ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದಲ್ಲಿ ನಡೆದ ಒಂಟಿ ಮಹಿಳೆಯ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಫ್ಲೋರಿನ್ ಮಚಾದೋ ಎಂಬ ಒಂಟಿ ಮಹಿಳೆ ಕೊಲೆ ಕಾರ್ಕಳದ ಕುಕ್ಕುಂದೂರಿನಲ್ಲಿ ನಡೆದಿತ್ತು. ಪ್ರಕರಣ ಬೆನ್ನತ್ತಿದ ಕಾರ್ಕಳ ಪೊಲೀಸರು ಮಹಾರಾಷ್ಟ್ರದ ಪನ್ವೇಲ್ ರೈಲು ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಈದು ಗ್ರಾಮದ ಹೊಸ್ಮಾರಿನ ಮೊಹಮ್ಮದ್ ರಿಯಾಜ್ ಆಗಿದ್ದು, ಈತ ದುಬೈಯಲ್ಲಿ ಪಾಸ್‍ಪೋರ್ಟ್, ವೀಸಾ ಕೊಡಿಸುವ ಏಜೆನ್ಸಿಯಲ್ಲಿ ಉದ್ಯೋಗಿಯಾಗಿದ್ದ ಎಂದು ತಿಳಿದು ಬಂದಿದೆ.
Advertisement
ಇವರಿಬ್ಬರಿಗೂ ಫೇಸ್‍ಬುಕ್ ಮೂಲಕ 5 ವರ್ಷಗಳಿಂದ ಪರಿಚಯವಿದ್ದು, ತುಂಬಾ ಆತ್ಮೀಯವಾಗಿ ಹಣಕಾಸಿನ ವ್ಯವಹಾರದಲ್ಲಿ ಮುಂದುವರಿದಿದ್ದರು. ಆರೋಪಿ ರಿಯಾಜ್‍ನಿಂದ ಫ್ಲೋರಿನ್ 13 ಲಕ್ಷದಷ್ಟು ಸಾಲ ಪಡೆದು ಲೇವಾದೇವಿಗೆ ವಿನಿಯೋಗಿಸಿದ್ದಳು. ಆಕೆ ಹಣ ಮರುಪಾವತಿ ಮಾಡದ ಕಾರಣ ಆಗಾಗ ಅವರಿಬ್ಬರ ನಡುವೆ ಜಗಳ ನಡೆದಿತ್ತು. ಶನಿವಾರ ರಾತ್ರಿ ಆತ ಮತ್ತೆ ಫ್ಲೋರಿನ್ ಮನೆಗೆ ಹಣ ವಸೂಲಿಗಾಗಿ ಬಂದಿದ್ದ, ಆ ವೇಳೆ ಹಣ ನೀಡದೇ ಇದ್ದಾಗ ಆಕೆಯನ್ನು ಚಾಕುವಿನಿಂದ ಇರಿದಿದ್ದಾನೆ. ಆಕೆಯ ಮನೆಯಲ್ಲಿದ್ದ ಚಿನ್ನಾಭರಣ, ನಗದು, ಮೊಬೈಲ್ ಹಾಗೂ ಸ್ಕೂಟರ್ ತೆಗೆದುಕೊಂಡು ಪರಾರಿಯಾಗಿದ್ದಾನೆ.
Advertisement
ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು, ಆತನ ಮೊಬೈಲ್ ನೆಟ್‍ವರ್ಕ್ ಆಧಾರದಲ್ಲಿ ಆರೋಪಿ ಅಜ್ಮೀರ್‍ದಲ್ಲಿದ್ದಾನೆಂದು ತಿಳಿಯುತ್ತದೆ. ತಕ್ಷಣವೇ ರೈಲ್ವೆ ನಿಲ್ದಾಣದಲ್ಲಿ ಮಾಹಿತಿ ಕಲೆ ಹಾಕಿದ ಪೊಲೀಸರು, ಆತ ಅಹಮದಾಬಾದ್‍ನಿಂದ ಮುಂಬೈ ಮೂಲಕ ಮಂಗಳೂರಿಗೆ ರೈಲಿನಲ್ಲಿ ಬರುತ್ತಿರುವುದಾಗಿ ಖಚಿತ ಮಾಹಿತಿ ಪಡೆದು ಪನ್ವೇಲ್ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.