ ಯಾತ್ರಾ ಸ್ಥಳವಾಗಿದೆ. ಈ ದೇಗುಲದೊಳಗೆ ನುಗ್ಗಿದಾಗ ಒಂದು ಬಾರಿ ಮನಸ್ಸು ನಿರಾಳವಾಗುತ್ತದೆ. ದೇಗುಲದೊಳಗೆ ಹೋದಾಗ ಅಲ್ಲಿನ ತಂಪಾದ ವಾತಾವರಣವು ಇತಿಹಾಸ ನೆನಪಿಸುವಂತಿದೆ.
ಅಶೋಕ ಮರದ ವಿಶೇಷತೆ: ಈ ವಾಟಿಕಾಕ್ಕೆ ಹೋದ ನಂತರ ಅಶೋಕ ಮರಗಳು ಗಮನ ಸೆಳೆಯುತ್ತವೆ. ಅದರ ಎಲೆಗಳಲ್ಲಿನ ರಕ್ತನಾಳಗಳನ್ನು ಸಾಕಷ್ಟು ಸ್ಪಷ್ಟವಾಗಿ ಕಾಣಬಹುದು. ಕೆಂಪು ಹೂವುಗಳೊಂದಿಗೆ ಮರವು ವರ್ಷದಲ್ಲಿ ಎರಡು ಬಾರಿ ಅರಳುತ್ತದೆ. ಇದನ್ನು ‘ಸೀತಾ ಫೂಲ್ (ಹೂವು)’ ಎಂದು ಕರೆಯಲಾಗುತ್ತದೆ. ಮರವು ತಾಯಿಯಂತಹ ಪ್ರೀತಿಯನ್ನು ನೀಡಿ ಸೀತೆಯ ದುಃಖವನ್ನು ಹೋಗಲಾಡಿಸಿತು. ಆದ್ದರಿಂದ ಇದನ್ನು ‘ಅಶೋಕ’ ಮರ ಎಂದು ಕರೆಯಲಾಗುತ್ತದೆ.
ಸೀತಾ ದೇಗುಲ: ಸೀತಾ ಅಮ್ಮನ ದೇವಸ್ಥಾನವು ಸೀತಾ ಎಲಿಯಾ ಗ್ರಾಮದಲ್ಲಿ ಹಕ್ಗಲಾ ಬೊಟಾನಿಕಲ್ ಗಾರ್ಡನ್‍ನಿಂದ ಸುಮಾರು 1 ಕಿಲೋಮೀಟರ್ ಮತ್ತು ನುವಾರ ಎಲಿಯಾದಿಂದ 5 ಕಿಲೋಮೀಟರ್ ದೂರದಲ್ಲಿರುವ ಹಿಂದೂ ದೇವಾಲಯವಾಗಿದೆ. ಸೀತಾ ದೇಗುಲದ ಹಿಂಬಂದಿ ಒಂದು ನದಿ ಹರಿಯುತ್ತದೆ. ಈ ನದಿಯಲ್ಲೇ ಸೀತೆ ಸ್ನಾನ ಮಾಡುತ್ತಿದ್ದಳು. ಅಲ್ಲದೆ ಇಲ್ಲೇ ರಾಮನ ಜಪವನ್ನು ಕೂಡ ಸೀತಾದೇವಿ ಮಾಡುತ್ತಿದ್ದಳು ಎಂದು ನಂಬಲಾಗಿದೆ. ಹೀಗಾಗಿ ಈ ನದಿಗೆ ‘ಸೀತಾಗಂಗಾ’ ಎಂಬ ಹೆಸರಿಡಲಾಗಿದೆ.
ಪುರಾಣ ಕಥೆ ಏನು ಹೇಳುತ್ತೆ?: ರಾವಣ (Ravana) ಸೀತೆಯನ್ನು ಅಪಹರಣ ಮಾಡಿಕೊಂಡು ಬಂದು ಅರಮನೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಾನೆ. ಆದರೆ ಸೀತಾದೇವಿ ಇದಕ್ಕೆ ಒಪ್ಪಿಗೆ ನೀಡುವುದಿಲ್ಲ. ಈ ವೇಳೆ ರಾವಣ ಸೀತೆಯನ್ನು ಅಶೋಕವನದಲ್ಲಿ ಬಿಟ್ಟು ಹೋಗುತ್ತಾನೆ. ಇತ್ತ ಹನುಮಂತ ಸೀತೆಯನ್ನು ಲಂಕೆಯೆಲ್ಲಾ ಹುಡುಕಿಕೊಂಡು ಬರುತ್ತಿರುವಾಗ ಅಶೋಕವಾಟಿಕಾದಲ್ಲಿರುವುದು ತಿಳಿದುಬರುತ್ತದೆ. ಹೀಗಾಗಿ ಇಲ್ಲಿಗೆ ಬಂದ ಹನುಮಂತ ಸೀತೆಗೆ ರಾಮನ ಉಂಗುರ ತೋರಿಸುತ್ತಾನೆ. ಆಗ ಸೀತೆ ಹೌದು ಇದು ರಾಮನ ಉಂಗುರ ಎಂದು ಗುರುತು ಹಿಡಿಯುತ್ತಾಳೆ. ಹನುಮಂತ ಹೋಗಿ ಸೀತಾ ದೇವಿ ಇರುವಿಕೆಯ ಸ್ಥಳದ ಬಗ್ಗೆ ರಾಮನಿಗೆ ವಿಷಯ ಮುಟ್ಟಿಸುತ್ತಾನೆ. ಬಳಿಕ ರಾಮ ಹಾಗೂ ರಾವಣ ನಡುವೆ ಘೋರ ಯದ್ಧ ನಡೆಯುತ್ತದೆ. ಪರಿಣಾಮ ರಾವಣ ನಾಶವಾಗುತ್ತಾನೆ.
ಅಶೋಕ ವನದ ಇನ್ನೊಂದು ವಿಶೇಷತೆ ಏನೆಂದರೆ ಹನುಮಂತ ತನ್ನ ಬಾಲದ ಮೂಲಕ ಇಡೀ ಲಂಕೆಗೆ ಬೆಂಕಿ ಹಚ್ಚಿದ್ದ. ಕೊನೆಗೆ ಅಶೋಕವನಕ್ಕೂ ಬೆಂಕಿ ಇಡುತ್ತಾನೆ. ಹೀಗಾಗಿ ಇಂದಿಗೂ ಈ ವನದ ಮಣ್ಣು ಕಪ್ಪಾಗಿದೆ. ಹನುಮಂತ ಸೀತೆಗೆ ಉಂಗುರ ತೋರಿಸುವ ಮೂರ್ತಿ ಹಾಗೂ ಇದರ ಕೆಳಗಡೆ ಹನುಮನ ಪಾದದ ಕುರುಹನ್ನು ಕೂಡ ಅಶೋಕವಾಟಿಕಾದಲ್ಲಿ ನಾವು ಕಾಣಬಹುದಾಗಿದೆ. ಇದೇ ಅಲ್ಲಿನ ಪ್ರವಾಸದ ಹೈಲೈಟ್ ಆಗಿದೆ. ಇನ್ನು ಅಶೋಕ ಮರಗಳು ಶ್ರೀಲಂಕಾದ ಈ ಭಾಗದಲ್ಲಿ ಮಾತ್ರ ಕಂಡುಬರುತ್ತವೆ ಮತ್ತು ಬೇರೆಲ್ಲಿಯೂ ಇಲ್ಲ ಎಂಬುದು ಇಲ್ಲಿನ ವಿಶೇಷವಾಗಿದೆ.
Web Stories