– ಗುರುಸ್ವಾಮಿಯಾಗಲು ಏನು ಮಾಡಬೇಕು..?
ಶಬರಿಮಲೆ (Sabarimala) ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬರೋದು ಅಯ್ಯಪ್ಪ ಸ್ವಾಮಿ (Ayyappaswamy) ಮತ್ತು ಮಾಲೆ ಧರಿಸುವ ಭಕ್ತರು. ಈ ಅಯ್ಯಪ್ಪ ಸ್ವಾಮಿಯ ಸಾನಿಧ್ಯವಾದ ಶಬರಿಮಲೆಯನ್ನು ಜಾತ್ಯಾತೀತೆಯ ನೆಲೆಬೀಡೆಂದರೆ ತಪ್ಪಾಗಲಾರದು. ಯಾಕೆಂದರೆ ಮಾಲೆ ಧರಿಸಿದ ಯಾವುದೇ ಜಾತಿಯ ಭಕ್ತನಾದರೂ ಕೂಡ ಶಬರಿಮಲೆಯಲ್ಲಿ ಒಂದಾಗುತ್ತಾರೆ. ಇಲ್ಲಿ ಭಕ್ತರ ಭಕ್ತಿಯೇ ಪ್ರಧಾನವಾಗಿರುತ್ತದೆ ಹೊರತು ಜಾತಿ-ಧರ್ಮವಲ್ಲ. ಮಾಲೆ ಧರಿಸಿದ ಪ್ರತಿಯೊಬ್ಬ ಭಕ್ತನು ಕೂಡ ನಾವೆಲ್ಲ ಒಂದೇ ಕುಟುಂಬದವರು ಎಂಬಂತೆ ಮಕರ ಸಂಕ್ರಾಂತಿಯಂದು ಶಬರಿ ಮಲೆಯಲ್ಲಿ ಬಂದು ಸೇರುತ್ತಾರೆ. ಅಂದು ಮಕರ ಜ್ಯೋತಿಯನ್ನು ಕಣ್ತುಂಬಿಕೊಂಡು ಪುನೀತರಾಗುತ್ತಾರೆ.
ಪ್ರತೀ ತಿಂಗಳು ಕೇವಲ 5 ದಿನಗಳ ಕಾಲ ಮಾತ್ರ ತೆರೆಯುವ ಈ ದೇವಾಲಯವು ಪ್ರತೀ ವರ್ಷ ನವೆಂಬರ್‍ನಿಂದ ಡಿಸೆಂಬರ್‍ವರೆಗೆ ಅಯ್ಯಪ್ಪ ಸ್ವಾಮಿ ವ್ರತಧಾರಿಗಳಿಗಾಗಿ ತೆರೆದಿರುತ್ತದೆ. ವ್ರತ ಕೈಗೊಂಡು ಮಾಲೆ ಧರಿಸಿದ ಭಕ್ತರು ಪ್ರತೀ ವರ್ಷ ಈ ಸಮಯದಲ್ಲಿ ಶಬರಿ ಮಲೆ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಶಬರಿ ಮಲೆ ದೇವಾಲಯಕ್ಕೆ ಮಾಲೆಯನ್ನು ಧರಿಸಿ ಭೇಟಿ ನೀಡುವ ಮುನ್ನ ಅಯ್ಯಪ್ಪ ಭಕ್ತರು 41 ದಿನಗಳ ಕಾಲ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಠಿಣ ವ್ರತವನ್ನು ಪಾಲಿಸಬೇಕಾಗುತ್ತದೆ. ಹಾಗಿದ್ರೆ ಮಾಲೆ ಹಾಕುವುದು ಹೇಗೆ..?, ವ್ರತ ಹೇಗೆ ಮಾಡುತ್ತಾರೆ..?, ಗುರುಸ್ವಾಮಿ ಅಂದ್ರೆ ಯಾರು..?, ಮಾಲೆ ಹಾಕಿ ಬಳಿಕ ಅವರ ಜೀವನ ಶೈಲಿ ಹೇಗಿರುತ್ತೆ..? ಹೀಗೆ ಮುಂತಾದ ವಿಚಾರಗಳನ್ನು ಡೀಟೈಲ್ ಆಗಿ ಇಲ್ಲಿ ಕೊಡಲಾಗಿದೆ.
Advertisement
Advertisement
ಮಾಲಾಧಾರಣೆ ಬಗ್ಗೆ: ಅಯ್ಯಪ್ಪ ಸ್ವಾಮಿಯ ಮಾಲಾಧಾರಣೆ ಮಾಡುವಾಗ ಕೆಲವೊಂದು ನಿಯಮಗಳಿವೆ. ಮನೆಯ ಹೊರಗೆ ಎಲ್ಲಿಯಾದರೂ ಮಾಲಾಧಾರಣೆ ಮಾಡಿದರೆ ನೇರವಾಗಿ ಮನೆಗೆ ಹೋಗುವುದು ವಾಡಿಕೆ. ಮಾಲೆ ಹಾಕಿದ ಬಳಿಕ ಯಾವುದೇ ಸಾವು ಸಂಭವಿಸಿದ ಕಡೆ ಹೋಗುವುದು. ಅಂದರೆ ಆಸ್ಪತ್ರೆಗಳು, ಹೋಟೆಲ್‍ಗಳು ಅಥವಾ ಇತರರ ಮನೆಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಕು. ಮಾಲೆಯನ್ನು ಧರಿಸಿರುವಾಗ ಯಾವುದೇ ಅಂತ್ಯಕ್ರಿಯೆಯ ವಿಧಿಗಳನ್ನು ನಡೆಸಬಾರದು. ಹಾಗೆಯೇ ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು. ಇಷ್ಟು ಮಾತ್ರವಲ್ಲದೇ ಮಾಲೆ ಹಾಕಿದ ಬಳಿಕ ಹಗಲು ಹೊತ್ತಿನಲ್ಲಿ ಮಲಗಬಾರದು ಎಂದು ಸಹ ಹೇಳಲಾಗುತ್ತದೆ.
Advertisement
ಮಾಲೆ ಧರಿಸಿದ ಸ್ವಾಮಿಗಳು ಕಪ್ಪು ಬಟ್ಟೆಗಳನ್ನು ಧರಿಸುವುದು ಸಾಮಾನ್ಯ. ಆದರೆ ನೀಲಿ, ಕೇಸರಿ ಬಟ್ಟೆಯನ್ನು ಸಹ ಹಾಕಲು ಅವಕಾಶವಿದೆ. ಶಬರಿಮಲೆಗೆ ತೀರ್ಥಯಾತ್ರೆ ಪೂರ್ಣಗೊಳ್ಳುವವರೆಗೆ ಮಾಲೆಯನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು. ಈ ಸಮಯದಲ್ಲಿ ನಿಮ್ಮನ್ನು ಸ್ವಾಮಿ ಎಂದು ಕರೆಯಲಾಗುತ್ತದೆ. ಅಲ್ಲದೇ ಮಾಲಾಧಾರಿ ಕೂಡ ಎಲ್ಲರನ್ನೂ ಸ್ವಾಮಿ ಎಂದೇ ಕರೆಯಬೇಕು. ಈ ಸಮಯದಲ್ಲಿ ಯಾವುದೇ ರೀತಿಯ ಸೌಂದರ್ಯವರ್ಧಕಗಳು ಅಥವಾ ಇತರ ಅಲಂಕಾರಗಳನ್ನು ಮಾಡುವಂತಿಲ್ಲ. ಭೌತಿಕ ಅಗತ್ಯತೆಗಳು ಮತ್ತು ಆಹಾರದ ವಿಷಯದಲ್ಲಿ ಅತ್ಯಂತ ಸರಳ ಜೀವನವನ್ನು ನಡೆಸಬೇಕು. ಹಾಗೆಯೇ ನಿಮ್ಮ ಉಗುರುಗಳನ್ನು ಕಟ್? ಮಾಡುವುದು ಅಥವಾ ಕೂದಲು ಕತ್ತರಿಸುವುದು ಕೂಡ ಮಾಡಬಾರದು.
Advertisement
ಹೇಗಿರತ್ತೆ ವ್ರತ?: ತಮ್ಮ ಕಷ್ಟಗಳನ್ನು ದೂರಾಗಿಸುವಂತೆ ಬೇಡಿಕೆಯನ್ನಿಟ್ಟು ಮಾಲೆ ಹಾಕುವ ಭಕ್ತರು ಕಠಿಣ ವ್ರತವನ್ನು ಪಾಲಿಸಬೇಕಾಗುತ್ತದೆ. ಮಾಲೆ ಧರಿಸಿದ ವ್ರತ ಧಾರಿಗಳು ಕೊರೆಯುವ ಚಳಿಯಲ್ಲಿ ಮುಂಜಾನೆ ಬೇಗ ಎದ್ದು, ತಣ್ಣೀರಿನಿಂದ ಸ್ನಾನ ಮಾಡುತ್ತಾರೆ. ಬಾಯಲ್ಲಿ ಅಯ್ಯಪ್ಪ ಸ್ವಾಮಿಯ ಭಜನೆ ಹೇಳುತ್ತಿರುತ್ತಾರೆ. ಹಿಡಿದ ವ್ರತ ಮುಗಿಯುವವರೆಗೆ ಚಪ್ಪಲಿ ಧರಿಸುವುದಿಲ್ಲ. ಒಟ್ಟಾರೆಯಾಗಿ ಮಾಂಸಾಹಾರದೊಂದಿಗಿನ ತಮ್ಮ ಐಷಾರಾಮಿ ಜೀವನ ಶೈಲಿಯನ್ನು ತ್ಯಜಿಸಿ, ದುಶ್ಚಟಗಳಿಂದ ದೂರಾಗಿ ಅಯ್ಯಪ್ಪನ ನಾಮ ಸ್ಮರಣೆಯಲ್ಲಿ ತಲ್ಲೀನರಾಗಿರುತ್ತಾರೆ.
ಅಯ್ಯಪ್ಪ ಭಕ್ತರು 41 ದಿನಗಳ ಕಾಲ ಉಪವಾಸ ವ್ರತವನ್ನು ಕೈಗೊಳ್ಳಬೇಕು. ಪ್ರತೀ ವರ್ಷದ ನವೆಂಬರ್ ತಿಂಗಳ ಎರಡನೇ ವಾರದಿಂದ ಭಕ್ತರು ಉಪವಾಸ ವ್ರತವನ್ನು ಕೈಗೊಂಡು ಮಾಲೆಯನ್ನು ಧರಿಸುತ್ತಾರೆ. ಉಪವಾಸದ ಸಮಯದಲ್ಲಿ ಅಯ್ಯಪ್ಪ ಭಕ್ತರು ಯಾವುದೇ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತಿಲ್ಲ. ಭಕ್ತರು ಮಾಲೆ ಧರಿಸಿದ ಸಮಯದಲ್ಲಿ ಕೇವಲ ದೇವರ ಭಜನೆಯಲ್ಲಿ, ಪೂಜೆಯಲ್ಲಿ, ದೇವರ ನಾಮ ಸ್ಮರಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಬಡವರಿಗೆ, ನಿರ್ಗತಿಕರಿಗೆ, ರೋಗಿಗಳಿಗೆ ಕೈಲಾದಷ್ಟು ಸಹಾಯವನ್ನು ಮಾಡಬೇಕು.
ಗುರುಸ್ವಾಮಿ: ಪ್ರತಿಯೊಬ್ಬ ಅಯ್ಯಪ ಸ್ವಾಮಿ ಮಾಲಾಧಾರಿಗೆ ಗುರುಸ್ವಾಮಿಯ ಮಾರ್ಗದರ್ಶನ ಬೇಕಾಗುತ್ತದೆ. ಗುರುಸ್ವಾಮಿಯಾಗಬೇಕಾದರೆ ಓರ್ವ ಅಯ್ಯಪ್ಪ ಮಾಲಾಧಾರಿಯು ಸತತವಾಗಿ 5 ವರ್ಷಗಳ ಕಾಲ ಮಾಲೆಯನ್ನು ಹಾಕಿ, ಪ್ರತೀ ಮಕರ ಸಂಕ್ರಾಂತಿಯಂದು ಅಯ್ಯಪ್ಪನ ದರ್ಶನ ಭಾಗ್ಯವನ್ನು ಪಡೆದುಕೊಳ್ಳಬೇಕಾಗುತ್ತದೆ. 5 ವರ್ಷ ಸಂಪೂರ್ಣಗೊಂಡ ನಂತರ ಅಯ್ಯಪ್ಪ ಸ್ವಾಮಿಯ ಸಾನಿಧ್ಯದಲ್ಲಿ ಶಬರಿಮಲೆಯ ತಂತ್ರಿಗಳ ಉಪಸ್ಥಿತಿಯಲ್ಲಿ ಗುರುಗಳಿಂದ ದೀಕ್ಷೆಯನ್ನು ಪಡೆದು ನಂತರ ಗುರುಸ್ವಾಮಿಯಾಗಬೇಕಾಗುತ್ತದೆ.
ದೀಕ್ಷೆ ಪಡೆದ ನಂತರ ಅಲ್ಲಿಗೆ ತನ್ನ ಕರ್ತವ್ಯವನ್ನು ಕೈಬಿಡುವಂತಿಲ್ಲ. ಪ್ರತೀ ವರ್ಷ ಒಬ್ಬ ಕನ್ನಿ ಸ್ವಾಮಿಯೊಂದಿಗೆ ಶಬರಿಮಲೆಗೆ ಹೋಗಬೇಕಾಗುತ್ತದೆ. ತನ್ನ ಶಿಷ್ಯರ ಯಾತ್ರೆಯ ಎಲ್ಲಾ ಜವಬ್ದಾರಿಗಳು, ನೀತಿ – ನಿಯಮಗಳು ಗುರುಸ್ವಾಮಿಯ ಮೇಲಿರುತ್ತದೆ. ಈ ಗುರುಸ್ವಾಮಿಯವರ ಕೈಯಿಂದ ಇತರೆ ವ್ರತಧಾರಿಗಳು ಮಾಲಾಧಾರಣೆ ಮಾಡಿಕೊಂಡು, ಗುರುಸ್ವಾಮಿ ಬೋಧಿಸಿದ ನೀತಿ ನಿಯಮಗಳನ್ನು ಪಾಲಿಸಿಕೊಂಡು ವ್ರತಾಚರಣೆ ಮಾಡಬೇಕಾಗುತ್ತದೆ.
ಜೀವನ ಶೈಲಿ: ಒಂದು ಬಾರಿ ಮಾಲೆ ಹಾಕಿ ಅಯ್ಯಪ್ಪ ಸ್ವಾಮಿಯ ಭಕ್ತರಾದರೆ ಅವರು ಯಾವುದೇ ಕಾರಣಕ್ಕೂ ಮಾಂಸಾಹಾರವನ್ನು ಸೇವಿಸುವಂತಿಲ್ಲ. ಕಾಲಿಗೆ ಚಪ್ಪಲಿಯನ್ನು ಹಾಕುವಂತಿಲ್ಲ, ಬರಿಗಾಲಿನಲ್ಲೇ ನಡೆಯವೇಕು. ಹಾಸಿಗೆ ಮೇಲೆ ಮಲಗುವಂತಿಲ್ಲ, ನೆಲದ ಮೇಲೆ ಮಲಗಬೇಕು. ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ವ್ರತಧಾರಿಗಳು ಕೈಯಲ್ಲಿ ತುಳಸಿ ಎಲೆಗಳನ್ನು ಇಟ್ಟುಕೊಂಡಿರಬೇಕು. ಯಾವುದೇ ಕಾರಣಕ್ಕೂ ತಲೆಗೆ ಮತ್ತು ದೇಹಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳಬಾರದು. ಒಟ್ಟಿನಲ್ಲಿ ಈ ಸಮಯದಲ್ಲಿ ಆಡಂಭರದ ಬದುಕಿನಿಂದ ಅತ್ಯಂತ ಸರಳ ಜೀವನಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.
ಬಟ್ಟೆ: ಇಷ್ಟೆಲ್ಲಾ ಕಠಿಣ ನಿಯಮಗಳನ್ನು ಪಾಲಿಸಿದ ಬಳಿಕ ಇರುಮುಡಿ ಹೊತ್ತು ಶಬರಿಮಲೆಯತ್ತ ಸಾಗುತ್ತಾರೆ. ಭಕ್ತರು ಕಡ್ಡಾಯವಾಗಿ ಕಪ್ಪು ಬಟ್ಟೆಯನ್ನು, ಕೇಸರಿ ಬಟ್ಟೆಯನ್ನು ಮಾತ್ರ ಧರಿಸಿ ಹಣೆಗೆ ಗಂಧವನ್ನು ಹಚ್ಚಿಕೊಂಡಿರಬೇಕು. ದೇವಸ್ಥಾನಕ್ಕೆ ಹೋಗುವಾಗ ಜೋಳಿಗೆಯನ್ನು ಹಿಡಿದುಕೊಂಡು ಹೋಗಬೇಕು. ಅಯ್ಯಪ್ಪ ವ್ರತಧಾರಿಗಳು ಧರಿಸುವ ಜೋಳಿಗೆಯಲ್ಲೂ ಕೆಲವೊಂದು ನಿಯಮಗಳಿವೆ. ದೇವಸ್ಥಾನಕ್ಕೆ ಮೊದಲಬಾರಿ ಹೋಗುವ ಭಕ್ತರು ಕೆಂಪು ಬಣ್ಣದ ಜೋಳಿಗೆ ಹೊಂದಿರಬೇಕು. ಮೂರನೇ ಬಾರಿ ದೇಗುಲಕ್ಕೆ ಭೇಟಿ ನೀಡುವರು ನೀಲಿ ಜೋಳಿಗೆ ಈಗಾಗಲೇ ಅನೇಕ ಬಾರಿ ಹೋದವರಿಗೆ ಕೇಸರಿ ಬಣ್ಣದ ಜೋಳಿಗೆ ನೀಡುವ ಕ್ರಮವಿದೆ.