ನ್ಯಾಯ ಕೇಳಲು ಬಂದಿದ್ದ ಮಹಿಳೆಗೆ ಭ್ರಷ್ಟಾಚಾರದಿಂದ ವ್ಯವಸ್ಥೆ ಬೆತ್ತಲೆಯಾಗಿದೆ ನನ್ನಿಂದ ಆಗಲ್ಲ ಅಂದಿದ್ರು ಉಗ್ರಪ್ಪ!

Public TV
2 Min Read
UGRAPPA CONGRESS

ಬಳ್ಳಾರಿ: ರಾಜ್ಯದ 5 ಕ್ಷೇತ್ರಗಳಲ್ಲಿ ಉಪಚುನಾವಣೆ ಪ್ರಚಾರ ಜೋರಾಗಿ ಸಾಗುತ್ತಿದೆ. ಈ ಬೆನ್ನಲ್ಲೇ ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಶಿವಮೊಗ್ಗ ಮೂಲದ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಜೊತೆಗೆ ಬಿಜೆಪಿಯವರಿಗೆ ಮಹಿಳೆಯ ಆರೋಪ ಹೊಸ ಅಸ್ತ್ರವಾಗಿ ಪರಿಣಮಿಸಲಿದೆ.

ಮಹಿಳೆಯೊಬ್ಬರು ಇಂದು ಸುದ್ದಿಗೋಷ್ಠಿ ಮೂಲಕ ಬಳ್ಳಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಮಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಡುವಾಗ, ನಮ್ಮ ವ್ಯವಸ್ಥೆ ಭ್ರಷ್ಟಾಚಾರದಿಂದ ಬೆತ್ತಲೆಯಾಗಿದೆ. ನೀವು ರಾಜಿ ಮಾಡಿಕೊಳ್ಳಿ ಎಂದು ಉಗ್ರಪ್ಪ ಅಂದು ಸಲಹೆ ನೀಡಿದ್ದರು ಎಂದು ಮಹಿಳೆ ದೂರಿದ್ದಾರೆ.

ಏನಿದು ಪ್ರಕರಣ?:
ನನ್ನ ಮಗಳ ಮೇಲೆ ಚಿಕ್ಕಪ್ಪನೇ ಲೈಂಗಿಕ ದೌರ್ಜನ್ಯ ನಡೆಸಿದ್ದ. ಆತನನ್ನು ಪೋಕ್ಸೋ ಕಾಯ್ದೆ ಅಡಿ ಪೊಲೀಸರು ಬಂಧಿಸಿದ್ದರು. ಆರೋಪಿ ಜೈಲಿನಿಂದ ಹೊರ ಬರಲು 9 ಬಾರಿ ಜಾಮೀನಿಗೆ ಬೇಡಿಕೆ ಇಟ್ಟಿದ್ದ. ಆದರೂ ಆತನಿಗೆ ಜಾಮೀನು ಸಿಕ್ಕಿರಲಿಲ್ಲ. ಪ್ರಕರಣದ ವಿಚಾರವಾಗಿ ನಾನು ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷರಾಗಿರುವ ವಿ.ಎಸ್.ಉಗ್ರಪ್ಪ ಅವರನ್ನು 2016ರಲ್ಲಿ ಭೇಟಿ ಮಾಡಿದ್ದೆ. ಮೊದಲಿಗೆ ನನಗೆ ಸಹಾಯ ಮಾಡಿದರು. ಆದರೆ ನಂತರದಲ್ಲಿ ಸರಿಯಾದ ಮಾರ್ಗದರ್ಶನ ನೀಡಲೇ ಇಲ್ಲ ಎಂದು ಮಹಿಳೆ ಆರೋಪಿಸಿದರು.

vs ugrappa

ನಂತರದ ದಿನಗಳಲ್ಲಿ ಏಕಾಂಗಿ ಹೋರಾಟ ನಡೆಸಿದ್ದೆ. ಒಂದು ದಿನ ಉಗ್ರಪ್ಪ ಅವರು ಬೆಳವಂಗಲ ಬಳಿ ಕರೆದುಕೊಂಡು ಹೋಗಿದ್ದರು. ಆಗ ಕೇಸ್ ವಾಪಸ್ ತೆಗೆದುಕೊಳ್ಳಿ ಅಂತ ಉಗ್ರಪ್ಪ ಬೇಡಿಕೆ ಇಟ್ಟರು. ಅಷ್ಟೇ ಅಲ್ಲದೆ ಹೈಕಮಾಂಡ್‍ನಿಂದ ಒತ್ತಡವಿದೆ. ನೀವು ಪ್ರಕರಣವನ್ನು ಹಿಂದಕ್ಕೆ ಪಡೆಯಲೇ ಬೇಕು. ನಮ್ಮ ವ್ಯವಸ್ಥೆ ಭ್ರಷ್ಟಾಚಾರದಿಂದ ಬೆತ್ತಲೆಯಾಗಿದೆ. ಈ ಪ್ರಕರಣದಲ್ಲಿ ಸಹಾಯ ಮಾಡಲು ಸಾಧ್ಯವಿಲ್ಲ. ನಾನು ಪೋಸ್ಟ್ ಮ್ಯಾನ್ ಅಷ್ಟೇ. ನಿಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೇಸ್ ವಾಪಸ್ ತೆಗೆದುಕೊಳ್ಳಿ ಎಂದು ಉಗ್ರಪ್ಪ ತಿಳಿಸಿದ್ದರು ಅಂತ ಮಹಿಳೆ ದೂರಿದರು.

ನ್ಯಾಯಕ್ಕಾಗಿ ಕಳೆದ ಒಂದೂವರೆ ವರ್ಷದಿಂದ ನಾನು ಹೋರಾಟ ಮಾಡುತ್ತಿರುವೆ. ಈಗ ಮಾಧ್ಯಮಗಳ ಮುಂದೆ ನಿಂತಿರುವೆ. ನನಗೆ ನ್ಯಾಯ ಬೇಕು. ಒಂದು ಪುಟ್ಟ ಮಗುವಿಗೆ ನ್ಯಾಯ ಕೊಡಿಸಲು ಸಾಧ್ಯವಾಗದ ಉಗ್ರಪ್ಪನವರು ಹೇಡಿಯಂತೆ ನಡೆದುಕೊಂಡಿದ್ದಾರೆ. ಇಂತವರನ್ನ ಬಳ್ಳಾರಿಯಲ್ಲಿ ಚುನಾವಣೆಗೆ ನಿಲ್ಲಿಸಿದ್ದಾರೆ. ಬಳ್ಳಾರಿ ಮತದಾರರು ಇಂಥ ನಾಯಕರನ್ನು ಆಯ್ಕೆ ಮಾಡಿ ಕಳಿಸಬೇಕಾ ಅಂತ ಯೋಚನೆ ಮಾಡಲಿ ಎಂದು ಕಿಡಿಕಾರಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

MNG ALVAS UGRAPPA 6

Share This Article
Leave a Comment

Leave a Reply

Your email address will not be published. Required fields are marked *