ಬೆಂಗಳೂರು: ರಾಜ್ಯದೆಲ್ಲೆಡೆ ಈಗ ಚಳಿಯೋ ಚಳಿ. ಉತ್ತರ ಭಾರತದಿಂದ ದಕ್ಷಿಣದ ಕಡೆಗೆ ಶೀತಗಾಳಿ ಬೀಸುತ್ತಿರುವುದರಿಂದ ರಾಜ್ಯದಲ್ಲೂ ಈಗ ಭಯಂಕರ ಚಳಿ ಆರಂಭವಾಗಿದೆ.
ಉತ್ತರ ಕರ್ನಾಟಕದಲ್ಲಿ ಭೀಕರ ಚಳಿಗೆ ಜನ ಹೈರಾಣಾಗಿದ್ದು, ಜನವರಿ 10ರವರೆಗೂ ಚಳಿ ಇದೇ ರೀತಿ ಮುಂದುವರಿಯಲಿದೆ. ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಚಳಿ ಹೆಚ್ಚಾಗಿದ್ದು, 10 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. 2012ರ ನಂತರ ಮೊದಲ ಬಾರಿಗೆ ಈ ರೀತಿಯ ತಾಪಮಾನ ದಾಖಲಾಗಿದೆ.
Advertisement
Advertisement
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಸಂಸ್ಥೆ ಯ ನಿರ್ದೇಶಕ ಡಾ ಜಿ ಎಸ್ ಶ್ರೀನಿವಾಸ ರೆಡ್ಡಿ ಪ್ರತಿಕ್ರಿಯಿಸಿ, ಬುಧವಾರ ಬೆಂಗಳೂರಿನ ಉತ್ತರ ಭಾಗದ ಹಲವು ಪ್ರದೇಶಗಳಲ್ಲಿ 9-11 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದರೆ, ದಕ್ಷಿಣ ಮತ್ತು ಕೇಂದ್ರ ಭಾಗದಲ್ಲಿ 12 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಹೇಳಿದ್ದಾರೆ.
Advertisement
ತಿಂಗಳ ಹಿಂದೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಪೆಥಾಯ್ ಚಂಡಮಾರುತ ಸೃಷ್ಟಿಯಾಗಿ ಜನ ಕೊರೆವ ಚಳಿಗೆ ನಡುಗುವಂತಾಗಿತ್ತು. ಈಗ ಶೀತಮಾರುತದ ಪ್ರಭಾವದಿಂದ ಮತ್ತೆ ಜನ ಚಳಿಗೆ ನಡಗುವ ಸ್ಥಿತಿ ನಿರ್ಮಾಣವಾಗಿದೆ.
Advertisement
ಬೆಂಗಳೂರಿನಲ್ಲಿ ಬೆಳಗಿನ ಜಾವ ನಾಲ್ಕು ಗಂಟೆಯಿಂದ ಎಂಟು ಗಂಟೆವರೆಗಿನ ತಾಪಮಾನ ಕನಿಷ್ಠ ಕಳೆದ ಎರಡು ದಿನಗಳಿಂದ 11 ಡಿಗ್ರಿ ಸೆಲ್ಸಿಯಸ್‍ವರೆಗೆ ತಲುಪಿದೆ. ಚಳಿಯಿಂದ ಬೆಳಗ್ಗೆ ಮತ್ತು ಸಂಜೆ ಮನೆಯಿಂದ ಹೊರಬರಲು ಜನ ಹಿಂದೇಟು ಹಾಕುತ್ತಿದ್ದಾರೆ. ಹಗಲಿನಲ್ಲೂ ತಂಪಾದ ವಾತಾವರಣ ನಿರ್ಮಾಣವಾಗಿದ್ದು ಜನ ಜಾಕೆಟ್, ಸ್ವೆಟರ್ ಹಾಕಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.
ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಲ್ಲಿ ಚಳಿಯ ತೀವ್ರತೆ ಹೆಚ್ಚಿರುತ್ತದೆ. ಆದರೆ ಈ ವರ್ಷ ಇದು ಕನಿಷ್ಠ ಮಟ್ಟಕ್ಕೆ ತಲುಪಿದೆ ಎಂದೇ ಹೇಳಲಾಗುತ್ತಿದೆ. ನಾಲ್ಕೈದು ದಿನದ ಹಿಂದೆ ಬೆಂಗಳೂರಿನಲ್ಲಿ 15-16 ಡಿಗ್ರಿ ಸೆಲ್ಸಿಯಸ್‍ನಷ್ಟಿದ್ದ ತಾಪಮಾನ ಎರಡು ದಿನಗಳಿಂದ 10-11 ಡಿಗ್ರಿಗೆ ತಲುಪಿದೆ. ಉತ್ತರ ಕರ್ನಾಟಕದಲ್ಲೂ ಚಳಿ ಜೋರಿದ್ದು ಹಲವು ಪ್ರದೇಶಗಳಲ್ಲಿ 14, 15 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಜಿನ ಮುಸುಕಿನಾಟದಿಂದ ರಸ್ತೆ ಸರಿಯಾಗಿ ಗೋಚರಿಸದ ಪರಿಣಾಮ ವಾಹನ ಚಲಾಯಿಸಲು ಸವಾರರು ಹರಸಾಹಸ ಪಡುತ್ತಿದ್ದಾರೆ. ಬೆಳಗ್ಗೆ ವಾಕಿಂಗ್ ಹೋಗುವವರು ತಲೆಗೆ ಟೋಪಿ, ಸ್ವೆಟರ್ ಧರಿಸಿ ವಾಕ್ ಮಾಡುತ್ತಿದ್ದಾರೆ.
ಎಲ್ಲಿ ಎಷ್ಟು ತಾಪಮಾನ?
* ಆಗುಂಬೆ – 15 ಡಿಗ್ರಿ ಸೆಲ್ಸಿಯಸ್
* ಬೀದರ್ – 13 ಡಿಗ್ರಿ ಸೆಲ್ಸಿಯಸ್
* ಧಾರವಾಡ – 14 ಡಿಗ್ರಿ ಸೆಲ್ಸಿಯಸ್
* ವಿಜಯಪುರ – 15 ಡಿಗ್ರಿ ಸೆಲ್ಸಿಯಸ್
* ಹಾವೇರಿ – 14 ಡಿಗ್ರಿ ಸೆಲ್ಸಿಯಸ್
* ಬೆಳಗಾವಿ – 14 ಡಿಗ್ರಿ ಸೆಲ್ಸಿಯಸ್
* ಶಿವಮೊಗ್ಗ – 14 ಡಿಗ್ರಿ ಸೆಲ್ಸಿಯಸ್
* ಹಾಸನ – 12 ಡಿಗ್ರಿ ಸೆಲ್ಸಿಯಸ್
* ಮೈಸೂರು – 13 ಡಿಗ್ರಿ ಸೆಲ್ಸಿಯಸ್
* ಬೆಂಗಳೂರು – 11 ಡಿಗ್ರಿ ಸೆಲ್ಸಿಯಸ್
ಮಹಾನಗರಗಳಲ್ಲಿ ಎಷ್ಟು?
ದೆಹಲಿ 8 ಡಿಗ್ರಿ ಸೆಲ್ಸಿಯಸ್
ಕೋಲ್ಕತ್ತಾ 12 ಡಿಗ್ರಿ ಸೆಲ್ಸಿಯಸ್
ಮುಂಬೈ 21 ಡಿಗ್ರಿ ಸೆಲ್ಸಿಯಸ್
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv